ADVERTISEMENT

ಪೊಲೀಸ್‌ ವೈಫಲ್ಯಕ್ಕೆ ಹೈಕೋರ್ಟ್ ಅತೃಪ್ತಿ

ಯಳ್ಳೂರ ನಾಮಫಲಕ ತೆರವು ವಿವಾದ

​ಪ್ರಜಾವಾಣಿ ವಾರ್ತೆ
Published 29 ಜುಲೈ 2014, 7:49 IST
Last Updated 29 ಜುಲೈ 2014, 7:49 IST
ಪೊಲೀಸ್‌ ವೈಫಲ್ಯಕ್ಕೆ ಹೈಕೋರ್ಟ್ ಅತೃಪ್ತಿ
ಪೊಲೀಸ್‌ ವೈಫಲ್ಯಕ್ಕೆ ಹೈಕೋರ್ಟ್ ಅತೃಪ್ತಿ   

ಬೆಂಗಳೂರು: ಬೆಳಗಾವಿ ಜಿಲ್ಲೆ ಯಳ್ಳೂರ ಗ್ರಾಮದಲ್ಲಿ ‘ಮಹಾರಾಷ್ಟ್ರ ರಾಜ್ಯ’ ಎಂಬ ನಾಮಫಲಕ ಮರು­ಸ್ಥಾಪನೆ ಹಾಗೂ ಅದಕ್ಕೆ  ಸಂಬಂಧಿಸಿದ ವಿದ್ಯಮಾನಗಳ ಬಗ್ಗೆ  ಹೈಕೋರ್ಟ್‌ ಸೋಮವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಯಳ್ಳೂರಿನಲ್ಲಿ ‘ಮಹಾರಾಷ್ಟ್ರ ರಾಜ್ಯ, ಯಳ್ಳೂರ’ ಎಂದು ಹಾಕಿದ್ದ  ನಾಮ­ಫಲಕ ತೆರವು ಮಾಡಿಸಲು ಕೋರಿದ್ದ  ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯ­ಮೂರ್ತಿ ಎನ್‌.ಕುಮಾರ್‌ ಹಾಗೂ ಬಿ.ಮನೋಹರ ಅವರಿದ್ದ ಪೀಠ ಮುಂದುವರಿಸಿತು.

ಅರ್ಜಿದಾರರ ಪರ ವಕೀಲ ಬಿ.ಎಸ್‌.­ಹಾದಿಮನಿ ಅವರು,  ನಾಮಫಲಕ ತೆರ­ವಿಗೆ ಹೈಕೋರ್ಟ್‌ ಆದೇಶಿಸಿದ ನಂತರ ಯಳ್ಳೂರ ಹಾಗೂ ಬೆಳಗಾವಿ ಜಿಲ್ಲೆ­ಯಲ್ಲಿ ನಡೆಯುತ್ತಿರುವ ವಿದ್ಯ­ಮಾನ­ಗಳನ್ನು ಪೀಠದ ಗಮನಕ್ಕೆ ತಂದರು.
‘ಅಲ್ಲಿ ನಾಮಫಲಕ ತೆರವುಗೊಳಿಸಿದ ನಂತರವೂ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ತನ್ನ ಪುಂಡಾಟಿಕೆ ಮುಂದುವರಿಸಿದೆ. ಯಳ್ಳೂರ ಮಾತ್ರ­ವಲ್ಲದೆ ಗಡಿಯೊಳಗಿನ ಇನ್ನೂ ಕೆಲ ಗ್ರಾಮಗಳಲ್ಲೂ ‘ಮಹಾರಾಷ್ಟ್ರ ರಾಜ್ಯ’ ಎಂಬ ನಾಮಫಲಕಗಳನ್ನು ಹಾಕಲಾ­ಗಿದೆ’ ಎಂದು ವಿವರಿಸಿದರು.

ಈ ವಿವರಣೆ ಕೇಳಿದ ಬಳಿಕ  ನ್ಯಾಯ­ಪೀಠವು ಪೊಲೀಸರ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತಲ್ಲದೆ, ‘ಏನು ಮಾಡುತ್ತಿದ್ದೀರಿ’ ಎಂದು ಸರ್ಕಾರಿ ವಕೀಲರನ್ನು ಪ್ರಶ್ನಿಸಿತು. ಆಗ ಸರ್ಕಾರಿ ವಕೀಲರು, ‘ಸರ್ಕಾರ ಸೂಕ್ತ ಕ್ರಮ ಕೈಗೊಂಡಿದೆ’ ಎಂದು ತಿಳಿಸಿದರಾದರೂ ಪೀಠ ಅದಕ್ಕೆ ಅತೃಪ್ತಿ ವ್ಯಕ್ತಪಡಿಸಿ ವಿಚಾರಣೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.