ADVERTISEMENT

ಬಿಬಿಎಂಪಿ ವಿಭಜನೆ: ವಿಧಾನಸಭೆಯಲ್ಲಿ ಕೋಲಾಹಲ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2015, 6:49 IST
Last Updated 20 ಏಪ್ರಿಲ್ 2015, 6:49 IST

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನು (ಬಿಬಿಎಂಪಿ) ಮೂರು ಪ್ರತ್ಯೇಕ ಪಾಲಿಕೆಗಳನ್ನಾಗಿ ವಿಭಜಿಸುವುದಕ್ಕೆ ಸಂಬಂಧಿಸಿದಂತೆ ಕಾನೂನಿಗೆ ತಿದ್ದುಪಡಿ ತರಲು ಇಂದು ವಿಧಾನಮಂಡಲದಲ್ಲಿ ಒಂದು ದಿನದ ವಿಶೇಷ ಅಧಿವೇಶನ ನಡೆಯುತ್ತಿದ್ದು,  ಇದಕ್ಕೆ ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಕರ್ನಾಟಕ ನಗರ ಪಾಲಿಕೆ (ತಿದ್ದುಪಡಿ) ಮಸೂದೆಯನ್ನು ಮಂಡಿಸಿದ ಕಾನೂನು ಸಚಿವ ಟಿ.ಬಿ ಜಯಚಂದ್ರ, ಕೆಲ ಆಡಳಿತಾತ್ಮಕ ಉದ್ದೇಶದಿಂದ ಬಿಬಿಎಂಪಿ ವಿಭಜನೆಗೆ ಮುಂದಾಗಿದ್ದೇವೆ, ಅಭಿವೃದ್ಧಿ ದೃಷ್ಟಿಯಿಂದ ಇದು ಅನಿವಾರ್ಯ  ಎಂದು  ವಿವರಣೆ ನೀಡಿದರು. ಆದರೆ, ವಿರೋಧ ಪಕ್ಷಗಳು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಬಿಬಿಎಂಪಿಯನ್ನು ಮೂರು ಭಾಗ ಮಾಡಿದರೆ ಬೆಂಗಳೂರು ಸಿಂಗಪುರ ಆಗುತ್ತಾ, ಇದು ಬೆಂಗಳೂರನ್ನು ಒಡೆಯುವ ಹುನ್ನಾರ ಎಂದು ಘೋಷಣೆ ಕೂಗಿದರು.

ವಿಧಾನಸಭೆಯಲ್ಲಿ ಮಸೂದೆ  ಅಂಗೀಕಾರವಾದ ನಂತರವೇ ಅದು ಪರಿಷತ್‌ಗೆ ಹೋಗುವುದು. ಹೀಗಾಗಿ ಪರಿಷತ್‌ ಕಲಾಪ ಇಂದು ಮಧ್ಯಾಹ್ನದ ನಂತರ ಆರಂಭವಾಗುವ ಸಾಧ್ಯತೆ ಇದೆ.

ಬಹುಮತ ಇಲ್ಲ: ವಿಧಾನಸಭೆಯಲ್ಲಿ ಬಹುಮತ ಹೊಂದಿರುವ ಆಡಳಿತಾರೂಢ ಕಾಂಗ್ರೆಸ್‌, ವಿಧಾನ ಪರಿಷತ್‌ನಲ್ಲಿ ಬಹುಮತದ ಕೊರತೆ ಎದುರಿಸುತ್ತಿದೆ. ಈ ಕಾರಣದಿಂದ ಬಿಬಿಎಂಪಿ ವಿಭಜನೆ ಮಸೂದೆ ಪರಿಷತ್‌ನಲ್ಲಿ ಅಂಗೀಕಾರ ಆಗುವುದು ಅನುಮಾನ ಎನ್ನಲಾಗಿದೆ.

75 ಸದಸ್ಯ ಬಲದ ಪರಿಷತ್‌ನಲ್ಲಿ ಅತಿ ಹೆಚ್ಚು ಅಂದರೆ 30 ಸದಸ್ಯರನ್ನು ಬಿಜೆಪಿ ಹೊಂದಿದೆ.  ಕಾಂಗ್ರೆಸ್‌ 28 ಮತ್ತು ಜೆಡಿಎಸ್‌ 12 ಸದಸ್ಯರನ್ನು ಹೊಂದಿವೆ.  ಬಿಬಿಎಂಪಿ ವಿಭಜನೆಗೆ ಬಿಜೆಪಿ ಮತ್ತು ಜೆಡಿಎಸ್‌ಗಳೆರಡೂ ವಿರೋಧ ವ್ಯಕ್ತಪಡಿಸುತ್ತಿವೆ.

ಒಂದು ವೇಳೆ ಪರಿಷತ್‌ನಲ್ಲಿ ಮಸೂದೆಗೆ ಒಪ್ಪಿಗೆ ಸಿಗದೇ ಇದ್ದಲ್ಲಿ ಪುನಃ ಅದನ್ನು ವಿಧಾನಸಭೆಯಲ್ಲಿ ಮಂಡಿಸಿ, 2ನೇ ಬಾರಿ ಒಪ್ಪಿಗೆ ಪಡೆಯುವ ಅವಕಾಶ  ಸರ್ಕಾರಕ್ಕೆ ಇದೆ. ಆಗ ಪರಿಷತ್ತಿನ ಅಂಗೀಕಾರದ ಅಗತ್ಯ ಇರುವುದಿಲ್ಲ. ಬಳಿಕ ಅದನ್ನು ರಾಜ್ಯಪಾಲರ ಅನುಮೋದನೆಗೆ ಕಳುಹಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT