ADVERTISEMENT

ಬಸವಸಾಗರ ಜಲಾಶಯ ಬಹುತೇಕ ಭರ್ತಿ

1 ಲಕ್ಷ ಕ್ಯೂಸೆಕ್‌ ನೀರು ನದಿಗೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2014, 19:30 IST
Last Updated 29 ಜುಲೈ 2014, 19:30 IST

ಹುಣಸಗಿ (ಯಾದಗಿರಿ ಜಿಲ್ಲೆ) /ಬೆಳಗಾವಿ/  ಶಿವಮೊಗ್ಗ/ ಶ್ರೀರಂಗ­ಪಟ್ಟಣ: ನಾರಾಯಣಪುರದ ಬಸವ­ಸಾಗರ ಜಲಾಶಯ ಮಂಗಳವಾರ ಬಹುತೇಕ ಭರ್ತಿಯಾಗಿದೆ. ಜಲಾಶ­ಯದ ಸಂಗ್ರಹ ಸಾಮರ್ಥ್ಯ ಕಾಯ್ದು­ಕೊಂಡು ಹೆಚ್ಚಿನ ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ.

ಜಲಾಶಯದ ಗರಿಷ್ಠ ಮಟ್ಟ 492.252 ಮೀಟರ್. ಮಂಗಳವಾರ ಸಂಜೆ 491.000 ಮೀಟರ್‌ ವರೆಗೆ ನೀರು ಸಂಗ್ರಹವಾಗಿದೆ. ಜಲಾಶಯ ಭರ್ತಿಗೆ ಇನ್ನೊಂದು ಮೀಟರ್‌ ಮಾತ್ರ ಉಳಿದಿದೆ. 

ಜಲಾಶಯಕ್ಕೆ 1.10 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು. 25 ಗೇಟ್‌­ಗಳ ಮೂಲಕ 1.06 ಲಕ್ಷ ಕ್ಯೂಸೆಕ್‌ ನೀರನ್ನು ನದಿಗೆ ಬಿಡಲಾಗಿದೆ.

ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ. ನದಿ ತೀರದ ಗ್ರಾಮ­ಗಳ ಜನರು ಸುರಕ್ಷಿತ ಸ್ಥಳಗಳಿಗೆ ತೆರಳು­ವಂತೆ ಜಲಾಶಯದ ವಿಭಾಗೀಯ ಕಾರ್ಯ ನಿರ್ವಾಹಕ ಎಂಜಿನಿಯರ್ ಎಸ್.ರಂಗರಾಮ್ ತಿಳಿಸಿದ್ದಾರೆ.

ಮಳೆ ಚುರುಕು: ಕೃಷ್ಣಾ ಮತ್ತು ಉಪನದಿಗಳ ಜಲಾನ­ಯನ ಪ್ರದೇಶ­ಗಳಲ್ಲಿ ಮಳೆಯ ಆರ್ಭಟ ಮತ್ತೆ ಹೆಚ್ಚಾ­ಗಿದೆ. ಮಹಾರಾಷ್ಟ್ರದ ಜಲಾಶಯ­ಗ­ಳಿಂದ ಹೊರ ಬಿಡುವ ನೀರಿನ ಪ್ರಮಾಣ ಸಹ ಅಧಿಕವಾಗಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ–ಯಡೂರ ಮತ್ತು ಜತ್ರಾಟ–ಭೀವಶಿ ನಡುವಿನ ಸೇತುವೆಗಳು ಮುಳುಗಡೆ­ಯಾಗಿವೆ.

ತಾಲ್ಲೂಕಿನಲ್ಲಿ ಪ್ರವಾಹದಿಂದ ಮುಳು­ಗಡೆಯಾಗಿದ್ದ ಆರು ಸೇತುವೆಗಳ ಪೈಕಿ ಕಾರದಗಾ–ಭೋಜ್‌, ಮಲಿಕ­ವಾಡ–ದತ್ತವಾಡ, ಕುನ್ನೂರ–ಭೋಜವಾಡಿ, ಅಕ್ಕೋಳ–ಸಿದ್ನಾಳ ಮತ್ತು ಜತ್ರಾಟ–ಭೀವಶಿ ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿವೆ.

ಜತ್ರಾಟ–ಭೀವಶಿ ನಡುವೆ ಹರಿ­ಯುವ ವೇದಗಂಗಾ ನದಿಯ ಕೆಳ­ಮ­ಟ್ಟದ ಸೇತುವೆ ಸೋಮವಾರ ರಾತ್ರಿ­ಯಷ್ಟೇ ಸಂಚಾರಕ್ಕೆ ಮುಕ್ತ­ವಾಗಿತ್ತು. ಆದರೆ, ರಾತ್ರಿಯಿಂದೀಚೆಗೆ ಮಹಾರಾ­ಷ್ಟ್ರ­­ದಲ್ಲಿ ಭಾರಿ ಮಳೆ ಸುರಿಯುತ್ತಿರು­ವು­ದರಿಂದ ಮಂಗಳವಾರ ಸಂಜೆ 4 ಗಂಟೆ­ಯಿಂದ ಈ ಸೇತುವೆ ಮತ್ತೇ ಜಲಾವೃತ­ಗೊಂಡಿದ್ದು, ಸಂಚಾರ ಸ್ಥಗಿತ­ಗೊಂಡಿದೆ. ಕಲ್ಲೋಳ–ಯಡೂರ ಗ್ರಾಮ­­ಗಳ ನಡುವಿನ  ಸೇತುವೆ 14 ದಿನಗಳಿಂದ ಮುಳುಗಡೆ ಸ್ಥಿತಿಯಲ್ಲಿಯೇ ಇದೆ.

24 ಗಂಟೆ ಅವಧಿಯಲ್ಲಿ ಕೃಷ್ಣೆಯ ಉಗಮಸ್ಥಾನ ಮಹಾಬಳೇಶ್ವರದಲ್ಲಿ 92 ಮಿ.ಮೀ., ಕೊಯ್ನಾ–131 ಮಿ.ಮೀ., ನವಜಾ–143 ಮಿ.ಮೀ ಮಳೆ ಸುರಿದಿದೆ.
  
ಸಾಧಾರಣ ಮಳೆ: ಖಾನಾಪುರ ತಾಲ್ಲೂಕಿನ ಕಣಕುಂಬಿ, ನಾಗರಗಾಳಿ, ಜಾಂಬೋಟಿ, ಭೀಮಗಡ ಹಾಗೂ ಲೋಂಡಾ ಅರಣ್ಯ ಪ್ರದೇಶ­ದಲ್ಲಿ ಸಾಧಾ­ರಣ ಮಳೆಯಾಗಿದೆ. ಮಲಪ್ರಭಾ ನದಿಯ ಪಟ್ಟಣದ ಹಳೆಯ ಸೇತುವೆಯ ಮೇಲೆ ನಾಲ್ಕು  ಅಡಿಗಳಷ್ಟು ನೀರು ಹರಿಯುತ್ತಿದೆ. ಪಶ್ಚಿಮ ಭಾಗದ ಅರಣ್ಯ ಪ್ರದೇಶದಲ್ಲಿ ಹಲವು ಹಳ್ಳಕೊಳ್ಳ­ಗಳು ತುಂಬಿ ಹರಿಯುತ್ತಿರುವ ಕಾರಣ ಕೆಲವು ಗ್ರಾಮಗಳ ನಡುವೆ ಸಮರ್ಪಕ­ವಾದ ಸೇತುವೆ ಸಂಪರ್ಕ ಇಲ್ಲದ ಕಾರಣ ರಸ್ತೆ ಸಂಚಾರ ಬಹುತೇಕ ಸ್ಥಗಿತ­ಗೊಂಡಿದೆ.

24 ಗಂಟೆ ಅವಧಿಯಲ್ಲಿ ಕಣಕುಂಬಿ 93.8 ಮಿ.ಮೀ ಹಾಗೂ ಲೋಂಡಾ ರೈಲ್ವೆ ಮಳೆ ಮಾಪನ ಕೇಂದ್ರದಲ್ಲಿ 47 ಮಿ.ಮೀ, ಮಳೆ ದಾಖಲಾಗಿದೆ.

ಜಿಟಿಜಿಟಿ ಮಳೆ: ಬೆಳಗಾವಿ ನಗರದಲ್ಲಿ ಮಂಗಳವಾರ ಜಿಟಿಜಿಟಿ ಮಳೆಯಾಗಿದೆ. ನಗರಕ್ಕೆ ಕುಡಿಯುವ ನೀರು ಪೂರೈಸುವ ರಕ್ಕಸ­ಕೊಪ್ಪ ಜಲಾಶಯ ಸಂಜೆ ಭರ್ತಿ­ಯಾಗಿದ್ದು, ಹೆಚ್ಚಿನ ನೀರನ್ನು ಮಾರ್ಕಂ­ಡೇಯ ನದಿಗೆ  ಬಿಡಲಾಗು­ತ್ತಿದೆ. ಹುಬ್ಬಳ್ಳಿ–ಧಾರವಾಡ, ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ.

ಹೆಚ್ಚು ನೀರು ಹೊರಕ್ಕೆ: ಆಲಮಟ್ಟಿ ಜಲಾ­ಶಯಕ್ಕೆ ಮಂಗಳವಾರ 1,08,501­ಕ್ಯೂಸೆಕ್ ನೀರು ಹರಿದು ಬರುತ್ತಿದ್ದು 15 ಕ್ರೆಸ್ಟ್‌ಗೇಟ್‌­ಗಳಿಂದ 68,500 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ವಿದ್ಯುತ್ ಉತ್ಪಾ­ದನೆಗೆ  42,000 ಕ್ಯೂಸೆಕ್ ನೀರು ಬಿಡಲಾಗು­ತ್ತಿದೆ. ಜಲಾಶಯ­ದಲ್ಲಿ 518.80 ಮೀಟ­ರ್‌ವರೆಗೆ ನೀರು ಸಂಗ್ರಹವಾಗಿದೆ.

ಶಿವಮೊಗ್ಗ ಜಿಲ್ಲೆಯಾದ್ಯಂತ ಮಂಗಳ­ವಾರವೂ ಮಳೆ ಕ್ಷೀಣಿಸಿದ್ದು, ಜಲಾಶ­ಯಗಳಿಗೆ ಒಳಹರಿವು ಕಡಿಮೆಯಾಗಿದೆ.
ಭದ್ರಾ ಜಲಾಶಯದ ನೀರಿನ ಮಟ್ಟ 172.08 ಅಡಿಗೆ ಏರಿದ್ದು, ಒಳ ಹರಿವು 13,987 ಕ್ಯೂಸೆಕ್‌ ಇದೆ. ಜಲಾಶಯ ಭರ್ತಿಯಾಗಲು ಇನ್ನೂ 13.02 ಅಡಿ ನೀರು ಸಂಗ್ರಹವಾಗಬೇಕಿದೆ.

ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1788.85 ಅಡಿ ಇದ್ದು, ಒಳ ಹರಿವು 22,472 ಕ್ಯೂಸೆಕ್‌ಗೆ ಕುಸಿದಿದೆ.
ಕೆ.ಆರ್.ಎಸ್‌: ಶ್ರೀರಂಗಪಟ್ಟಣ ತಾಲ್ಲೂ­ಕಿನ ಕೆಆರ್‌ಎಸ್‌ ಜಲಾಶಯ­ದಲ್ಲಿ ಮಂಗಳವಾರ ಸಂಜೆ ವೇಳೆಗೆ 35.7 ಟಿಎಂಸಿ ನೀರು ಸಂಗ್ರಹವಾಗಿದೆ.

ಒಟ್ಟು 124.80 ಅಡಿ ಎತ್ತರದ ಜಲಾಶಯದ ಮಟ್ಟ 113.85 ಅಡಿಗೆ ತಲುಪಿದೆ. 49 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಕಳೆದ 24 ಗಂಟೆಗಳಲ್ಲಿ ಗಣನೀಯವಾಗಿ ಕಡಿಮೆಯಾಗಿದೆ. 14,413 ಕ್ಯೂಸೆಕ್‌ ನೀರು ಜಲಾಶಯಕ್ಕೆ ಹರಿದು ಬರುತ್ತಿದ್ದು, 7,970 ಕ್ಯೂಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ.

ಕಳೆದ ವರ್ಷ ಇದೇ ದಿನ ಜಲಾಶ­ಯದಲ್ಲಿ 123.08 ಅಡಿ ನೀರು ಸಂಗ್ರಹವಾಗಿತ್ತು. 53,444 ಕ್ಯೂಸೆಕ್‌ ಒಳ ಹರಿವು ಹಾಗೂ 38,813 ಕ್ಯೂಸೆಕ್‌ ಹೊರ ಹರಿವು ದಾಖಲಾಗಿತ್ತು ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಕೊಡಗು ಜಿಲ್ಲೆಯ ಸೋಮವಾರ­ಪೇಟೆ, ಶಾಂತಳ್ಳಿ ಹೊರತುಪಡಿಸಿದರೆ ಜಿಲ್ಲೆಯ ಇತರ ಭಾಗಗಳಲ್ಲಿ ಮಂಗಳ­ವಾರ ಮಳೆ ಕಡಿಮೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.