ADVERTISEMENT

ಪ್ರಾಥಮಿಕ ಶಿಕ್ಷಣ ರಾಷ್ಟ್ರೀಕರಣವಾಗಲಿ

81ನೇ ಅಕ್ಷರ ಜಾತ್ರೆಯಲ್ಲಿ ಅಧ್ಯಕ್ಷ ಸಿದ್ದಲಿಂಗಯ್ಯ ಒತ್ತಾಯ

ಉದಯ ಯು.
Published 1 ಫೆಬ್ರುವರಿ 2015, 20:03 IST
Last Updated 1 ಫೆಬ್ರುವರಿ 2015, 20:03 IST

ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಪ್ರಧಾನ ವೇದಿಕೆ (ಶ್ರವಣಬೆಳಗೊಳ): ಅಖಿಲ ಭಾರತ 81ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಮೊದಲೇ ಸಾಹಿತಿ ದೇವನೂರ ಮಹಾದೇವ ಅವರು ಎತ್ತಿದ್ದ ‘ಪ್ರಾಥಮಿಕ ಶಿಕ್ಷಣದಲ್ಲಿ ಭಾಷಾ ಮಾಧ್ಯಮ’ ವಿಚಾರ ಈ ಬಾರಿಯ ಸಮ್ಮೇಳನದಲ್ಲಿ ಮತ್ತೆ ಮತ್ತೆ ಅನುರಣಿಸಿತು.

ಸಮ್ಮೇಳನದ ಸರ್ವಾಧ್ಯಕ್ಷ ಡಾ.ಸಿದ್ದ­ಲಿಂಗಯ್ಯ ಅವರು ಸಮ್ಮೇಳನದ ಉದ್ಘಾಟನಾ ಸಮಾರಂಭದ ಭಾಷಣ­ದಲ್ಲಿ ದೇವನೂರರ ವಾದ­ವನ್ನೇ ಪ್ರತಿಪಾದನೆ ಮಾಡುತ್ತ, ‘ಸಮಾನ­ತೆಯ ಸಮಾಜದ ಕನಸು ಸಾಕಾರವಾಗ­ಬೇಕಾ­ದರೆ ಪ್ರಾಥಮಿಕ ಶಿಕ್ಷಣ ರಾಷ್ಟ್ರೀಕರಣ­ವಾಗ­ಬೇಕು. ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯವಾಗಿ ‘ಕನ್ನಡ’ದಲ್ಲೇ ಕೊಡ­ಬೇಕು’ ಎಂದು ಪ್ರತಿ­ಪಾದಿಸಿದರು.

ಭಾಷಾ ನೀತಿಯ ಬಗ್ಗೆ ಸರ್ಕಾರ ಈವರೆಗೆ ಕೈಗೊಂಡ ಕ್ರಮಗಳನ್ನು ಶ್ಲಾಘಿಸಿದ ಸಿದ್ದ­ಲಿಂಗಯ್ಯ, ‘ಇದಿಷ್ಟೇ ಆದರೆ ಸಾಲದು, ಸರ್ಕಾರ ತನ್ನ ನಿಲು­ವಿಗೆ ಬದ್ಧವಾಗಿ, ಸುಪ್ರೀಂ ಕೋರ್ಟ್‌­ನಲ್ಲಿ ಸಮರ್ಥವಾಗಿ ವಾದ ಮಂಡಿಸಿ ಭಾಷಾ ಮಾಧ್ಯಮ ಜಾರಿಯಾಗುವಂತೆ ಮಾಡ­ಬೇಕು. ಈ ವಿಚಾರದಲ್ಲಿ ರಾಜ್ಯದ ಆರೂವರೆ ಕೋಟಿ ಕನ್ನಡಿಗರು ಮುಖ್ಯಮಂತ್ರಿಯ ಜೊತೆಗಿದ್ದಾರೆ’ ಎಂಬ ಭರವಸೆ ಮೂಡಿಸಿದರು. ಅಧ್ಯಕ್ಷರ ಮಾತುಗಳಿಗೆ ಸಭೆಯಲ್ಲಿದ್ದ ಸಾವಿರಾರು ಜನರು ಕರತಾಡನದ ಮೂಲಕ ಬೆಂಬಲ ಸೂಚಿಸಿದರು.

‘ಸಮಾನ ಮತ್ತು ಭಾಷಾ ಮಾಧ್ಯಮದ ಶಿಕ್ಷಣ ಜಾರಿಯಾದರೆ ಮಾಲಿಯ ಮತ್ತು ಮಂತ್ರಿಯ ಮಗ, ಭೂಮಾಲೀಕನ ಮತ್ತು ಜೀತಗಾರನ ಮಗ, ಪ್ರಧಾನಿಯ ಮತ್ತು ಪೌರ­ಕಾರ್ಮಿಕನ ಮಗ ಒಂದೇ ಕೊಠಡಿಯಲ್ಲಿ ಒಂದೇ ಬೆಂಚಿನಲ್ಲಿ ಕುಳಿತು ಪಾಠ ಕಲಿಯುವ ವಾತಾವರಣ ನಿರ್ಮಾಣ­ವಾಗುತ್ತದೆ. ವರ್ಣ­ರಹಿತ ಮತ್ತು ವರ್ಗರಹಿತ ಕರ್ನಾಟಕದ ನಿರ್ಮಾಣಕ್ಕೆ ಇದು ನಾಂದಿಯಾಗುತ್ತದೆ ಎಂದು ಸಿದ್ದಲಿಂಗಯ್ಯ ಪ್ರತಿಪಾದಿಸಿದರು.

‘ಕಳೆದ ಒಂದು ವರ್ಷದಲ್ಲಿ ಮುಚ್ಚಿ­ರುವ ಸರ್ಕಾರಿ ಶಾಲೆಗಳಿಗೆ ಹೋಲಿಸಿದರೆ ಅವುಗಳಿಗೆ ಮೂರು ಪಟ್ಟು ಅನುದಾನರಹಿತ ಖಾಸಗಿ ಶಾಲೆಗಳು ತಲೆ ಎತ್ತಿವೆ. ರಾಜ್ಯದಲ್ಲಿ ಕನ್ನಡ ಶಾಲೆ­ಗಳು ಮುಚ್ಚುತ್ತಿದ್ದರೆ, ದೂರದ ದುಬೈ­ನಲ್ಲಿ ಕನ್ನಡಿಗರು ತಮ್ಮ ಮಕ್ಕಳಿ­ಗಾಗಿ ಕನ್ನಡ ಶಾಲೆ ಆರಂಭಿಸಿ­ದ್ದಾರೆ. ಅವರು ಅಭಿನಂದನಾರ್ಹರು ಎಂದರು. ಭಾಷಣದಲ್ಲಿ ಭಾಷಾ ಮಾಧ್ಯಮ ಮತ್ತು ಸಮಾನ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ ಸಿದ್ದಲಿಂಗಯ್ಯ, ನೆಲ ಜಲದ ಸಮಸ್ಯೆಗಳಿಗೂ ಅಷ್ಟೇ ಒತ್ತು ನೀಡಿದರು.

‘ರಾಜ್ಯದಲ್ಲಿ ಕೆಲವು ಅಧಿಕಾರಿಗಳು ಇಂಗ್ಲಿಷ್‌ ಬಳಸುತ್ತಾರೆ ಕನ್ನಡದಲ್ಲಿ ತೊದಲುತ್ತಾರೆ. ಇಂಥ ಅಧಿಕಾರಿಗಳನ್ನು ವಾಪಸ್‌ ಕಳುಹಿಸ­ಬೇಕು. ಬೇರೆ ಭಾಷೆ­ಯಲ್ಲಿ ಟಿಪ್ಪಣಿ ಬರೆದಿರುವ ಕಡತಗಳನ್ನು ಸಚಿವರು ನಿರ್ದಾಕ್ಷಿಣ್ಯವಾಗಿ ವಾಪಸ್‌ ಕಳುಹಿಸಬೇಕು. ಬೆಂಗಳೂರಿನಲ್ಲಿ ಕನ್ನಡ ಜಾರಿಯಾದರೆ ರಾಜ್ಯದೆಲ್ಲೆಡೆ ಜಾರಿ­ಯಾ­ಗುತ್ತದೆ. ಸರ್ಕಾರ ರಾಜಧಾನಿ­ಯಲ್ಲಿ ಕನ್ನಡ ಬೆಳೆಸುವ ಕೆಲಸಕ್ಕೆ ಕೈಹಾಕಬೇಕು ಎಂದು ತಾಕೀತು ಮಾಡಿದರು.

ಒಡಕಿನ ಮಾತು ಸಲ್ಲ: ‘ಭಾಷಾವಾರು ರಾಜ್ಯ ರಚನೆಯಾ­ದಾಗ ಕೆಲವು ಸಮಸ್ಯೆಗಳು ಉಳಿದು­ಕೊಂಡಿವೆ. ಆದರೆ, ಪ್ರತ್ಯೇಕತೆಯ ಕೂಗು ಅದಕ್ಕೆ ಪರಿಹಾರವಲ್ಲ. ನಂಜುಂಡಪ್ಪ ಸಮಿತಿಯ ವರದಿಯನ್ನು ಕಾಲಮಿತಿ­ಯಲ್ಲಿ ಅನುಷ್ಠಾನ­ಗೊಳಿಸಿ­ದರೆ ಈ ಕೂಗನ್ನು ಶಮನ ಮಾಡ­ಬಹುದು. ಹಲವು ದಶಕಗಳ ಹೋರಾಟದ ಬಳಿಕ ಭೌಗೋಳಿಕವಾಗಿ ಒಂದಾಗಿರುವ ಕನ್ನಡಿಗರು, ಭಾವನಾತ್ಮಕವಾಗಿಯೂ ಒಂದಾಗ­ಬೇಕು. ರಾಜ್ಯ ಇಬ್ಭಾಗವಾದರೆ ನಾವು ಇನ್ನಷ್ಟು ದುರ್ಬಲರಾಗುತ್ತೇವೆ ಎಂದು ಸಿದ್ದಲಿಂಗಯ್ಯ ಹೇಳಿದರು.

ಮೌಢ್ಯತೆ ವಿರೋಧಿ ಕಾನೂನು ಜಾರಿ ಆಗಲಿ: ‘ಮಾನವನ ಘನತೆಯನ್ನು ಕುಗ್ಗಿಸುವ ಮೌಢ್ಯಾ­ಚರಣೆಯನ್ನು ನಾನು ವಿರೋಧಿ­ಸುತ್ತೇನೆ. ಮೌಢ್ಯ ಎಲ್ಲ ಜಾತಿ, ಧರ್ಮಗಳಲ್ಲೂ ಇವೆ. ಒಂದು ಧಾರ್ಮಿಕ ನಂಬಿಕೆ ಮನುಷ್ಯನಿಗೆ ಆತ್ಮಬಲ, ನೈತಿಕ ಶಕ್ತಿ ತುಂಬುವುದಾದರೆ ಅದನ್ನು ನಾನು ವಿರೋಧಿಸುವುದಿಲ್ಲ. ಆದರೆ, ನಮ್ಮಲ್ಲಿ ಅಮಾನವೀಯವಾದ ಅನೇಕ ಮೌಢ್ಯಾ­ಚರಣೆಗಳಿವೆ. ಅವುಗ­ಳನ್ನು ತಡೆಯಲು ಸರ್ಕಾರ ಮೌಢ್ಯ ವಿರೋಧಿ ಕಾಯ್ದೆಯನ್ನು ಜಾರಿಗೊಳಿಸಬೇಕು’ ಎಂದು ಸಿದ್ದಲಿಂಗಯ್ಯ ಒತ್ತಾಯಿಸಿದರು.

ಭಾಷೆ, ಸಾಹಿತ್ಯಕ್ಕಿಂತ ಹೆಚ್ಚಾಗಿ ಸಿದ್ದಲಿಂಗಯ್ಯ ಅವರು ನೆಲ ಜಲದ ಪ್ರಶ್ನೆಗೆ ಒತ್ತು ನೀಡಿದರು. ಅನೇಕ ಸಾಮಾಜಿಕ ಸಮಸ್ಯೆಗಳ ಬಗ್ಗೆ ತಮ್ಮ ಭಾಷಣದಲ್ಲಿ ಧ್ವನಿ ಎತ್ತಿದರು. ಅಸ್ಪೃಶ್ಯತೆ, ಮಹಿಳೆಯರ ಮೇಲಿನ ದೌರ್ಜನ್ಯ, ರೈಲ್ವೆ ಇಲಾಖೆಯಲ್ಲಿ ಆಗಿರುವ ಅನ್ಯಾಯ, ಕೇಂದ್ರ ಸರ್ಕಾರದ ನೀತಿಗಳು, ಆರೋಗ್ಯ, ನೀರಾವರಿ, ರೈತರ ಸಮಸ್ಯೆ, ಕೆರೆಗಳ ಸಂರಕ್ಷಣೆ, ಭೂ ಒತ್ತುವರಿ, ಗಿರಿಜನರ ಸಮಸ್ಯೆ, ಕೈಗಾರಿಕೀ­ಕರಣದ ಸಮಸ್ಯೆ –ಹೀಗೆ ಒಟ್ಟಾರೆ ರಾಜ್ಯದ ಸಮಸ್ಯೆ, ಸವಾಲುಗಳಿಗೆ ಧ್ವನಿಯಾದರು.

ಬಿಸಿಲಿನ ಶಿಕ್ಷೆ
ಗೌರವಯುತವಾಗಿ ಕರೆತರಬೇಕಿದ್ದ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ನಾ. ಡಿಸೋಜಾ ಅವರನ್ನು ಸಮ್ಮೇಳನ ನಡೆ­ಯುವ ಮೈದಾನದ ವಿಐಪಿ ಬಾಗಿಲಲ್ಲಿ ಒಳಬಿಡದೇ ಸುಮಾರು 45 ನಿಮಿಷ ಬಿಸಿಲಿನಲ್ಲಿ ನಿಲ್ಲಿಸಿದ ಪ್ರಸಂಗಕ್ಕೂ ಸಮ್ಮೇಳನ ಸಾಕ್ಷಿಯಾಯಿತು.

​ಮಹಾರಾಷ್ಟ್ರ ಪರ ನಿರ್ಣಯ
ಬೆಳಗಾವಿ:  ತಾಲ್ಲೂಕಿನ ಯಳ್ಳೂರಿನಲ್ಲಿ  ಭಾನು­ವಾರ ನಡೆದ 10ನೇ ಗ್ರಾಮೀಣ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಮಹಾರಾಷ್ಟ್ರ ಪರವಾಗಿ ನಾಲ್ಕು ವಿವಾದಾತ್ಮಕ ನಿರ್ಣಯಗಳನ್ನು ಅಂಗೀಕರಿಸಲಾಗಿದೆ.  

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.