ADVERTISEMENT

ಬಿಜೆಪಿಯೊಳಗೆ ಭಿನ್ನಮತದ ಹೊಗೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 19:30 IST
Last Updated 23 ಏಪ್ರಿಲ್ 2017, 19:30 IST
ಬಿಜೆಪಿಯೊಳಗೆ ಭಿನ್ನಮತದ ಹೊಗೆ
ಬಿಜೆಪಿಯೊಳಗೆ ಭಿನ್ನಮತದ ಹೊಗೆ   

ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನಗೊಂಡಿರುವ ಹಿರಿಯ ನಾಯಕರು ಭಾನುವಾರ ಬೆಂಗಳೂರಿನಲ್ಲಿ ಕರೆದಿದ್ದ ‘ಆತ್ಮಾವಲೋಕನ ಸಭೆ’ಗೆ ಗೈರು ಹಾಜರಾಗುವ ಮೂಲಕ ಪಕ್ಷದೊಳಗೆ ಭಿನ್ನಮತ ಇನ್ನೂ ಹೊಗೆಯಾಡುತ್ತಿದೆ ಎಂಬ ಸಂದೇಶ ರವಾನಿಸಿದ್ದಾರೆ.

ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪ ಚುನಾವಣೆ ಸೋಲಿನ ಪರಾಮರ್ಶೆ ನಡೆಸಲು ಮಲ್ಲೇಶ್ವರದ ಪಕ್ಷದ ಕಚೇರಿಯಲ್ಲಿ ಕರೆಯಲಾಗಿದ್ದ ಸಭೆಯಿಂದ ಹಿರಿಯ ನಾಯಕರಾದ ಜಗದೀಶ ಶೆಟ್ಟರ, ಕೆ.ಎಸ್‌. ಈಶ್ವರಪ್ಪ, ಪ್ರಹ್ಲಾದ ಜೋಶಿ ಸೇರಿದಂತೆ ಅನೇಕರು ದೂರ ಉಳಿದರು. 

‘ಈ ಸಭೆ ಕರೆದಿರುವ ಬಗ್ಗೆಯೇ ಉತ್ತರ ಕರ್ನಾಟಕದ ನಾಯಕರೊಬ್ಬರು ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಎರಡೂ ಕ್ಷೇತ್ರಗಳ ಪ್ರಚಾರಕ್ಕೆ ನಮ್ಮನ್ನು ಕರೆಯದೆ ಈಗ ಸೋಲಿನ ವಿಮರ್ಶೆಗೆ ಕರೆಯುತ್ತಿ ರುವ ಬಗ್ಗೆ  ಯಡಿಯೂರಪ್ಪನವರ ಆಪ್ತರ ಮುಂದೆ ಕಿಡಿ ಕಾರಿದ್ದಾರೆ’ ಎನ್ನಲಾಗಿದೆ.

ADVERTISEMENT

ಪಕ್ಷದೊಳಗಿನ ಬಿಕ್ಕಟ್ಟು ಪರಿಹರಿಸಲು ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ನಾಲ್ವರ ಸಮಿತಿ ರಚಿಸಿದ್ದಾರೆ. ಕಳೆದ ಫೆಬ್ರುವರಿ 10ರೊಳಗೆ ಎಲ್ಲ ಸಮಸ್ಯೆಗಳನ್ನು ಪರಿಹಾರ ಮಾಡು­ವಂತೆಯೂ ಅವರು ಸೂಚಿಸಿದ್ದರು. ಇದುವರೆಗೂ ಸಮಿತಿ ಸಭೆ ಕರೆದಿಲ್ಲ ಯಡಿಯೂರಪ್ಪ ಸರ್ವಾಧಿ­ಕಾರಿಯಂತೆ ವರ್ತಿಸುತ್ತಿದ್ದಾರೆ. ಶೋಭಾ ಕರಂದ್ಲಾಜೆ ಅವರು ಹೇಳಿದಂತೆ ಮಾತ್ರ ಕೇಳುತ್ತಿದ್ದಾರೆ. ಮಿಕ್ಕ ನಾಯಕರನ್ನು ಲೆಕ್ಕಕ್ಕೇ ಇಟ್ಟುಕೊಂಡಿಲ್ಲ ಎಂದು ಹೇಳಲಾಗುತ್ತಿದೆ.

ನಂಜನಗೂಡಿನಲ್ಲಿ ಬಿಜೆಪಿ ಸೋತಿಲ್ಲ. ಇದು ನನ್ನ ವೈಯಕ್ತಿಕ ಸೋಲು ಎಂದು ಶ್ರೀನಿವಾಸ್‌ ಪ್ರಸಾದ್‌ ಅವರು ಸಭೆಯಲ್ಲಿ ಹೇಳಿದರು.

ಜಗದೀಶ ಶೆಟ್ಟರ್‌ ಹಾಗೂ ಈಶ್ವರಪ್ಪ ಸಭೆಗೆ ಬರಲು ಸಾಧ್ಯವಾಗುತ್ತಿಲ್ಲ ಎಂದು ಮೊದಲೇ ಅನುಮತಿ ಪಡೆದಿದ್ದಾರೆ. ಈ ನಾಯಕರ ಗೈರು ಹಾಜರಿಗೆ ಬೇರೆ ಅರ್ಥ ಕಲ್ಪಿಸಬೇಕಾಗಿಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಹೇಳಿದರು.

27ಕ್ಕೆ ಅತೃಪ್ತರ ಸಭೆ
ಇದೇ 27ರಂದು ಬಿಜೆಪಿ ಅತೃಪ್ತ ನಾಯಕರು ಬೆಂಗಳೂರಿನಲ್ಲಿ ಸಭೆ ಕರೆದಿದ್ದಾರೆ. ಯಡಿಯೂರಪ್ಪ ಹಾಗೂ ಅವರ ಆಪ್ತರು ಪಕ್ಷವನ್ನು ಹೇಗೆ ಹಾಳುಮಾಡುತ್ತಿದ್ದಾರೆ ಎಂಬ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.