ADVERTISEMENT

ಫೆಬ್ರುವರಿ 28ಕ್ಕೆ ಕಸಾಪ ಚುನಾವಣೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2015, 19:59 IST
Last Updated 30 ನವೆಂಬರ್ 2015, 19:59 IST

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಮತ್ತು ಜಿಲ್ಲಾ  ಘಟಕಗಳ ಅಧ್ಯಕ್ಷರ ಆಯ್ಕೆಗೆ ಫೆಬ್ರುವರಿ 28ರಂದು ಮತದಾನ ನಡೆಯಲಿದೆ.

ಅದೇ ದಿನ ಸಂಜೆ ನಾಲ್ಕು ಗಂಟೆ ನಂತರ ಎಣಿಕೆ ನಡೆಯಲಿದ್ದು,  ಮಾರ್ಚ್‌ 2ರಂದು ಫಲಿತಾಂಶ ಹೊರಬೀಳಲಿದೆ. ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಪರಿಷತ್‌ ಕೇಂದ್ರ ಚುನಾವಣಾ ಅಧಿಕಾರಿ ಕೆ. ನಾಗರಾಜು, ‘ರಾಜ್ಯದ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ, ಕೆಲವು ಹೋಬಳಿಗಳಲ್ಲಿ ಮತಗಟ್ಟೆಗಳನ್ನು ತೆರೆಯಲಾಗುವುದು’ ಎಂದರು.

ವೆಚ್ಚ ಮಿತಿ ಇಲ್ಲ: ಪರಿಷತ್ ಚುನಾವಣೆಯಲ್ಲಿ ಅಭ್ಯರ್ಥಿ ಇಂತಿಷ್ಟೇ ಹಣ ಖರ್ಚು ಮಾಡಬೇಕು ಎಂಬ ಮಿತಿ ನಿಗದಿಪಡಿಸಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹೆಚ್ಚುತ್ತಲೇ ಇದೆ ಮತದಾರರ ಸಂಖ್ಯೆ: ಸಾಹಿತ್ಯ ಪರಿಷತ್‌ ಮತದಾರರ ಸಂಖ್ಯೆ ಒಂದು ಚುನಾವಣೆಯಿಂದ ಇನ್ನೊಂದು ಚುನಾವಣೆಗೆ ಹೆಚ್ಚುತ್ತಲೇ ಸಾಗಿದೆ. 2001ರಲ್ಲಿ ಕೇವಲ 14,700 ಇದ್ದ ಮತದಾರರ ಸಂಖ್ಯೆ 2004ರ ವೇಳೆಗೆ 40 ಸಾವಿರಕ್ಕೆ ಏರಿತ್ತು. 2008ರಲ್ಲಿ 62 ಸಾವಿರ ಆಗಿತ್ತು.2012ರಲ್ಲಿ 1.08 ಲಕ್ಷ ಮತದಾರರಿದ್ದರು.ನಾಗರಾಜು ಪರಿಷತ್‌ ಚುನಾವಣಾ ಅಧಿಕಾರಿಯಾಗಿ ನೇಮಕಗೊಂಡಿರುವುದು ಇದು ಐದನೇ ಸಲ.

ನೀತಿ ಸಂಹಿತೆ ಜಾರಿ
ಚುನಾವಣಾ ವೇಳಾಪಟ್ಟಿ ಬೆನ್ನಲ್ಲೇ ನೀತಿ ಸಂಹಿತೆ ಕೂಡ ಜಾರಿಗೆ ಬಂದಿದೆ. ಇದರ ಅನ್ವಯ, ಕನ್ನಡ ಸಾಹಿತ್ಯ–ಸಂಸ್ಕೃತಿಗೆ ಸಂಬಂಧಿಸಿದ ಸಭೆ ಸಮಾರಂಭಗಳನ್ನು ಆಯೋಜಿಸಲು ಅಡ್ಡಿಯಿಲ್ಲ. ಆದರೆ ಈ ವೇದಿಕೆಯನ್ನು ಚುನಾವಣಾ ಉದ್ದೇಶಕ್ಕೆ ಬಳಸಿಕೊಳ್ಳುವಂತಿಲ್ಲ ಎಂದು ನಾಗರಾಜು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT