ADVERTISEMENT

ಬಸವಣ್ಣನಿಗಾಗಿ ಯಾವ ತ್ಯಾಗಕ್ಕೂ ಸಿದ್ಧ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2018, 19:30 IST
Last Updated 21 ಮಾರ್ಚ್ 2018, 19:30 IST

ವಿಜಯಪುರ: ಬಸವಣ್ಣನಿಗಾಗಿ, ಲಿಂಗಾಯತ ಧರ್ಮಕ್ಕಾಗಿ ತಾವು ಯಾವ ತ್ಯಾಗಕ್ಕೂ ಸಿದ್ಧವಿರುವುದಾಗಿ ಸಚಿವ ಎಂ.ಬಿ.ಪಾಟೀಲ ಬುಧವಾರ ಇಲ್ಲಿ ಹೇಳಿದರು.

ಇಲ್ಲಿನ ಜಲನಗರದಲ್ಲಿ ಸಾರಿಪುತ್ರ ಬುದ್ಧವಿಹಾರ ಉದ್ಘಾಟಿಸಿ ಮಾತನಾಡಿದ ಅವರು, ‘ಬಸವ ಜನ್ಮಭೂಮಿಗೇ ಬಂದು, ಎಂ.ಬಿ.ಪಾಟೀಲಗೆ ಪಾಠ ಕಲಿಸುವುದಾಗಿ ಹೇಳುವವರಿಗೆ ಎಷ್ಟು ಧೈರ್ಯ? ನಾನೇನು ಕೈಗೆ ಬಳೆ ತೊಟ್ಟಿಲ್ಲ. ನನ್ನ ಒಂದು ಕಣ್ಣನ್ನು ತೆಗೆದರೆ, ನಾನು ಅವರ ಎರಡೂ ಕಣ್ಣು ತೆಗೆಯುತ್ತೇನೆ’ ಎಂದು ಎಚ್ಚರಿಸಿದರು.

‘ನಾನು ಬಹಳ ಹುಂಬನಿದ್ದೇನೆ. ಬಸವಣ್ಣನಿಗೆ ಅವಮಾನ ಮಾಡುವವರಿಗೆ, ಅಪಪ್ರಚಾರ ಮಾಡುವವರಿಗೆ ತಕ್ಕ ಪಾಠ ಕಲಿಸಿಯೇ ಸಿದ್ಧ’ ಎಂದ ಅವರು, ‘ಜನಾಶೀರ್ವಾದ ಇರುವವರೆಗೆ ನನ್ನನ್ನು ಯಾರೂ ಏನೂ ಮಾಡಲಾಗುವುದಿಲ್ಲ. ಹೆಚ್ಚೆಂದರೆ ಚುನಾವಣೆಯಲ್ಲಿ ಸೋಲಿಸಬಹುದು. ಬಸವಣ್ಣನಿಗಾಗಿ ಎಂ.ಬಿ.ಪಾಟೀಲ ಸೋತರು ಎಂಬುದು ಇತಿಹಾಸವಾಗಲಿ. ಅಷ್ಟಕ್ಕೂ ನನಗೆ ರಾಜಕೀಯದ ಅವಶ್ಯಕತೆ ಇಲ್ಲ’ ಎಂದರು.

ADVERTISEMENT

‘ಜಲಸಂಪನ್ಮೂಲ ಸಚಿವನಾಗಿ ಜಿಲ್ಲೆಗೆ ಏನು ಮಾಡಬೇಕೋ ಅದನ್ನು ಮಾಡಿದ್ದೇನೆ. ಸಿದ್ಧೇಶ್ವರ ಸ್ವಾಮೀಜಿ ಸರ್ಟಿಫಿಕೆಟ್‌ ಕೂಡ ಕೊಟ್ಟಿದ್ದಾರೆ. ಬಸವ ವಿರೋಧಿಗಳನ್ನು ಎದುರಿಸಲು ನಾನು ಸಿದ್ಧನಿದ್ದೇನೆ. ನೀವೇನು ಮಾಡುತ್ತೀರೋ ಮಾಡಿ; ನಾನು ಸಿದ್ಧನಿದ್ದೇನೆ’ ಎಂದು ಲಿಂಗಾಯತ ಪ್ರತ್ಯೇಕ ಧರ್ಮ ವಿರೋಧಿಗಳಿಗೆ ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.