ADVERTISEMENT

ಪ್ರತಿಭಟನೆ ವೇಳೆ ರಕ್ತದಾನ ಮಾಡಿದ ವೈದ್ಯರು

ಶಿಷ್ಯವೇತನ ಹೆಚ್ಚಳಕ್ಕೆ ಆಗ್ರಹಿಸಿ ನಡೆಯುತ್ತಿರುವ ಮುಷ್ಕರ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2015, 19:51 IST
Last Updated 3 ಸೆಪ್ಟೆಂಬರ್ 2015, 19:51 IST

ಬೆಂಗಳೂರು: ಶಿಷ್ಯವೇತನ ಹೆಚ್ಚಳಕ್ಕೆ ಆಗ್ರಹಿಸಿ ಕರ್ನಾಟಕ ಸ್ಥಾನಿಕ ವೈದ್ಯರ ಸಂಘದ (ಸರಕಾರಿ ವೈದ್ಯಕೀಯ ಕಾಲೇಜುಗಳ ಗೃಹ ವೈದ್ಯ, ಸ್ನಾತಕೋತ್ತರಕ ಹಾಗೂ ಡಿಪ್ಲೊಮಾ) ಸದಸ್ಯರು ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ನಡೆಸುತ್ತಿರುವ ಪ್ರತಿಭಟನೆ ಗುರುವಾರ 4ನೇ ದಿನಕ್ಕೆ ಕಾಲಿಟ್ಟಿದೆ.

ಕರ್ತವ್ಯಕ್ಕೆ ಹಾಜರಾಗದೆ ವೈದ್ಯರು ಪ್ರತಿಭಟನೆ ನಡೆಸುತ್ತಿರುವುದರಿಂದ ಆಸ್ಪತ್ರೆಯಲ್ಲಿರುವ ರೋಗಿಗಳು ಸರಿಯಾದ ಚಿಕಿತ್ಸೆ ಇಲ್ಲದೆ ಪರದಾಡಬೇಕಾಯಿತು. ಪ್ರತಿಭಟನಾನಿರತ 200ಕ್ಕೂ ಹೆಚ್ಚು ವೈದ್ಯರು  ರಕ್ತದಾನ ಮಾಡಿದರು. ಜತೆಗೆ, ನೇತ್ರದಾನ ನೋಂದಣಿ ಕೆಲಸವನ್ನು ನಿರ್ವಹಿಸಿದರು.

‘ದೇಶದಲ್ಲೇ ಅತಿ ಕಡಿಮೆ ಶಿಷ್ಯ ವೇತನವನ್ನು ರಾಜ್ಯದ ಸ್ಥಾನಿಕ ವೈದ್ಯರು ಪಡೆಯುತ್ತಿದ್ದಾರೆ. ಸರ್ಕಾರ ನಮ್ಮ ಬೇಡಿಕೆಯನ್ನು ಪರಿಗಣಿಸಿ, ಶಿಷ್ಯ ವೇತನ ಹೆಚ್ಚಳಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಅಭಿಷೇಕ್ ಅವರು ಒತ್ತಾಯಿಸಿದರು. ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಬಧವಾರ ಭರವಸೆ ನೀಡಿದ್ದಾರೆ. ಅವರ ಮಾತಿಗೆ ಬೆಲೆ ಕೊಟ್ಟು ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯನ್ನು ಮುಂದೂಡಲಾಗಿದೆ’ ಎಂದು ತಿಳಿಸಿದರು.

ಕಿಮ್ಸ್‌ನಲ್ಲೂ ಪ್ರತಿಭಟನೆ: ಶಿಷ್ಯವೇತನ ಏರಿಕೆಗೆ ಆಗ್ರಹಿಸಿ ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಕಿಮ್ಸ್‌) ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 240 ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು, 13 ದಿನದಿಂದ ಕರ್ತವ್ಯಕ್ಕೆ ಹಾಜರಾಗದೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ವಿದ್ಯಾರ್ಥಿಯೊಬ್ಬರು, ‘ನಮಗೆ ಸಿಗುವುದು ಕೇವಲ ₹ 6 ಸಾವಿರ ಶಿಷ್ಯವೇತನ. ಅದನ್ನೂ ಕಳೆದ 15 ತಿಂಗಳಿಂದ ಪಾವತಿಸಿಲ್ಲ’ ಎಂದರು. ‘ಮೊದಲ ಎರಡು ದಿನ ತುರ್ತು ವಿಭಾಗದ ರೋಗಿಗಳಿಗೆ ಚಿಕಿತ್ಸೆ ನೀಡುತ್ತಲೇ ಪ್ರತಿಭಟಿಸಿದ್ದೇವೆ. ಆದರೂ, ಆಸ್ಪತ್ರೆಯ ಆಡಳಿತಾಧಿಕಾರಿಗಳು ನಮ್ಮ ಬೇಡಿಕೆಯನ್ನು ಆಲಿಸಿಲ್ಲ’ ಎಂದು ತಿಳಿಸಿದರು.

ಕಾಲೇಜು ನಡೆಸುವುದು ಹೇಗೆ?: ‘ನಮ್ಮದು ಅನುದಾನಿತ ಕಾಲೇಜು ಅಲ್ಲ. ಹಾಗಾಗಿ ಪ್ರತಿಭಟನಾನಿರತ ವಿದ್ಯಾರ್ಥಿಗಳ ಬೇಡಿಕೆ ಈಡೇರಿಕೆ ಅಸಾಧ್ಯ’ ಎಂದು ಹಿರಿಯ ಆಡಳಿತಾಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು. ‘ಸಿಇಟಿ ಅಭ್ಯರ್ಥಿಗಳಿಂದ ನಾವು ವರ್ಷಕ್ಕೆ ಕೇವಲ ₹ 36 ಸಾವಿರ ಶುಲ್ಕವನ್ನು ಸಂಗ್ರಹಿಸುತ್ತೇವೆ. ಆದರೆ, ಅವರು ₹ 25 ಸಾವಿರ ಶಿಷ್ಯವೇತನ ಪಾವತಿಸುವಂತೆ ಕೇಳುತ್ತಿದ್ದಾರೆ. ಇದು ಹೇಗೆ ಸಾಧ್ಯ?’ ಎಂದು ಅವರು ಪ್ರಶ್ನಿಸಿದರು.

‘ಸಂಸ್ಥೆಯಲ್ಲಿ ಒಟ್ಟು ₹ 3.6 ಕೋಟಿಯನ್ನು ಶುಲ್ಕದ ರೂಪದಲ್ಲಿ ಸಂಗ್ರಹಿಸಲಾಗುತ್ತದೆ. ಇಡೀ ಶುಲ್ಕವನ್ನು ಕೇವಲ ಶಿಷ್ಯವೇತನಕ್ಕೆ ಪಾವತಿಸಿದರೆ, ಸಿಬ್ಬಂದಿಗೆ ಸಂಬಳ ನೀಡುವುದಾದರೂ ಹೇಗೆ?’ ಎಂದು ಕೇಳಿದರು. ‘ಪ್ರತಿಭಟನೆಯಿಂದಾಗಿ ಇಂಟರ್ನ್‌ಶಿಫ್‌ ವಿದ್ಯಾರ್ಥಿಗಳು ಮತ್ತು ಹಿರಿಯ ವೈದ್ಯರು ಹೆಚ್ಚುವರಿ ಪಾಳಿಗಳಲ್ಲಿ ಕರ್ತವ್ಯ ನಿರ್ವಹಿಸುವ ಮೂಲಕ, ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.