ADVERTISEMENT

ಬಯಲು ಸೀಮೆಯಲ್ಲೂ ರೈಲಿಗೆ ಸುರಂಗ

ಸಂಚಾರಕ್ಕೆ ನಾಳೆ ಹಸಿರು ನಿಶಾನೆ

ಡಿ.ಎಂ.ಕುರ್ಕೆ ಪ್ರಶಾಂತ
Published 24 ಮಾರ್ಚ್ 2017, 20:00 IST
Last Updated 24 ಮಾರ್ಚ್ 2017, 20:00 IST
ಮಾಗಡಿ ತಾಲ್ಲೂಕು ತಿಪ್ಪಸಂದ್ರ ರೈಲ್ವೆ ನಿಲ್ದಾಣದ ಸಮೀಪ ನಿರ್ಮಾಣವಾಗಿರುವ ಸುರಂಗ    ಚಿತ್ರ–ವಿನಯ್ ಹೆಬ್ಬೂರು
ಮಾಗಡಿ ತಾಲ್ಲೂಕು ತಿಪ್ಪಸಂದ್ರ ರೈಲ್ವೆ ನಿಲ್ದಾಣದ ಸಮೀಪ ನಿರ್ಮಾಣವಾಗಿರುವ ಸುರಂಗ ಚಿತ್ರ–ವಿನಯ್ ಹೆಬ್ಬೂರು   

ತುಮಕೂರು: ರೈಲು ಸಂಚಾರಕ್ಕೆ ಸಜ್ಜಾಗಿರುವ ಬೆಂಗಳೂರು- ಹಾಸನ ಮಾರ್ಗದಲ್ಲಿ ಅರ್ಧ ಕಿಲೋಮೀಟರ್‌ಗೂ ಹೆಚ್ಚು ಉದ್ದದ  ಸುರಂಗವು ಪ್ರಯಾಣಿಕರಲ್ಲಿ ಹೊಸ ನಿರೀಕ್ಷೆ ಹೆಚ್ಚಿಸಿದೆ.

ಹಲವು ಸುರಂಗಗಳ ಕಾರಣಕ್ಕೆ ಹಾಸನ– ಮಂಗಳೂರು ನಡುವಿನ ಮಾರ್ಗವು ಈಗಾಗಲೇ ಜನರ ಮನಸೂರೆಗೊಂಡಿದೆ. ಇದೇ ಮಾರ್ಗಕ್ಕೆ ಸೇರ್ಪಡೆಯಾಗುತ್ತಿರುವ ಬೆಂಗಳೂರು– ಹಾಸನ ಮಾರ್ಗದ ತಿಪ್ಪಸಂದ್ರ ರೈಲ್ವೆ ನಿಲ್ದಾಣ ಸಮೀಪ ನಿರ್ಮಿಸಿರುವ ಸುರಂಗ ಜನಾಕರ್ಷಣೆಯ ತಾಣವಾಗುವ ನಿರೀಕ್ಷೆ ಮೂಡಿಸಿದೆ. ಈ ಸುರಂಗ ಬಯಲ ಸೀಮೆಯಲ್ಲಿರುವುದೇ ವಿಶೇಷ.

ಮಾರ್ಗ ನಿರ್ಮಾಣದ ವೇಳೆ ರೈಲ್ವೆ ಇಲಾಖೆ ಪ್ರತಿ 500 ಮೀಟರ್‌ಗೆ ಮಣ್ಣು ಪರೀಕ್ಷೆ ನಡೆಸುವುದು ಸಾಮಾನ್ಯ. ಮಣ್ಣು ಪರೀಕ್ಷೆ ವರದಿ ಆಧರಿಸಿ ನಿರ್ಮಾಣ ಕಾರ್ಯಗಳು ನಡೆಯುತ್ತವೆ. ತಿಪ್ಪಸಂದ್ರದ ಬಳಿ ಬಂಡೆಗಳು ಹೆಚ್ಚು ಕಂಡು ಬಂದ ಕಾರಣ ಸುರಂಗ ನಿರ್ಮಿಸಲಾಯಿತು ಎಂದು ಮಾಹಿತಿ ನೀಡುವರು ರೈಲ್ವೆ ತಾಂತ್ರಿಕ ಅಧಿಕಾರಿಗಳು.

ಇಲ್ಲಿನ ಮತ್ತೊಂದು ವಿಶೇಷ ಆಕರ್ಷಣೆ ಎಂದರೆ ಮಾಗಡಿ ತಾಲ್ಲೂಕಿನ ಸೋಲೂರು ಮತ್ತು ತಿಪ್ಪಸಂದ್ರ ನಿಲ್ದಾಣಗಳ ಮಧ್ಯೆ ಸಿಗುವ ನಾರಸಂದ್ರದ ಬಳಿ ರೈಲು ಭೂಮಟ್ಟದಿಂದ ಗರಿಷ್ಠ 80 ಅಡಿ ಎತ್ತರದಲ್ಲಿ ಸಾಗುವುದು. ಈ ಎತ್ತರದ ಹಾದಿ 2.7 ಕಿಲೋ ಮೀಟರ್ ಇದೆ. ಈ ಪ್ರಯಾಣದ ವೇಳೆ ಸುತ್ತ ಕಣ್ಣು ಹಾಯಿಸಿದರೆ ಅಡಿಕೆ, ತೆಂಗಿನ ಹಸಿರು ತೋಟಗಳನ್ನು ಕಣ್ತುಂಬಿಕೊಳ್ಳಬಹುದು.

80 ಅಡಿ ಎತ್ತರಕ್ಕೆ ಮೂರು ಹಂತಗಳಲ್ಲಿ ಮಣ್ಣು ಹಾಕಲಾಗಿದೆ. ಒಂದು ಹಂತಕ್ಕೂ ಮತ್ತೊಂದು ಹಂತಕ್ಕೂ 10 ಅಡಿ ಅಗಲದ ರಸ್ತೆ ಬಿಡಲಾಗಿದೆ. ಹಳಿಯ ಎರಡೂ ಬದಿಯ ಇಳಿಜಾರಿನಲ್ಲಿ ಮಣ್ಣು ಸವಕಳಿಯಾಗದಂತೆ ಜಾಲರಿ ಅಳವಡಿಸಿ ಹುಲ್ಲು ಬೆಳೆಸಲಾಗಿದೆ. ಅಣ್ಣೇಶಾಸ್ತ್ರಿಪಾಳ್ಯದಲ್ಲಿ ಈ ಎತ್ತರದ ಪ್ರಯಾಣ ಕೊನೆಗೊಳ್ಳುತ್ತಲೇ ಸುರಂಗದ ಪ್ರವೇಶ.

ಕುಣಿಗಲ್ ತಾಲ್ಲೂಕಿನ ಸಿಂಗೋನಹಳ್ಳಿ ಅಗ್ರಹಾರದ ಬಳಿ 35 ಅಡಿ ಮತ್ತು ಹಾಲಪ್ಪನ ಗುಡ್ಡೆ ಬಳಿ 24 ಅಡಿ ಎತ್ತರದಲ್ಲಿ ರೈಲು ಸಾಗುತ್ತದೆ ಎಂದು ರೈಲ್ವೆ ಇಲಾಖೆ ಮೂಲಗಳು ಮಾಹಿತಿ ನೀಡುತ್ತವೆ. ಕುಣಿಗಲ್‌ನ ಚಿಕ್ಕಕೆರೆ ಬಳಿ ನಿರ್ಮಿಸಿರುವ 500 ಮೀಟರ್ ಉದ್ದದ ಮೇಲ್ಸೇತುವೆ ಮತ್ತು ಎಡೆಯೂರು ಬಳಿಯ ಶಿಂಷಾ ನದಿ ಹಿನ್ನೀರಿನಲ್ಲಿ ನಿರ್ಮಾಣವಾಗಿರುವ 180 ಮೀಟರ್ ಸೇತುವೆ ಈ ಮಾರ್ಗದ ಪ್ರಮುಖ ಸೇತುವೆಗಳಾಗಿವೆ. 164 ಕಿಲೋಮೀಟರ್ ಹಾದಿಯ ಈ ಮಾರ್ಗದಲ್ಲಿ ಎಲ್ಲ ಕಡೆ ಮಾನವ ರಹಿತ ಲೆವೆಲ್ ಕ್ರಾಸಿಂಗ್‌ಗಳನ್ನು ನಿರ್ಮಿಸಲಾಗಿದೆ.

ರೈತರ ಜಮೀನುಗಳಿಗೆ ನೀರು ಹರಿಯುವ ಸಣ್ಣ ಪುಟ್ಟ ನೈಸರ್ಗಿಕ ಕಾಲುವೆಗಳ ರಕ್ಷಣೆ ದೃಷ್ಟಿಯಿಂದ ಅಂತಹ ಕಡೆಗಳಲ್ಲೂ ಸೇತುವೆಗಳನ್ನು ನಿರ್ಮಿಸಲಾಗಿದೆ. ಕುಣಿಗಲ್ ಮತ್ತು ಮಾಗಡಿ ತಾಲ್ಲೂಕು ಭಾಗದಲ್ಲಿ ಇಂತಹ ಸೇತುವೆಗಳನ್ನು ಕಾಣಬಹುದು.

ನಿಲ್ದಾಣಗಳು: ಬೆಂಗಳೂರು– ಹಾಸನ ಮಾರ್ಗದಲ್ಲಿ ನೆಲಮಂಗಲ, ಸೋಲೂರು, ತಿಪ್ಪಸಂದ್ರ, ಕುಣಿಗಲ್, ಎಡೆಯೂರು, ಬಿ.ಜಿ.ನಗರ, ಹಿರಿಸಾವೆ, ಶ್ರವಣಬೆಳಗೊಳ, ಚನ್ನರಾಯಪಟ್ಟಣ, ಡಿ.ಸಮುದ್ರವಳ್ಳಿ ಮತ್ತು ಶಾಂತಿ ಗ್ರಾಮಗಳು ಹೊಸದಾಗಿ  ನಿರ್ಮಿಸಿರುವ ರೈಲ್ವೆ ನಿಲ್ದಾಣಗಳಾಗಿವೆ. ಈ ಮಾರ್ಗಕ್ಕೆ 1996ರಲ್ಲಿ ಅಡಿಗಲ್ಲು ಹಾಕಲಾಯಿತು. 2009 ಮಾರ್ಚ್ ನಂತರ ತುಮಕೂರು ಜಿಲ್ಲೆ, 2010ರ ಅಕ್ಟೋಬರ್ ನಂತರ ಮಂಡ್ಯ ಜಿಲ್ಲೆಯ ರೈತರ ಜಮೀನುಗಳು ರೈಲ್ವೆ ಇಲಾಖೆ ಕೈ ಸೇರಿದವು.

ಮಂಗಳೂರಿಗೆ ಎರಡು ತಾಸು ಕಡಿಮೆ
ಬೆಂಗಳೂರಿನಿಂದ ಈ ಮುಂಚೆ ಹಾಸನ ಮತ್ತು ಮಂಗಳೂರಿಗೆ ರೈಲುಗಳು ಮೈಸೂರು ಅಥವಾ ಅರಸೀಕೆರೆ ಮಾರ್ಗದಲ್ಲಿ ಸಾಗಬೇಕಿತ್ತು. ಇನ್ನು ಮುಂದೆ ನೇರವಾಗಿ ಬೆಂಗಳೂರು– ನೆಲಮಂಗಲ– ಕುಣಿಗಲ್‌– ಶ್ರವಣಬೆಳಗೊಳ ಮಾರ್ಗದಲ್ಲಿ ಸಂಚರಿಸುವುದರಿಂದ ಮಂಗಳೂರಿಗೆ ಕನಿಷ್ಠ ಎರಡು ಗಂಟೆ ಪ್ರಯಾಣ ಉಳಿಯುತ್ತದೆ. ವಾರಕ್ಕೆ ಮೂರು ದಿನ ಸಂಚರಿಸುವ ಯಶವಂತಪುರ– ಕಾರವಾರ ರೈಲನ್ನು ಈ ಮಾರ್ಗದಲ್ಲಿ ಓಡಿಸುವ ಸಾಧ್ಯತೆ ಇದೆ ಎನ್ನುತ್ತವೆ ರೈಲ್ವೆ ಇಲಾಖೆ ಮೂಲಗಳು.

ಎಡೆಯೂರು, ಚುಂಚನಗಿರಿ ಬಳಿ ನಿಲುಗಡೆ: ಯಾತ್ರಾರ್ಥಿಗಳಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಕುಣಿಗಲ್ ತಾಲ್ಲೂಕಿನ ಎಡೆಯೂರು ಸಮೀಪದಲ್ಲಿರುವ ಸಿಂಗೋನಹಳ್ಳಿ ಅಗ್ರಹಾರ ಮತ್ತು ಆದಿಚುಂಚನಗಿರಿ ಮಠದ ಸಮೀಪ ರೈಲ್ವೆ ಹಾಲ್ಟ್ (ತಂಗುದಾಣ) ಸ್ಟೇಷನ್‌ಗಳಿವೆ. ಇಲ್ಲಿ ಪ್ಯಾಸೆಂಜರ್ ರೈಲುಗಳು ಕೆಲ ಕ್ಷಣ ನಿಲುಗಡೆಯಾಗಲಿವೆ. ಈ ಎರಡೂ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಮೂಲ ಸೌಕರ್ಯ ವ್ಯವಸ್ಥೆ ಮತ್ತು ಟಿಕೆಟ್ ಸೌಲಭ್ಯ ಇದೆ.

ವೇಳಾ ಪಟ್ಟಿ ಪ್ರಕಟಿಸಿದ ರೈಲ್ವೆ ಇಲಾಖೆ
ಬೆಂಗಳೂರು:
ಹಾಸನ– ಯಶವಂತಪುರ ಮತ್ತು ಯಶವಂತಪುರ– ಹಾಸನ ನಡುವಿನ  ಪ್ರಯಾಣ ಸಮಯ ನಿಗದಿ ಮಾಡಿ ರೈಲ್ವೆ ಇಲಾಖೆ ಶುಕ್ರವಾರ ವೇಳಾ ಪಟ್ಟಿ ಪ್ರಕಟಿಸಿದೆ.

ಇದೇ 26ರಂದು ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಾಗುವುದು. 27ರಿಂದ ‘ಸೂಪರ್‌ ಪಾಸ್ಟ್‌ ಇಂಟರ್‌ ಸಿಟಿ’ ರೈಲು ಅಧಿಕೃತವಾಗಿ ಓಡಾಟ ಆರಂಭಿಸಲಿದೆ. ಹಾಸನದಿಂದ ಬೆಳಿಗ್ಗೆ 6.30ಕ್ಕೆ ಹೊರಟು ಯಶವಂತಪುರಕ್ಕೆ ಬೆಳಿಗ್ಗೆ 9.15ಕ್ಕೆ ಬರಲಿದೆ. ಸಂಜೆ 6.15ಕ್ಕೆ ಹೊರಟು ರಾತ್ರಿ 9ಕ್ಕೆ ಹಾಸನ ತಲುಪಲಿದೆ.

ಹಾಸನ– ಯಶವಂತಪುರದ ನಡುವಿನ ಪ್ರಯಾಣ ಸಮಯ 2ಗಂಟೆ 45 ನಿಮಿಷ.  ಏಳು ಸ್ಥಳಗಳಲ್ಲಿ ರೈಲು ನಿಲ್ಲಲಿದೆ.  ರೈಲಿನಲ್ಲಿ 14 ಬೋಗಿಗಳು ಇರಲಿದ್ದು, 4 ದ್ವಿತೀಯ ದರ್ಜೆ, 8 ಸಾಮಾನ್ಯ ದರ್ಜೆ,  ಒಂದು ಅಂಗವಿಕಲರ ಬೋಗಿ ಹಾಗೂ ಒಂದು ಸರಕು ಸಾಗಣೆ ಡಬ್ಬಿ ಇರಲಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ರೈಲ್ವೆ ಸಚಿವ ಸುರೇಶ್‌ ಪ್ರಭು, ಸಂಸದ ಎಚ್‌.ಡಿ. ದೇವೇಗೌಡ ಯಶವಂತಪುರ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರುವರು.

ಕುಡ್ಲ ಎಕ್ಸ್‌ಪ್ರೆಸ್‌ ಶೀಘ್ರ ಆರಂಭದ ನಿರೀಕ್ಷೆ: ಡಿ.ವಿ. ಸದಾನಂದಗೌಡ ಅವರು ರೈಲ್ವೆ ಸಚಿವರಾಗಿದ್ದ ಸಂದರ್ಭದಲ್ಲಿ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ ಬೆಂಗಳೂರು–ಮಂಗಳೂರು ‘ಕುಡ್ಲ ಎಕ್ಸ್‌ಪ್ರೆಸ್‌’ ಶೀಘ್ರವೇ ಆರಂಭವಾಗುವ ನಿರೀಕ್ಷೆ ಇದೆ.  ಈ ಸೇವೆ ಆರಂಭಿಸುವುದಾಗಿ ರೈಲ್ವೆ ಸಚಿವ ಸುರೇಶ್‌ ಪ್ರಭು ಟ್ವೀಟ್‌ ಮೂಲಕ  ಭರವಸೆ ನೀಡಿದ್ದಾರೆ.

ಇದೇ 26ಕ್ಕೆ ಬೆಂಗಳೂರಿಗೆ ಬರುವ ಅವರು ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇದೆ. ಬೇಸಿಗೆ ರಜೆಯಲ್ಲಿ ಪ್ರಯಾಣಿಕರ ಓಡಾಟ ಹೆಚ್ಚಾಗಿರುತ್ತದೆ. ಇದಕ್ಕೂ ಮುನ್ನ ಕುಡ್ಲ ಎಕ್ಸ್‌ಪ್ರೆಸ್‌ ಓಡಾಟ ಆರಂಭಿಸಬೇಕು ಎಂದು ‘ಪ್ರಜಾ ರಾಗ್‌’ ಸದಸ್ಯ ಸಂಜೀವ್‌ ದ್ಯಾಮಣ್ಣನವರ್‌ ಒತ್ತಾಯಿಸಿದ್ದಾರೆ.

ಪ್ರಯಾಣ ದರ ₹110, ₹95
ಹುಬ್ಬಳ್ಳಿ:
ಹಾಸನ– ಯಶವಂತಪುರ ನಡುವೆ ಸಂಚರಿಸಲಿರುವ ಸೂಪರ್‌ಫಾಸ್ಟ್‌ ಇಂಟರ್‌ಸಿಟಿ ರೈಲಿನ ಪ್ರಯಾಣ ದರವನ್ನು ನೈರುತ್ಯ ರೈಲ್ವೆ ಪ್ರಕಟಿಸಿದೆ. ದ್ವಿತೀಯ ದರ್ಜೆ ಚೇರ್‌

ADVERTISEMENT

ಕಾರ್‌ ಬೋಗಿಗಳ ಪ್ರಯಾಣಕ್ಕೆ  ₹110 ಹಾಗೂ ಸಾಮಾನ್ಯ ಬೋಗಿಗಳಲ್ಲಿ ಪ್ರಯಾಣಿಸಲು  ₹95 ದರ ನಿಗದಿಪಡಿಸಲಾಗಿದೆ ಎಂದು ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿ ಇಮ್ತಿಯಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಅಂಕಿ ಅಂಶ
164 ಕಿ.ಮೀ.
ಯಶವಂತಪುರ– ಹಾಸನ ರೈಲು ಮಾರ್ಗದ ಉದ್ದ

406 ಒಟ್ಟು ಕೆಳ ಮತ್ತು ಮೇಲ್ಸೇತುವೆಗಳು

630 ಮೀಟರ್‌ ಸುರಂಗದ ಉದ್ದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.