ADVERTISEMENT

ಪಿಎಫ್‌ ಪ್ರತಿಭಟನೆ: ರಣರಂಗವಾದ ಬೆಂಗಳೂರು

ಎರಡು ಬಸ್‌ ಬೆಂಕಿಗೆ ಆಹುತಿ; 10 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2016, 11:40 IST
Last Updated 19 ಏಪ್ರಿಲ್ 2016, 11:40 IST
ಪಿಎಫ್‌ ಪ್ರತಿಭಟನೆ: ರಣರಂಗವಾದ ಬೆಂಗಳೂರು
ಪಿಎಫ್‌ ಪ್ರತಿಭಟನೆ: ರಣರಂಗವಾದ ಬೆಂಗಳೂರು   

ಬೆಂಗಳೂರು: ಪಿಎಫ್ ನೀತಿ ವಿರೋಧಿಸಿ ನಡೆದ ಪ್ರತಿಭಟನೆ ಮಂಗಳವಾರ ಧ್ವಂಸಾರೂಪ ಪಡೆದಿದೆ. ಜಾಲಹಳ್ಳಿ ಕ್ರಾಸ್ ಬಳಿ ಎರಡು ಬಸ್‌ ಬೆಂಕಿಗೆ ಆಹುತಿಯಾಗಿವೆ. ಹೆಬ್ಬಗೋಡಿ ಠಾಣೆ ಆವರಣದಲ್ಲಿ ನಿಲ್ಲಿಸಿದ್ದ ಜಪ್ತು ವಾಹನಗಳಿಗೆ ಬೆಂಕಿ ಹಚ್ಚಿದ್ದು, ಭಸ್ಮವಾಗಿವೆ. ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಪರಿಸ್ಥಿತಿ ಕೈ ಮೀರುತ್ತಿರುವುದನ್ನು ತಡೆಯಲು ಅಶ್ರುವಾಯು ಪ್ರಯೋಗಿದ್ದಾರೆ. 10 ಮಂದಿಯನ್ನು ಬಂಧಿಸಲಾಗಿದೆ.

ತೀವ್ರ ಸ್ವರೂಪ ಪಡೆದ ಪ್ರತಿಭಟನೆಯಿಂದ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ಸೇರಿದಂತೆ 30ಕ್ಕೂ ಹೆಚ್ಚು ವಾಹನಗಳಿಗೆ ಹಾನಿಯಾಗಿದೆ.

ಹೆಬ್ಬಗೋಡಿ ಠಾಣೆಗೆ ನುಗ್ಗಿದ ಪ್ರತಿಭಟನಾಕಾರರು ಠಾಣೆ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಠಾಣೆ ಆವರಣದಲ್ಲಿ ನಿಲ್ಲಿಸಿದ್ದ ಜಪ್ತಿ ವಾಹನಗಳಿಗೆ ಬೆಂಕಿ ಹಾಕಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಅಲ್ಲಿಯೇ ಇದ್ದ 150 ಅಡುಗೆ ಅನಿಲ ಸಿಲಿಂಡರ್‌ಗೆ ವ್ಯಾಪಿಸುವ ಮುನ್ನ ಅಗ್ನಿ ಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ಬೆಂಕಿ ನಂದಿಸಿದರು. ಇದರಿಂದ ಭಾರಿ ದುರಂತ ತಪ್ಪಿದೆ. ಘಟನೆ ಸಂಬಂಧ ಪೊಲೀಸರು 10 ಮಂದಿಯನ್ನು ಬಂಧಿಸಿದ್ದಾರೆ.

ಪ್ರತಿಭಟನಾಕಾರರು ಇಲ್ಲಿನ ಬಯೋಕಾನ್ ಸಂಸ್ಥೆ ಆವರಣಕ್ಕೆ ನುಗ್ಗಿ ಭದ್ರತಾ ಸಿಬ್ಬಂದಿ ಇದ್ದ ಕೊಠಡಿಗೆ ಬೆಂಕಿ ಹಚ್ಚಿದ್ದಾರೆ. ಉಪಕರಣಗಳನ್ನು ರಸ್ತೆಗೆ ತಂದು ಹಾಕಿ ಕಾರು ಹಾಗೂ ಉಪಕರಣಗಳಿಗೆ ಬೆಂಕಿ ಇಟ್ಟಿದ್ದಾರೆ.  

ಸಿದ್ದ ಉಡುಪು ಕಾರ್ಖಾನೆ ಕಾರ್ಮಿಕರು ಮೈಸೂರು ರಸ್ತೆ, ತುಮಕೂರು, ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ಸಂಚಾರ ವ್ಯತ್ಯಯವಾಗಿದೆ. ಒಂದೆರೆಡು ಕಿಲೋ ಮೀಟರ್ ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.