ADVERTISEMENT

ಬಂದ್‌ಗೆ ಕಲಬುರ್ಗಿಯಲ್ಲಿ ಭಾಗಶಃ ಬೆಂಬಲ

ಬಸ್ ಸಂಚಾರ ಸ್ಥಗಿತ: ಕರವೇ ಕಾರ್ಯಕರ್ತರ ಬಂಧನ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2016, 6:09 IST
Last Updated 9 ಸೆಪ್ಟೆಂಬರ್ 2016, 6:09 IST
ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಕಲಬುರ್ಗಿಯ ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ಶುಕ್ರವಾರ ಬಸ್ ಸಂಚಾರ ಸ್ಥಗಿತಗೊಂಡಿರುವುದು
ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಕಲಬುರ್ಗಿಯ ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ಶುಕ್ರವಾರ ಬಸ್ ಸಂಚಾರ ಸ್ಥಗಿತಗೊಂಡಿರುವುದು   

ಕಲಬುರ್ಗಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ವಿವಿಧ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ನಗರದಲ್ಲಿ ಶುಕ್ರವಾರ ಭಾಗಶಃ ಬೆಂಬಲ ವ್ಯಕ್ತವಾಯಿತು.

ಹೈದರಾಬಾದ್ ಕರ್ನಾಟಕ ರೈತ ಸಂಘದ ಮುಖಂಡರಾದ ಜಗದೀಶ ಪಾಟೀಲ ಮತ್ತು ಆದಿನಾಥ ಹೀರಾ ನೇತೃತ್ವದಲ್ಲಿ ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ ಸಂಚಾರ ತಡೆದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

ಬೆಳಿಗ್ಗೆ ಬಸ್ ಓಡಿಸಿದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಪ್ರತಿಭಟನೆ ಹಿನ್ನೆಲೆಯಲ್ಲಿ ಬಸ್ ಸಂಚಾರ ಸ್ಥಗಿತಗೊಳಿಸಿತು. ಇದರಿಂದ ಪರ ಊರುಗಳಿಗೆ ತೆರಳಬೇಕಾದ ಪ್ರಯಾಣಿಕರು ಪರದಾಡುವಂತಾಯಿತು.

ಇಲ್ಲಿನ ರೈಲು ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಬಣದ ಕಾರ್ಯಕರ್ತರು ರಾಜ್ಯ ಸರ್ಕಾರ ಮತ್ತು ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ರೈಲು ತಡೆಗೆ ಮುಂದಾದಾಗ10ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆ ಮಾಡಿದರು.

ಸರ್ಕಾರಿ ಶಾಲಾ–ಕಾಲೇಜುಗಳು, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಕೆಲವು ಖಾಸಗಿ ಶಾಲೆಗಳು ರಜೆ ಘೋಷಿಸಿದ್ದವು. ಇನ್ನುಳಿದಂತೆ ಆಟೊ, ಕ್ಯಾಬ್, ಖಾಸಗಿ ವಾಹನಗಳ ಸಂಚಾರ ಸಾಮಾನ್ಯವಾಗಿತ್ತು.

ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ ಮತ್ತು ಜಗತ್ ವೃತ್ತದಿಂದ ಮೆರವಣಿಗೆ ಹೊರಟು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ತಲುಪಿ ಮನವಿ ಪತ್ರ ಸಲ್ಲಿಸಿದರು. ಬಂದ್ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT