ADVERTISEMENT

ಬೂತ್‌ ಏಜೆಂಟರಿಗೆ ರಾಹುಲ್ ‘ಪಾಠ’

ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಕಾರ್ಯತಂತ್ರ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2017, 20:20 IST
Last Updated 19 ಆಗಸ್ಟ್ 2017, 20:20 IST
ಬೂತ್‌ ಏಜೆಂಟರಿಗೆ ರಾಹುಲ್ ‘ಪಾಠ’
ಬೂತ್‌ ಏಜೆಂಟರಿಗೆ ರಾಹುಲ್ ‘ಪಾಠ’   

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಗೆ ಕಾರ್ಯತಂತ್ರ ರೂಪಿಸುತ್ತಿರುವ ರಾಜ್ಯ ಕಾಂಗ್ರೆಸ್‌, ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರಿಂದ ಪಕ್ಷದ ಬೂತ್‌ ಮಟ್ಟದ ಏಜೆಂಟರಿಗೆ ರಾಜಕೀಯ ‘ಪಾಠ’ ಮಾಡಿಸಲು ನಿರ್ಧರಿಸಿದೆ.

‘ಮುಂದಿನ ತಿಂಗಳು ರಾಜ್ಯ ಪ್ರವಾಸ ಕೈಗೊಳ್ಳಲಿರುವ ರಾಹುಲ್ ಗಾಂಧಿ, ಪಕ್ಷದ ಸುಮಾರು 66 ಸಾವಿರ ಬೂತ್ ಏಜೆಂಟರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಹೀಗಾಗಿ, ಇದೇ 30ರ ಒಳಗಾಗಿ ಬೂತ್‌ ಸಮಿತಿ, ವಾರ್ಡ್‌ ಸಮಿತಿಗಳನ್ನು ಕಡ್ಡಾಯವಾಗಿ ರಚಿಸಬೇಕು. ಈ ಕುರಿತು ಪೂರ್ಣ ಮಾಹಿತಿ ನೀಡಬೇಕು’ ಎಂದು ಕೆಪಿಸಿಸಿ ಪದಾಧಿಕಾರಿಗಳಿಗೆ ಅಧ್ಯಕ್ಷ ಜಿ. ಪರಮೇಶ್ವರ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಪದಾಧಿಕಾರಿಗಳ ಸಭೆ ನಡೆಸಿದ ಪರಮೇಶ್ವರ, ’ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಉದ್ದೇಶದಿಂದ ನಿಮಗೆ ಹೊಣೆಗಾರಿಕೆ ವಹಿಸಿರುವ ಕ್ಷೇತ್ರಗಳಲ್ಲಿ ಹೆಚ್ಚಿನ ಸಮಯ ವಿನಿಯೋಗಿಸಬೇಕು. ಜಿಲ್ಲಾ ಮತ್ತು ಬ್ಲಾಕ್‌ ಅಧ್ಯಕ್ಷರ ಸಹಯೋಗ ಪಡೆದು, ನಿಮ್ಮ ಪ್ರಭಾವ ಮತ್ತು ಕಾರ್ಯತಂತ್ರ ಬಳಸಿ ತಕ್ಷಣದಿಂದಲೇ ಕಾರ್ಯಪ್ರವೃತ್ತರಾಗಬೇಕು’ ಎಂದು ನಿರ್ದೇಶನ ನೀಡಿದ್ದಾರೆ.

ADVERTISEMENT

‘ಪ್ರತಿಯೊಬ್ಬ ಪದಾಧಿಕಾರಿ ಜವಾಬ್ದಾರಿ ಅರಿತು ಕೆಲಸ ಮಾಡಬೇಕು. 2013ರ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಪಕ್ಷ ಬಹುತೇಕ ಈಡೇರಿಸಿದೆ. ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನಸಾಮಾನ್ಯರ ಮನೆ ಬಾಗಿಲಿಗೆ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ತಲುಪಿಸಬೇಕು’ ಎಂದು  ಸಲಹೆ ನೀಡಿದ್ದಾರೆ.

ಶನಿವಾರ ಬೆಳಿಗ್ಗೆ ಕೆಪಿಸಿಸಿ ಪದಾಧಿಕಾರಿಗಳು ಮತ್ತು ಜಿಲ್ಲಾ ಘಟಕಗಳ ಅಧ್ಯಕ್ಷರ ಸಭೆ ನಡೆಸಿದ ಅವರು, ಸಂಘಟನೆ ಚುರುಕುಗೊಳಿಸಲು ಕೈಗೊಂಡಿರುವ ಕಾರ್ಯಕ್ರಮಗಳ ಕುರಿತು ಮಾಹಿತಿ ಪಡೆದರು.

ಜಿಲ್ಲಾ ಅಧ್ಯಕ್ಷರ ಬದಲಾವಣೆ?:

23 ಜಿಲ್ಲಾ ಘಟಕಗಳ ಅಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆ ನಡೆದಿದ್ದು, ಗೊಂದಲಗಳಿರುವ ಹಾಸನ, ಮಂಡ್ಯ, ವಿಜಯಪುರ ಮತ್ತು ಬಳ್ಳಾರಿ ಜಿಲ್ಲಾ ಮುಖಂಡರ ಜೊತೆ ಪರಮೇಶ್ವರ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು.

‘ಒಬ್ಬರಿಗೆ ಒಂದೇ ಹುದ್ದೆ ನೀತಿ ಪಾಲಿಸಲು ನಿರ್ಧರಿಸಲಾಗಿದೆ. ಹಾಸನದ ಅಧ್ಯಕ್ಷ ಗಂಡಸಿ ಶಿವರಾಮ್ ಕೆಪಿಸಿಸಿ ಉಪಾಧ್ಯಕ್ಷ, ಮಂಡ್ಯ ಜಿಲ್ಲಾಧ್ಯಕ್ಷ ಆತ್ಮಾನಂದ ಪ್ರಧಾನ ಕಾರ್ಯದರ್ಶಿ, ವಿಜಯಪುರ ಜಿಲ್ಲಾಧ್ಯಕ್ಷ ರವಿಗೌಡ ಪಾಟೀಲ ಕಾರ್ಯದರ್ಶಿ, ಬಳ್ಳಾರಿ ಜಿಲ್ಲಾಧ್ಯಕ್ಷ ಅಂಜನೇಯಲು ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆಗಿದ್ದಾರೆ. ಹೀಗಾಗಿ ಈ ನಾಲ್ಕೂ ಜಿಲ್ಲೆಗಳ ಅಧ್ಯಕ್ಷರನ್ನು ಬದಲಿಸಲು ಪಕ್ಷ ಉದ್ದೇಶಿಸಿದೆ ಎಂದೂ ಮೂಲಗಳು ತಿಳಿಸಿವೆ.

ಬಳ್ಳಾರಿ ಜಿಲ್ಲಾಧ್ಯಕ್ಷರ ಬದಲಾವಣೆ ಕುರಿತಂತೆ ಸಚಿವ ಸಂತೋಷ್ ಲಾಡ್, ಹಿರಿಯ ನಾಯಕ ಕೆ.ಸಿ.ಕೊಂಡಯ್ಯ ಮತ್ತು ಇತರ ಮುಖಂಡರ ಜೊತೆ ಪರಮೇಶ್ವರ ಮಾತುಕತೆ ನಡೆಸಿದರು.ಮಂಡ್ಯ ಜಿಲ್ಲಾ ಘಟಕಕ್ಕೆ ವಿವೇಕಾಂದ ಹೆಸರನ್ನು ಶಾಸಕ ಅಂಬರೀಷ್ ಶಿಫಾರಸು ಮಾಡಿದ್ದಾರೆ. ಹಾಸನ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಎಸ್.ಎಂ.ಆನಂದ್ ಹೆಸರು ಕೇಳಿಬರುತ್ತಿದೆ.

***

ಸಚಿವರಿಗೆ ಪರಮೇಶ್ವರ ಸೂಚನೆ

‘ಎಐಸಿಸಿ ನೀಡಿದ ಸೂಚನೆಯಂತೆ ತಿಂಗಳಲ್ಲಿ ಎರಡು ದಿನ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಗೋಷ್ಠಿ ನಡೆಸಬೇಕು’ ಎಂದು ಸಚಿವರಿಗೆ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಸೂಚನೆ ನೀಡಿದ್ದಾರೆ.

ಇಲಾಖೆಯ ವ್ಯಾಪ್ತಿಯಲ್ಲಿ ಆಗಿರುವ ಅಭಿವೃದ್ಧಿ ಮತ್ತು ಪ್ರಗತಿಯ ಜೊತೆಗೆ ಕೇಂದ್ರ ಬಿಜೆಪಿ ಸರ್ಕಾರದ ವೈಫಲ್ಯಗಳ ಕುರಿತು ಜನರಿಗೆ ಮಾಹಿತಿ ನೀಡಬೇಕು. ವಿರೋಧ ಪಕ್ಷಗಳ ನಾಯಕರ ಟೀಕೆ ಟಿಪ್ಪಣಿಗಳ ಬಗ್ಗೆಯೂ ವಾಸ್ತವಾಂಶ ತಿಳಿಸಬೇಕು ಎಂದೂ ಅವರು ತಿಳಿಸಿದ್ದಾರೆ.

***

‘ಮಧುಮಗಳು ಚೆನ್ನಾಗಿದ್ದರೆ ಗಂಡುಗಳು ಹೆಚ್ಚು ಬರುತ್ತವೆ’

ಬೆಂಗಳೂರು: ‘ಮಧುಮಗಳು ಚೆನ್ನಾಗಿದ್ದರೆ ಮದುವೆಯಾಗಲು ಗಂಡುಗಳು ಹೆಚ್ಚು ಬರುತ್ತವೆ. ಅದರಲ್ಲಿ ವಿಶೇಷವೇನೂ ಇಲ್ಲ’ ಎಂದು ಹೇಳುವ ಮೂಲಕ ಹಿರಿಯ ಕಾಂಗ್ರೆಸ್ಸಿಗ ಸಿ.ಎಂ.ಇಬ್ರಾಹಿಂ, ತಮಗೆ ಜೆಡಿಎಸ್ ಸೇರುವ ಆಹ್ವಾನ ಬಂದಿದ್ದನ್ನು ಪರೋಕ್ಷವಾಗಿ ಒಪ್ಪಿಕೊಂಡರು.

‘ಜೆಡಿಎಸ್ ಸೇರಲು ಮುಂದಾಗಿದ್ದಕ್ಕಾಗಿ ವಿಧಾನ ಪರಿಷತ್‍ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್‌ ಟಿಕೆಟ್ ನೀಡಲಾಯಿತೆ’ ಎಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಇಬ್ರಾಹಿಂ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದು ಹೀಗೆ.

ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಜೊತೆ ಶನಿವಾರ ಮಾತುಕತೆ ನಡೆಸಿದ ಬಳಿಕ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ನನ್ನದು ಹಳೆಯ ಗೆಳೆತನ.‌ ಅವರೊಂದಿಗೆ ನಾನು ಯಾವತ್ತೂ ಮುನಿಸಿಕೊಂಡಿಲ್ಲ. ಅವರು ಆಗಾಗ ನನಗೆ ಒಳ್ಳೆಯ ಸಲಹೆಗಳನ್ನು ಕೊಡುತ್ತಿರುತ್ತಾರೆ’ ಎಂದರು.

‘ಮುಖ್ಯಮಂತ್ರಿ ಆಗಿರುವುದರಿಂದ ಅವರಿಗೆ ಹೆಚ್ಚು ಜವಾಬ್ದಾರಿ ಇವೆ. ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗುವ ಹೊಣೆಗಾರಿಕೆ ಇದೆ. ಕಾಂಗ್ರೆಸ್ಸನ್ನು ಮರಳಿ ಅಧಿಕಾರಕ್ಕೆ ತರುವ ಸಂಕಲ್ಪ ಮಾಡಲಾಗಿದೆ. ಈ ಸಂದರ್ಭದಲ್ಲಿ ಯಾವುದೇ ಆಮಿಷ ಬಂದರೂ ನಾನು ವಿಚಲಿತನಾಗಿಲ್ಲ. ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ಶ್ರಮಿಸುತ್ತೇನೆ’ ಎಂದರು.

‘ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿಯಾಗಿ ಆಯ್ಕೆ ಆಗಿದ್ದರಿಂದ ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ರಾಜೀನಾಮೆ ನೀಡಿದ್ದೇನೆ. ಸೋಮವಾರ ನಾಮಪತ್ರ ಸಲ್ಲಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.