ADVERTISEMENT

ಬಾತ್‌ರೂಮ್‌ಗಳಲ್ಲ, ಬೆಡ್‌ರೂಮ್‌!

​ಪ್ರಜಾವಾಣಿ ವಾರ್ತೆ
Published 23 ಜುಲೈ 2014, 19:30 IST
Last Updated 23 ಜುಲೈ 2014, 19:30 IST
ವಿಧಾನ ಪರಿಷತ್ತಿನಲ್ಲಿ ಜಿ.ಪರಮೇಶ್ವರ್‌ ಅವರು ಎಂ.ಪಿ.ಪಾಟೀಲ್‌ ಮತ್ತು ಶಿವರಾಜ್‌ ತಂಗಡಗಿ ಜೊತೆ ಮಾತುಕತೆಯಲ್ಲಿ ತೊಡಗಿದ್ದರು
ವಿಧಾನ ಪರಿಷತ್ತಿನಲ್ಲಿ ಜಿ.ಪರಮೇಶ್ವರ್‌ ಅವರು ಎಂ.ಪಿ.ಪಾಟೀಲ್‌ ಮತ್ತು ಶಿವರಾಜ್‌ ತಂಗಡಗಿ ಜೊತೆ ಮಾತುಕತೆಯಲ್ಲಿ ತೊಡಗಿದ್ದರು   

ಬೆಂಗಳೂರು: ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರ ಹಾಗೂ ನ್ಯಾಯಾಧೀಶರ ವಸತಿ ಗೃಹ ನಿರ್ಮಾಣದ ವಿಷಯವಾಗಿ ವಿಧಾನಸಭೆಯಲ್ಲಿ ಬುಧವಾರ ಸುದೀರ್ಘ ಚರ್ಚೆ ನಡೆಯಿತು.

‘ಪ್ರವಾಸಿ ಮಂದಿರಗಳ ಬಾತ್‌ರೂಮ್‌ಗಳೇ ಬೆಡ್‌ರೂಮ್‌ ತರಹ ಇವೆ. ಅಷ್ಟೊಂದು ದೊಡ್ಡ ಗಾತ್ರದ ರೂಮ್‌ಗಳನ್ನು ನೋಡಿ ಗಾಬರಿ ಆಗುತ್ತದೆ. ವಿಶ್ರಾಂತಿ ಉದ್ದೇಶದಿಂದ ನಿರ್ಮಿಸಿದ ಈ ರೂಮ್‌ಗಳು ಚಿಕ್ಕದಾಗಿ ಇದ್ದಷ್ಟೂ ಒಳ್ಳೆಯದು. ನ್ಯಾಯಾಧೀಶರ ವಸತಿ ಗೃಹಗಳಲ್ಲಿ ವಾಸವಾಗಿರಲು ಸ್ವತಃ ನ್ಯಾಯಾಧೀಶರಿಗೇ ಹೆದರಿಕೆ ಆಗಬೇಕು. ಅಷ್ಟೊಂದು ದೊಡ್ಡದಾಗಿವೆ. ಕಟ್ಟಡ ನಿರ್ಮಾಣದಲ್ಲಿ ಹಣ ಪೋಲು ಮಾಡಲಾಗಿದೆ’ ಎಂದು ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ, ‘ಆ ಪ್ರವಾಸಿ ಮಂದಿರ ಹಾಗೂ ವಸತಿ ಗೃಹಗಳನ್ನು ನಮ್ಮ (ಜೆಡಿಎಸ್‌–ಬಿಜೆಪಿ) ಅವಧಿಯಲ್ಲೇ ಕಟ್ಟಿಸಿದ್ದು. ದೊಡ್ಡ ಮನೆಯಲ್ಲಿ ನ್ಯಾಯಾಧೀಶರು ಖುಷಿಯಾಗಿದ್ದರೆ ಪ್ರಕರಣಗಳು ಬೇಗ ಇತ್ಯರ್ಥವಾಗುತ್ತವೆ ಎಂಬ ಅಪೇಕ್ಷೆಯಿಂದ ಅಂತಹ ಗೃಹಗಳನ್ನು ನಿರ್ಮಿಸಲಾಯಿತು’ ಎಂದು ತಿಳಿಸಿದರು.

‘ಕಟ್ಟಡ ನಿರ್ಮಾಣದಲ್ಲಿ ಲೋಪ ಆಗಿದ್ದು, ಮುಂದಿನ ದಿನಗಳಲ್ಲಿ ವಿನ್ಯಾಸ ಮಾಡುವಾಗ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಬೇಕು’ ಎಂದು ಇಬ್ಬರೂ ನಾಯಕರು ಅಭಿಪ್ರಾಯಪಟ್ಟರು.

‘ಹೊಸ ಸರ್ಕಾರ ಬಂದಮೇಲೆ ಗೋಡೆ ಒಡೆಯೋದು, ಸುಣ್ಣ ಬಳಿಯೋದು, ಬರಿ ಇಂತಹ ಕೆಲಸಗಳೇ ನಡೆದಿವೆ. ರಿಪೇರಿಗೆ ಮಾಡಿದ ಖರ್ಚಿನಲ್ಲಿ ಹೊಸ ಕಟ್ಟಡವನ್ನೇ ಕಟ್ಟಬಹುದು’ ಎಂದು ಶೆಟ್ಟರ್‌ ಹೇಳಿದರು. ‘ನಮ್ಮ ವಿಧಾನಸೌಧ ಸಹ ಸೋರುತ್ತಿದೆ. ಇಲ್ಲಿ ಎಲ್ಲ ತರಹದ ಹೆಗ್ಗಣಗಳೂ ಓಡಾಡುತ್ತಿವೆ’ ಎಂದು ವ್ಯಂಗ್ಯವಾಡಿದರು.

‘ಹಸಿರು ಕಟ್ಟಡ ಎಂದರೆ ನಮ್ಮ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಟ್ಟಡಕ್ಕೆ ಹಸಿರು ಬಣ್ಣ ಬಳಿಯುವುದು ಎಂದುಕೊಂಡಿದ್ದಾರೆ. ಆದರೆ, ಕಡಿಮೆ ಖರ್ಚಿನ, ಒಳ್ಳೆಯ ಗಾಳಿ–ಬೆಳಕಿನ ಪರಿಸರ ಸ್ನೇಹಿ ಕಟ್ಟಡದ ಕಲ್ಪನೆ ಅದು. ಎ.ಸಿ ಹಾಕದಂತೆ ಕಟ್ಟಡದ ವಿನ್ಯಾಸ ಮಾಡಲು ನಮ್ಮ ಅಧಿಕಾರಿಗಳಿಗೆ ಬರುವುದಿಲ್ಲ’ ಎಂದು ಅವರು ಲೇವಡಿ ಮಾಡಿದರು.

‘ಹೆದ್ದಾರಿಗಳಲ್ಲಿ ಟೋಲ್‌ ಹಾವಳಿ ಹೆಚ್ಚಾಗಿದೆ. ರಸ್ತೆ ನಿರ್ಮಾಣ ಮಾಡಿದ ಖಾಸಗಿ ಸಂಸ್ಥೆಗಳು ಈಗಾಗಲೇ ಹಾಕಿದ ಬಂಡವಾಳವನ್ನು ವಾಪಸ್‌ ಪಡೆದಿದ್ದರೂ ಅವುಗಳಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕುಮಾರಸ್ವಾಮಿ ಅವರು, ‘ಬೆಂಗಳೂರಿನಲ್ಲಿ ಮೂರು ತಿಂಗಳ ಹಿಂದಷ್ಟೇ ಟಾರು ಹಾಕಲಾಗಿದೆ. ಸಣ್ಣ ಮಳೆಗೆ ಎಲ್ಲ ರಸ್ತೆಗಳು ಗುಂಡಿ ಬಿದ್ದಿವೆ. ಇದಕ್ಕೆ ಯಾರು ಹೊಣೆ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.