ADVERTISEMENT

ಬಿಎಸ್‌ವೈ– ಈಶ್ವರಪ್ಪ ಒಂದೇ ಜೀವ ಎರಡು ದೇಹ, ‘ಇಂದು, ಮುಂದೆ ಹಾಗೆಯೇ ಇರುತ್ತೇವೆ’

​ಪ್ರಜಾವಾಣಿ ವಾರ್ತೆ
Published 17 ಮೇ 2017, 9:36 IST
Last Updated 17 ಮೇ 2017, 9:36 IST
ಬಿಎಸ್‌ವೈ– ಈಶ್ವರಪ್ಪ ಒಂದೇ ಜೀವ ಎರಡು ದೇಹ, ‘ಇಂದು, ಮುಂದೆ ಹಾಗೆಯೇ ಇರುತ್ತೇವೆ’
ಬಿಎಸ್‌ವೈ– ಈಶ್ವರಪ್ಪ ಒಂದೇ ಜೀವ ಎರಡು ದೇಹ, ‘ಇಂದು, ಮುಂದೆ ಹಾಗೆಯೇ ಇರುತ್ತೇವೆ’   

ಕೊಪ್ಪಳ: ‘ಬಿ.ಎಸ್‌.ಯಡಿಯೂರಪ್ಪ ಮತ್ತು ನಾನು ಒಂದೇ ಜೀವ ಎರಡು ದೇಹ ನಿಜ. ಹಿಂದೆಯೂ ಹಾಗಿದ್ದೆವು ಇಂದೂ ಇದ್ದೇವೆ. ಮುಂದೆಯೂ ಇರುತ್ತೇವೆ’. – ಹೀಗೆಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ನಾನು ರಾಯಣ್ಣ ಬ್ರಿಗೇಡ್‌ನ ಯಾವುದೇ ಪದಾಧಿಕಾರಿ ಅಲ್ಲ. ಹಿಂದುಳಿದವರು, ದಲಿತರು, ದೌರ್ಜನ್ಯಕ್ಕೊಳಗಾದವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನ್ಯಾಯ ಕೊಡಲಿಲ್ಲ ಎಂಬ ಸಿಟ್ಟು ಇದೆ. ಅದಕ್ಕಾಗಿ ಹುಟ್ಟಿಕೊಂಡ ಸಂಘಟನೆ ಅದು’ ಎಂದರು.

‘ಬ್ರಿಗೇಡ್‌ ಸಂಘಟನೆ ತನ್ನ ಕೆಲಸ ನಿಲ್ಲಿಸುವುದಿಲ್ಲ. ತುಳಿತಕ್ಕೊಳಗಾದವರಿಗೆ ನ್ಯಾಯ ಕೊಡುವ ನಿಟ್ಟಿನಲ್ಲಿ ಸಂಘಟನೆಯವರು ಎಲ್ಲಿಗೆ ಕರೆದರೂ ಹೋಗುತ್ತೇನೆ. ಯಡಿಯೂರಪ್ಪ ಅವರಿಗೆ ಈ ಸಂಘಟನೆಯ ಕೆಲವು ವಿಷಯಗಳ ಬಗ್ಗೆ ಅಸಮಾಧಾನ ಇದೆ. ಏಕೆ ಎಂದು ಅವರನ್ನೇ ಕೇಳಿ’ ಎಂದು ಹೇಳಿದರು.

ADVERTISEMENT

‘ನಮ್ಮ ಪಕ್ಷದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಇವೆ. ಅದನ್ನು ಶೇ 100ರಷ್ಟು ಬಗೆಹರಿಸಿಕೊಳ್ಳುತ್ತೇವೆ. ಕಾಂಗ್ರೆಸ್‌ ಮುಕ್ತ ಕರ್ನಾಟಕ ಮಾಡುವುದೂ ನಿಜ. ಯಡಿಯೂರಪ್ಪ ನೇತೃತ್ವದಲ್ಲಿ ಮುಂದಿನ ಚುನಾವಣೆ ನಡೆಯಲಿದೆ’ ಎಂದು ಅವರು ಸ್ಪಷ್ಟಪಡಿಸಿದರು.

ರಾಯರಡ್ಡಿ ಹರಿದಾಸ!
‘ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ವ್ಯಾಪಕವಾಗಿದೆ. ಇಡೀ ರಾಜ್ಯದಲ್ಲಿ ಮರಳುಗಾರಿಕೆ ಕುರಿತು ಸ್ಪಷ್ಟವಾದ ನೀತಿ ಬೇಕು. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ವಿಧಾನಸಭೆಯಲ್ಲಿ ಚೆನ್ನಾಗಿ ಹರಿಕಥೆ ಮಾಡುತ್ತಾರೆ’ ಎಂದು ವ್ಯಂಗ್ಯವಾಡಿದರು.

‘ತಾಕತ್ತಿದ್ದರೆ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ನಿಯಂತ್ರಿಸಲಿ. ಹಲವು ಸಮಸ್ಯೆಗಳನ್ನು ಬಗೆಹರಿಸಲಿ. ಇಲ್ಲವಾದರೆ ರಾಜೀನಾಮೆ ಕೊಡಲಿ’ ಎಂದು ಆಗ್ರಹಿಸಿದರು. ಮರಳುಗಾರಿಕೆ ಮೂಲಕ ರಾಯರಡ್ಡಿ ಅವರಿಗೆ ಪ್ರತಿದಿನ ಏನಾದರೂ ಸಂದಾಯವಾಗುತ್ತಿದೆಯೇನೋ ಎಂಬ ಅನುಮಾನ ಇದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.