ADVERTISEMENT

ಪೊಲೀಸ್ ಬಲೆಗೆ ನಕಲಿ ಕುಲಪತಿ

ನಿವೃತ್ತ ಐಎಎಸ್ ಅಧಿಕಾರಿಗೂ ಕೆಲಸ ಕೊಟ್ಟಿದ್ದ ವಂಚಕ!

​ಪ್ರಜಾವಾಣಿ ವಾರ್ತೆ
Published 26 ಜೂನ್ 2016, 22:30 IST
Last Updated 26 ಜೂನ್ 2016, 22:30 IST
-ಸಂತೋಷ್
-ಸಂತೋಷ್   

ಬೆಂಗಳೂರು: ಪ್ಯಾರಾ ಮೆಡಿಕಲ್ ಹಾಗೂ ನರ್ಸಿಂಗ್ ಕಾಲೇಜುಗಳನ್ನು ತೆರೆಯಲು ವಿಶ್ವವಿದ್ಯಾಲಯದಿಂದ ಅನುಮತಿ ನೀಡಿಸುವುದಾಗಿ ನಂಬಿಸಿ, ದೇಶದ 44 ಶಿಕ್ಷಣ ಸಂಸ್ಥೆಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ನಕಲಿ ಕುಲಪತಿ ಈಗ ಬೆಂಗಳೂರಿನ ಜೆ.ಪಿ.ನಗರ ಪೊಲೀಸರ ಅತಿಥಿಯಾಗಿದ್ದಾನೆ.

ಪಶ್ಚಿಮಬಂಗಾಳ ಮೂಲದ ಸಂತೋಷ್ ಲೋಹಾರ್ (35) ಬಂಧಿತ ಆರೋಪಿ. ಜೆ.ಪಿ.ನಗರದಲ್ಲಿ ಕಚೇರಿ ಹೊಂದಿದ್ದ ಈತ, ತನ್ನ ಸಹಾಯಕ್ಕೆ  ನಿವೃತ್ತ ಐಎಎಸ್‌ ಅಧಿಕಾರಿಯೊಬ್ಬರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ!

‘ಸಂತೋಷ್ ವಿರುದ್ಧ ‘ಚೆನ್ನೈನ ಏರಿಸ್ ಎಜುಕೇಷನ್‌ ಟ್ರಸ್ಟ್‌’ ಮುಖ್ಯಸ್ಥ ಟಿ.ಸಿ ಅರಿವಳಗನ್ ದೂರು ಕೊಟ್ಟಿದ್ದರು. ಜೂನ್ 23ರಂದು ಆರೋಪಿಯನ್ನು ಬಂಧಿಸಿ ₹ 9 ಲಕ್ಷ ನಗದು, ಕಾರು,  ಕ್ರೆಡಿಟ್–ಡೆಬಿಟ್ ಕಾರ್ಡ್‌ಗಳು ಹಾಗೂ  ನಕಲಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಆತ  ವಿವಿಧ ಬ್ಯಾಂಕ್‌ಗಳಲ್ಲಿ ಇಟ್ಟಿದ್ದ ₹27 ಲಕ್ಷವನ್ನೂ ಜಪ್ತಿ ಮಾಡಲಾಗಿದೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಎಸ್‌.ಡಿ.ಶರಣಪ್ಪ ತಿಳಿಸಿದರು.

ಎಲ್ಲವೂ ನಕಲಿ: ‘ಬಯೊ–ಕೆಮಿಕ್ ಗ್ರಾಂಟ್ ಕಮಿಷನ್’ ಹಾಗೂ ‘ಯುನಿವರ್ಸಿಟಿ ಆಫ್‌ ಬಯೋ ಕೆಮಿಕ್ ಹೆಲ್ತ್ ಸೈನ್ಸಸ್‌’ (ಯುಬಿಸಿಎಚ್‌ಎಸ್‌) ಎಂಬ ಹೆಸರುಗಳಲ್ಲಿ ವೆಬ್‌ಸೈಟ್ ಪುಟ ತೆರೆದಿದ್ದ ಸಂತೋಷ್, ಕಾಲೇಜುಗಳನ್ನು ಪ್ರಾರಂಭಿಸುವವರಿಗೆ ಅನುಮತಿ ನೀಡುವ ಅಧಿಕಾರ ಕೇಂದ್ರ ಸರ್ಕಾರ ತನಗೆ  ನೀಡಿದೆ ಎಂದು ಬರೆದುಕೊಂಡಿದ್ದ  ಎಂದು ತನಿಖಾಧಿಕಾರಿಗಳು ವಿವರಿಸಿದರು.

‘ಆರೋಪಿಯು ಇ–ಮೇಲ್ ಮೂಲಕ ಪ್ರತಿಷ್ಠಿತ ಕಾಲೇಜುಗಳ ಆಡಳಿತ ಮಂಡಳಿಗಳನ್ನು ಸಂಪರ್ಕಿಸುತ್ತಿದ್ದ. ಅಂತೆಯೇ ಚೆನ್ನೈನ ಅರಿವಳಗನ್ ಅವರಿಗೂ ಸಂದೇಶ ಕಳುಹಿಸಿದ್ದ. ಆತನ ಮಾತನ್ನು ನಂಬಿದ ಅವರು, ಕೇರಳದ ಅಟ್ಟಪಡಿ, ತಮಿಳುನಾಡಿನ ವಡಲೂರು, ಆಂಧ್ರಪ್ರದೇಶದ ಚಿತ್ತೂರು ಸೇರಿದಂತೆ ಮುಂತಾದೆಡೆ ಕಾಲೇಜು ಪ್ರಾರಂಭಿಸಲು ನಿರ್ಧರಿಸಿದ್ದರು. ಇದಕ್ಕೆ ಅನುಮತಿ ಕೋರಿ ಅರ್ಜಿಯನ್ನೂ ಸಲ್ಲಿಸಿದ್ದರು’.

‘ಆ ಅರ್ಜಿ ಬಂದ ನಂತರ ಆರೋಪಿ ಸಂತೋಷ್, ಸ್ಥಳ ಪರಿಶೀಲನೆಯ ನೆಪದಲ್ಲಿ ದೂರುದಾರರ ಜತೆಗೆ ಅವರು ಕಾಲೇಜು ಪ್ರಾರಂಭಿಸಲು ನಿರ್ಧರಿಸಿರುವ ಎಲ್ಲ ಸ್ಥಳಗಳಿಗೂ ಹೋಗಿ ಬಂದಿದ್ದ. ನಂತರ ಪ್ರಾಥಮಿಕ ಅನುಮೋದನೆ ಕೊಟ್ಟು, ₹ 78 ಲಕ್ಷ ಪಡೆದುಕೊಂಡಿದ್ದ’.

ಸಿಕ್ಕಿಬಿದ್ದ ಕಿಂಗ್‌ಪಿನ್: ‘ಇದೇ ಹೆಸರಿನ ವಿ.ವಿಯಿಂದ ಪಶ್ಚಿಮ ಬಂಗಾಳದ ಶಿಕ್ಷಣ ಸಂಸ್ಥೆಗೆ ವಂಚನೆಯಾಗಿರುವ ಬಗ್ಗೆ ಏಪ್ರಿಲ್ 24ರಂದು ಆಂಗ್ಲ ಪತ್ರಿಕೆಯೊಂದು ವರದಿ ಪ್ರಕಟಿಸಿತ್ತು. ಅಲ್ಲದೆ, ‘ಯುನಿವರ್ಸಿಟಿ ಆಫ್‌ ಬಯೋ ಕೆಮಿಕ್ ಹೆಲ್ತ್ ಸೈನ್ಸಸ್‌’ ಹಾಗೂ ‘ಬಯೊ–ಕೆಮಿಕ್ ಗ್ರಾಂಟ್ ಕಮಿಷನ್’ ಇವು ಸರ್ಕಾರದ ಅಧಿಕೃತ ಸಂಸ್ಥೆಗಳಲ್ಲ ಎಂಬ ವಿವರಗಳೂ ಆ ವರದಿಯಲ್ಲಿದ್ದವು’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಇದರಿಂದ ಅನುಮಾನಗೊಂಡ ಅರಿವಳಗನ್, ಕೂಡಲೇ ಸಂತೋಷ್‌ಗೆ ಕರೆ ಮಾಡಿದ್ದರು. ಆಗ ಆರೋಪಿ, ‘ಅದೆಲ್ಲ ಸುಳ್ಳು. ಕಾಲೇಜು ಪ್ರಾರಂಭಿಸಲು ನಾನು ಅನುಮತಿ ನೀಡಬಹುದು. ಇದಕ್ಕೆ ಎಲ್ಲ ಇಲಾಖೆಗಳಿಂದಲೂ ಅನುಮೋದನೆ ಪಡೆದಿದ್ದೇನೆ. ಪತ್ರಿಕೆಗಳಲ್ಲಿ ಬರುವ ವರದಿಗಳನ್ನು ನಂಬಬೇಡಿ. ಯಾವುದಕ್ಕೂ ಅಂಜದೆ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭಿಸಿ’ ಎಂದು ಅಭಯ ನೀಡಿದ್ದ.

ಇದಾದ ಬೆನ್ನಲ್ಲೇ ಮೇ 5ರಂದು ವಿ.ವಿಯ ಸಿಇಒ ಎಂದು ಹೇಳಿಕೊಂಡಿದ್ದ ಶ್ಯಾಮಲ್‌ ದತ್‌ ಎಂಬಾತನನ್ನು ಪಶ್ಚಿಮ ಬಂಗಾಳ ಪೊಲೀಸರು ಬಂಧಿಸಿದ್ದರು. ನಂತರ ಆ ಪ್ರಕರಣ ಸಿಬಿಐಗೆ ವರ್ಗವಾಯಿತು. ಆ ನಂತರ ಶ್ಯಾಮಲ್‌ ದತ್ ಹಾಗೂ ಸಂತೋಷ್‌ ಒಂದೇ ಜಾಲದವರು ಎಂಬುದು ಬಯಲಾಯಿತು.

ಈ ವಿಷಯ ತಿಳಿದ ಅರಿವಳಗನ್‌ ಅವರಿಗೆ, ತಾನೂ ವಂಚನೆಗೆ ಒಳಗಾಗಿರುವುದು ಗೊತ್ತಾಯಿತು. ಮರುದಿನವೇ ಅವರು ಜೆ.ಪಿ.ನಗರದಲ್ಲಿದ್ದ ಆರೋಪಿಯ ಕಚೇರಿಗೆ ತೆರಳಿದ್ದರು. ಆದರೆ, ಶ್ಯಾಮಲ್‌ ದತ್ ಬಂಧನವಾಗುತ್ತಿದ್ದಂತೆಯೇ ಈತ ಕಚೇರಿಗೆ ಬೀಗ ಜಡಿದಿದ್ದ.  ಹೀಗಾಗಿ ಅವರು ಆರೋಪಿ ವಿರುದ್ಧ ಜೆ.ಪಿ.ನಗರ ಠಾಣೆಗೆ ದೂರು ಕೊಟ್ಟಿದ್ದರು.

ಕಾಳೇನ ಅಗ್ರಹಾರ ಸಮೀಪದ ಎಂಎಲ್‌ಎ ಬಡಾವಣೆಯ ಅಪಾರ್ಟ್‌ಮೆಂಟ್‌ನಲ್ಲಿ ತಂಗಿದ್ದ ಸಂತೋಷ್‌ನನ್ನು, ಮೊಬೈಲ್ ಕರೆಗಳ ವಿವರ (ಸಿಡಿಆರ್) ಆಧರಿಸಿ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದರು.

ಆರು ಮಂದಿಯ ಶೋಧ: ‘ಎಂ–ಟೆಕ್ ಓದಿರುವ ಸಂತೋಷ್, 2004ರಲ್ಲಿ ನಗರಕ್ಕೆ ಬಂದು ವಿವಿಧ ಸಾಫ್ಟ್‌ವೇರ್ ಕಂಪೆನಿಗಳಲ್ಲಿ ಕೆಲಸ ಮಾಡಿದ್ದ. ಎರಡೂವರೆ ವರ್ಷಗಳ ಹಿಂದೆ ಆತನಿಗೆ ಶ್ಯಾಮಲ್‌ ದತ್‌ನ ಪರಿಚಯವಾಯಿತು. ಒಂದೂವರೆ ವರ್ಷ ವ್ಯವಸ್ಥಿತವಾಗಿ ಸಂಚು ರೂಪಿಸಿಕೊಂಡ ಆರೋಪಿಗಳು, ಕಳೆದ ಒಂದು ವರ್ಷದಿಂದ ಈ ದಂಧೆ ಪ್ರಾರಂಭಿಸಿದ್ದರು.

ಸಂತೋಷ್‌ನ ಸಹಚರರಾದ ಶಿವಕುಮಾರ್, ಬೋಜ್ ಬಾಬು, ಮಹೇಶ್, ಚಂದ್ರಶೇಖರ್, ಸುಬ್ರತೊ ದಾಸ್ ಹಾಗೂ ರಾಜೇಶ್ ಎಂಬುವರು ತಲೆಮರೆಸಿಕೊಂಡಿದ್ದಾರೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ವಂಚಕನ ಬಲೆಯಲ್ಲಿ 44 ಕಾಲೇಜುಗಳು: ರಾಜ್ಯದಲ್ಲಿರುವ 19 ಪ್ರತಿಷ್ಠಿತ ಕಾಲೇಜುಗಳು ಸೇರಿದಂತೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಒಡಿಶಾ ಹಾಗೂ ತೆಲಂಗಾಣದ 44 ಶಿಕ್ಷಣ ಸಂಸ್ಥೆಗಳು ಸಂತೋಷ್ ಹೆಣೆದ ವಂಚನೆಯ ಬಲೆಯಲ್ಲಿ ಸಿಲುಕಿಕೊಂಡಿವೆ.

‘ಕಾಲೇಜು ಪ್ರಾರಂಭಿಸಲು ಅನುಮತಿ ನೀಡುವ ನೆಪದಲ್ಲಿ ಈತ ₹ 2.3 ಕೋಟಿ ಸಂಗ್ರಹಿಸಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಆರೋಪಿ ಬಂಧನವಾದ ನಂತರ ವಂಚನೆಗೊಳಗಾದ ಒಬ್ಬೊಬ್ಬರೇ ಠಾಣೆಗೆ ಬಂದು ದೂರು ಕೊಡುತ್ತಿದ್ದಾರೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅನುಮಾನವೇ ಬರಲಿಲ್ಲ: ‘ಇತ್ತೀಚೆಗೆ ಕಾಲೇಜಿಗೆ ಬಂದಿದ್ದ ಸಂತೋಷ್, ತನ್ನನ್ನು ಕುಲಪತಿ ಎಂದು ಪರಿಚಯ ಮಾಡಿಕೊಂಡಿದ್ದರು. ಅವರ ಜತೆಗಿದ್ದವರು ಐಎಎಸ್ ಅಧಿಕಾರಿ ಎಂದು ಹೇಳಿಕೊಂಡಿದ್ದರು. ಅವರ ಕಾರಿನ ಮೇಲೆ ‘ಭಾರತ ಸರ್ಕಾರ’ ಎಂಬ ಫಲಕ ಇತ್ತು.  ಪ್ಯಾರಾ ಮೆಡಿಕಲ್ ಹಾಗೂ ನರ್ಸಿಂಗ್ ಕಾಲೇಜು ಪ್ರಾರಂಭಿಸಲು ಸಹಾಯ ಮಾಡುವುದಾಗಿ ಹೇಳಿದರು’ ಎಂದು ಸಾಗರ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಕೃಷ್ಣಮೂರ್ತಿ ತಿಳಿಸಿದರು.

‘ಇಡೀ ಕಾಲೇಜಿನ ಆವರಣವನ್ನು ಪರಿಶೀಲಿಸಿ ಹೋಗಿದ್ದ ಅವರು, ಹೊಸ ಕಾಲೇಜು ಪ್ರಾರಂಭಿಸಲು ‘ಅನುಮತಿ ಪತ್ರ’ವನ್ನೂ ಇ–ಮೇಲ್ ಮೂಲಕ ಕಳುಹಿಸಿದರು. ಅಲ್ಲದೆ, ಹಿರಿಯ ಅಧಿಕಾರಿಯೊಬ್ಬರನ್ನು ಭೇಟಿಯಾಗಲು ದೆಹಲಿಗೆ ಬರುವಂತೆ ಸೂಚಿಸಿದ್ದರು. ಎಲ್ಲ ಪ್ರಕ್ರಿಯೆಗಳು ವ್ಯವಸ್ಥಿತವಾಗಿ ನಡೆದ ಕಾರಣ, ನನಗೆ ಯಾವುದೇ ಅನುಮಾನ ಬರಲಿಲ್ಲ. ಆದರೆ, ಸಂತೋಷ್ ಮಹಾನ್ ವಂಚಕ ಎಂಬುದು  ಬಂಧಿಸಿದ ಬಳಿಕವೇ ಗೊತ್ತಾಯಿತು’ ಎಂದು ಹೇಳಿದರು.

ಸರ್ಕಾರಿ ಕಾರು ಎನ್ನುತ್ತಿದ್ದ
‘ಸಂತೋಷ್‌ ತನ್ನ ಕಾರಿನ ಮೇಲೆ ‘ಭಾರತ ಸರ್ಕಾರ’ ಎಂಬ ಫಲಕ ಹಾಗೂ ಕೆಂಪು ದೀಪ (ಬೀಕಾನ್) ಅಳವಡಿಸಿಕೊಂಡಿದ್ದ. ಅಲ್ಲದೆ, ತಾನು ಸರ್ಕಾರಿ ಅಧಿಕಾರಿ ಎಂದು ಹೇಳಿಕೊಳ್ಳಲು ವಿಸಿಟಿಂಗ್ ಕಾರ್ಡ್‌ಗಳನ್ನೂ ಮಾಡಿಸಿಕೊಂಡಿದ್ದ. ಇತ್ತೀಚೆಗೆ ಆರ್‌ಟಿಒ ಅಧಿಕಾರಿಗಳು ಕಾರನ್ನು ಅಡ್ಡಗಟ್ಟಿದ್ದಾಗ, ಅವೇ ದಾಖಲೆ ತೋರಿಸಿ ಹೋಗಿದ್ದ’ ಎಂದು ತನಿಖಾಧಿಕಾರಿಗಳು ತಿಳಿಸಿದರು.

ಕೆಲಸ ಬಿಟ್ಟ ಅಧಿಕಾರಿ
‘ಸಂತೋಷ್‌ನ ಅಧೀನದಲ್ಲಿ ಕೆಲಸ ಮಾಡುತ್ತಿದ್ದ ನಿವೃತ್ತ ಐಎಎಸ್ ಅಧಿಕಾರಿಗೆ ಆತನ ಅಕ್ರಮಗಳ ಬಗ್ಗೆ ಗೊತ್ತಿರಲಿಲ್ಲ. ಎರಡು ತಿಂಗಳ ಹಿಂದೆ ವಾಸ್ತವ ಅರಿತ ಅವರು, ಆ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಪ್ರಕರಣದಲ್ಲಿ ಅವರ ಕೈವಾಡವಿಲ್ಲ. ಸಂತೋಷ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗಿದೆ’ ಎಂದು ತನಿಖಾಧಿಕಾರಿಯೊಬ್ಬರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT