ADVERTISEMENT

ಬಾಹ್ಯಾಕಾಶ ವಿಜ್ಞಾನಿ ಯು.ಆರ್‌. ರಾವ್‌ ನಿಧನ

​ಪ್ರಜಾವಾಣಿ ವಾರ್ತೆ
Published 24 ಜುಲೈ 2017, 8:09 IST
Last Updated 24 ಜುಲೈ 2017, 8:09 IST
ಬಾಹ್ಯಾಕಾಶ ವಿಜ್ಞಾನಿ ಯು.ಆರ್‌. ರಾವ್‌ ನಿಧನ
ಬಾಹ್ಯಾಕಾಶ ವಿಜ್ಞಾನಿ ಯು.ಆರ್‌. ರಾವ್‌ ನಿಧನ   

ಬೆಂಗಳೂರು: ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಪ್ರೊ.ಯು.ಆರ್‌. ರಾವ್‌ ಅವರು ಭಾನುವಾರ ತಡರಾತ್ರಿ ನಿಧನರಾಗಿದ್ದಾರೆ.

ರಾವ್‌ ಅವರಿಗೆ 85 ವರ್ಷ ವಯಸ್ಸಾಗಿತ್ತು. ಅವರು ಬಹಳ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಬೆಂಗಳೂರಿನ ಇಂದಿರಾ ನಗರದಲ್ಲಿನ ತಮ್ಮ ನಿವಾಸದಲ್ಲಿ ರಾತ್ರಿ 2.55ಕ್ಕೆ ನಿಧನರಾದರು ಎಂದು ಮೂಲಗಳು ತಿಳಿಸಿವೆ.

ರಾವ್‌ ಅವರಿಗೆ ಪತ್ನಿ ಯಶೋಧ ರಾವ್‌, ಪುತ್ರ ಮಧನ್‌ ರಾವ್‌, ಪುತ್ರಿ ಮಾಲಾ ರಾವ್‌ ಇದ್ದಾರೆ.

ADVERTISEMENT

ಅಂತಿಮ ದರ್ಶನ

ರಾವ್‌ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಇಂದಿರಾ ನಗರದಲ್ಲಿನ ಅವರ ನಿವಾಸದಲ್ಲಿ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 3ರ ನಂತರ ಹೆಬ್ಬಾಳದ ಎಸ್‌ಪಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಹುಟ್ಟೂರು ಉಡುಪಿ ಜಿಲ್ಲೆಯ ಅದಮಾರುನಿಂದ ಇಸ್ರೊವರೆಗೆ...

ಭಾರತೀಯ ಭಾಹ್ಯಾಕಾಶ ಸಂಶೋಧನಾ ಕೇಂದ್ರದ ಸಾಧನೆಗಳಿಗೆ ಅವಿರತ ಶ್ರಮದ ಮೂಲಕ ಅಡಿಪಾಯ ಹಾಕಿದ ವಿಜ್ಞಾನಿ ಪ್ರೊ.ಯು.ಆರ್. ರಾವ್ ಅವರ ಹುಟ್ಟೂರು ಉಡುಪಿ ಜಿಲ್ಲೆಯ ಅದಮಾರು ಗ್ರಾಮ.

1932ರ ಮಾರ್ಚ್ 10ರಂದು ತಂದೆ ಲಕ್ಷ್ಮಿ ನಾರಾಯಣ ಆಚಾರ್ಯ ಮತ್ತು ಕೃಷ್ಣವೇಣಿ ಅವರ ಪುತ್ರರಾಗಿ ಜನಿಸಿದರು. ಬಡ ಕುಟುಂಬದಲ್ಲಿ ಜನಿಸಿದ ಅವರು ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲ್‌ನಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದರು. ಆ ನಂತರ ಅವರ ಕುಟುಂಬ ಬಳ್ಳಾರಿಗೆ ಸ್ಥಳಾಂತರವಾಯಿತು.

ಉನ್ನತ ಶಿಕ್ಷಣ ಪಡೆದು ವಿಜ್ಞಾನಿಯಾಗಿ ದೊಡ್ಡ ಸಾಧನೆ ಮಾಡಿದ ಅವರು, ಉಡುಪಿಯ ಬಗ್ಗೆ ಅಪಾರ ಪ್ರೀತಿ ಹೊಂದಿದ್ದರು. ಪದ್ಮವಿಭೂಷಣಕ್ಕೆ ಭಾಜನರಾದ ನಂತರ ಉಡುಪಿಗೆ ಭೇಟಿ ನೀಡಿದ್ದರು. ಪೂರ್ಣಪ್ರಜ್ಞ ವಿದ್ಯಾ ಸಂಸ್ಥೆಯಲ್ಲಿ ನಡೆದ ವಿಜ್ಞಾನ ಸಮ್ಮೇಳನಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದ ಅವರು ಉಡುಪಿ ಬಗ್ಗೆ ತಮಗಿರುವ ಅವಿನಾಭಾವ ಸಂಬಂಧದ ಬಗ್ಗೆ ಮಾತನಾಡಿದ್ದರು.

ಇಸ್ರೊ ಮುಖ್ಯಸ್ಥರಾಗಿ ಸೇವೆ

ಬಾಹ್ಯಾಕಾಶ ಶಾಸ್ತ್ರ ಮತ್ತು ಉಪಗ್ರಹ ತಂತ್ರಜ್ಞಾನ ಕ್ಷೇತ್ರದಲ್ಲಿ ಪರಿಣಿತಿ ಗಳಿಸಿದ್ದ ರಾವ್‌ ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ) ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.

ಪ್ರೊ.ಯು.ಆರ್‌.ರಾವ್‌ ಅವರು ಪ್ರತಿಷ್ಠಿತ ‘ಐಎಎಫ್‌ ಹಾಲ್‌ ಆಫ್‌ ಫೇಮ್‌’ ಸೇರ್ಪಡೆ ಗೌರವಕ್ಕೆ ಪಾತ್ರರಾಗಿದ್ದರು. ಇಂಟರ್‌ನ್ಯಾಷನಲ್‌ ಏರೋನಾಟಿಕಲ್‌ ಫೆಡರೇಷನ್‌ (ಐಎಎಫ್‌) ನೀಡುವ ಈ ಗೌರವ ಅಂತರಿಕ್ಷ ವಿಜ್ಞಾನಿಗಳ ಪಾಲಿಗೆ ಅತ್ಯುನ್ನತವಾದುದು.

2016ರ ಸೆ. 30ರಂದು ಮೆಕ್ಸಿಕೊದಲ್ಲಿ ನಡೆದ ಇಂಟರ್‌ ನ್ಯಾಷನಲ್‌ ಏರೋನಾಟಿಕಲ್‌ ಕಾಂಗ್ರೆಸ್‌ ಸಮಾವೇಶದಲ್ಲಿ ರಾವ್‌ ಅವರ ಹೆಸರನ್ನು ಹಾಲ್‌ ಆಫ್‌ ಫೇಮ್‌ಗೆ ಸೇರ್ಪಡೆ ಮಾಡಲು ತೀರ್ಮಾನಿಸಲಾಗಿತ್ತು.

ಕನ್ನಡಿಗರೇ ಆದ ಯು.ಆರ್‌.ರಾವ್‌ ಅವರು ಭಾರತೀಯ ಕೃತಕ ಉಪಗ್ರಹ ತಂತ್ರಜ್ಞಾನ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದ್ದರು. ಭಾರತದ ಚೊಚ್ಚಲ ಉಪಗ್ರಹ ‘ಆರ್ಯಭಟ’ ಯೋಜನಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು.

ಹಾಲ್‌ ಆಫ್‌ ಫೇಮ್‌ ಎಂದರೇನು?
ಅಂತರ ರಾಷ್ಟ್ರೀಯ ವೈಮಾನಿಕ ಫೆಡರೇಷನ್‌ ಸಂಸ್ಥೆ ಬಾಹ್ಯಾಕಾಶ ವಿಜ್ಞಾನದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ವ್ಯಕ್ತಿಗಳ ಸಾಧನೆ ಬಣ್ಣಿಸುವ ಕಾಯಂ ಗ್ಯಾಲರಿಯನ್ನು  ಸ್ಥಾಪಿಸಿದೆ. ಹಾಲ್‌ ಆಫ್‌ ಫೇಮ್‌ ಗೌರವಕ್ಕೆ ಪಾತ್ರರಾಗುವ ವ್ಯಕ್ತಿಗಳ ಕುರಿತ ಬಿನ್ನವತ್ತಳೆ, ಜೀವನಕ್ಕೆ ಸಂಬಂಧಿಸಿದ ಮಾಹಿತಿ ಮತ್ತು ಚಿತ್ರವನ್ನು ಗ್ಯಾಲರಿಯಲ್ಲಿ ಪ್ರಕಟಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.