ADVERTISEMENT

ಬೆತ್ತಲೆ ಬರ್ತಾನೆ, ಒಳಉಡುಪು ಧರಿಸ್ತಾನೆ...

ಬಲಗೈಯಲ್ಲಿ ಚಾಕು, ಎಡಗೈಯಲ್ಲಿ ಬಾಟಲಿ 

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 20:27 IST
Last Updated 20 ಮಾರ್ಚ್ 2017, 20:27 IST
ಬೆತ್ತಲೆ ಬರ್ತಾನೆ, ಒಳಉಡುಪು ಧರಿಸ್ತಾನೆ...
ಬೆತ್ತಲೆ ಬರ್ತಾನೆ, ಒಳಉಡುಪು ಧರಿಸ್ತಾನೆ...   

ಬೆಂಗಳೂರು: ರಾತ್ರಿ ಹಾಸ್ಟೆಲ್‌ಗೆ ಬೆತ್ತಲೆಯಾಗಿ ಬರುತ್ತಾನೆ. ಯುವತಿಯರು ಒಣಗಲು ಹಾಕಿರುವ ಒಳ ಉಡುಪುಗಳನ್ನು ಧರಿಸಿ ಖುಷಿಪಡುತ್ತಾನೆ. ಹುಡುಗಿಯರಂತೆ ನಡೆಯುತ್ತಾನೆ, ನಾಚುತ್ತಾನೆ.

ಈ ರೀತಿ ವಿಚಿತ್ರವಾಗಿ ವರ್ತಿಸುತ್ತಾ ಕಾಟ ಕೊಡುವ ಅಪರಿಚಿತ ಯುವಕ ನಗರದ ಮಹಾರಾಣಿ ಕಾಲೇಜು ವಿದ್ಯಾರ್ಥಿನಿಯರ ಪಾಲಿಗೆ ತಲೆನೋವಾಗಿ ಬಿಟ್ಟಿದ್ದಾನೆ.

ಮೂರು ಅಥವಾ ಆರು ತಿಂಗಳಿಗೊಮ್ಮೆ ಬಂದು ಹೋಗುವ ಈ ವ್ಯಕ್ತಿ ಯುವತಿಯರ ಒಳ ಉಡುಪುಗಳನ್ನೆಲ್ಲ ಕದ್ದೊಯ್ಯುತ್ತಿದ್ದಾನೆ. ಫೆ.12ರಂದು ರಾತ್ರಿ 12ಕ್ಕೆ ಹಾಸ್ಟೆಲ್‌ಗೆ ಆತ ಬಂದಿದ್ದ. ಆಗ ಆತನ ವಿಚಿತ್ರ ನಡವಳಿಕೆ  ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆ ದೃಶ್ಯವನ್ನೇ ಆಧರಿಸಿ ಹಾಸ್ಟೆಲ್‌ನ ವಾರ್ಡನ್‌ ಸುಮಿತ್ರಾ ಅವರು ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಗೆ ಸೋಮವಾರ ದೂರು ಕೊಟ್ಟಿದ್ದಾರೆ.

‘ಎರಡು ಮೂರು ವರ್ಷಗಳಿಂದ ಈ ವ್ಯಕ್ತಿಯು ಹಾಸ್ಟೆಲ್‌ಗೆ ಬರುತ್ತಿದ್ದಾನೆ. ಅವನಿಂದ ವಿದ್ಯಾರ್ಥಿನಿಯರಿಗೆ  ತೊಂದರೆಯಾಗಬಾರದು ಎಂದು ಕಟ್ಟಡದ ಎಲ್ಲ ಬಾಗಿಲುಗಳನ್ನು ರಾತ್ರಿ ಭದ್ರವಾಗಿ ಹಾಕುತ್ತೇವೆ. ಜತೆಗೆ ಬಾಗಿಲು ಹಾಗೂ ಕಿಟಕಿಗಳಿಗೆ ಪ್ರತ್ಯೇಕ ಕಬ್ಬಿಣದ ಸರಳುಗಳನ್ನು ಅಳವಡಿಸಿದ್ದೇವೆ. ಯಾರೊಬ್ಬರೂ ಒಳಗೆ ಬರಲು ಹಾಗೂ ಕಿಟಕಿಯಲ್ಲಿ ಕೈ ಹಾಕಲು ಸಾಧ್ಯವಿಲ್ಲ’ ಎಂದು ಸುಮಿತ್ರಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಬೆತ್ತಲೆ ಮೈಗೆ ಎಣ್ಣೆ– ಕೈಯಲ್ಲಿ ಚಾಕು
‘ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಹಾಸ್ಟೆಲ್‌ನ ಆವರಣ ಗೋಡೆ ಜಿಗಿದು ಒಳಬರುವ ಯುವಕ, ಕಟ್ಟಡದ ನೀರಿನ ಪೈಪ್‌ ಬಳಸಿ ಟೆರೇಸ್‌ಗೆ ಹತ್ತುತ್ತಾನೆ. ಬೆತ್ತಲೆಯಾಗಿರುವ ಆತ ಮೈ ತುಂಬ ಎಣ್ಣೆ ಸವರಿಕೊಂಡಿರುತ್ತಾನೆ. ಬಲಗೈಯಲ್ಲಿ ಚಾಕು, ಎಡಗೈಯಲ್ಲಿ ಬಾಟಲಿ ಹಿಡಿದುಕೊಂಡಿದ್ದ ದೃಶ್ಯಗಳು  ಸೆರೆಯಾಗಿವೆ. ಬಾಟಲಿಯಲ್ಲಿ ಆ್ಯಸಿಡ್ ತುಂಬಿಕೊಂಡಿರುವ ಸಾಧ್ಯತೆ ಇದೆ’ ಎಂದು ಸುಮಿತ್ರಾ ಹೇಳಿದರು.

‘ಇದುವರೆಗೂ ಯಾವುದೇ ವಿದ್ಯಾರ್ಥಿನಿಯರಿಗೆ ಈತನಿಂದ ತೊಂದರೆಯಾಗಿಲ್ಲ. ಆದರೆ,  ಅನೇಕ ವಿದ್ಯಾರ್ಥಿನಿಯರ ಒಳಉಡುಪುಗಳು ಕಾಣೆಯಾಗಿವೆ.  ಆತನ ಕೈಯಲ್ಲಿ  ಚಾಕು ಹಾಗೂ ಆ್ಯಸಿಡ್‌ ಬಾಟಲಿ ಇರುವುದರಿಂದ ಯಾವ ಸಮಯದಲ್ಲಿ ಏನಾಗುತ್ತದೋ ಎಂಬ ಭಯವಂತೂ ಇದ್ದೇ ಇದೆ’ ಎಂದರು.

‘ವಿದ್ಯಾರ್ಥಿನಿಯರು ಟೆರೇಸ್‌ ಮೇಲೆಯೇ ಬಟ್ಟೆ ತೊಳೆದು, ಅಲ್ಲೇ ಹಗ್ಗದ ಮೇಲೆ ಒಣಗಲು ಹಾಕುತ್ತಾರೆ. ಈ ಸ್ಥಳಕ್ಕೆ ಆ ಯುವಕ ಪದೇಪದೇ ಬಂದು ಹೋಗುತ್ತಿದ್ದಾನೆ. ಒಂದರ ಮೇಲೊಂದು ಪ್ಯಾಂಟಿಗಳನ್ನು ತೊಡುತ್ತಾನೆ. ಬಳಿಕ ಒಂದರ ಮೇಲೊಂದು ಬ್ರಾಗಳನ್ನು ಧರಿಸುತ್ತಾನೆ. ನಂತರ ಹೆಣ್ಣಿನಂತೆ ನಡೆಯುತ್ತಾನೆ, ನಾಚಿ, ನುಲಿಯುತ್ತಾನೆ.’

ಟೆರೇಸ್‌ನ ಕೊಠಡಿಯೊಂದರಲ್ಲಿ ಸಾಮಗ್ರಿಗಳನ್ನು ಇಡಲಾಗಿದೆ. ಅಲ್ಲಿಯ ತೆರೆದ ಕಿಟಕಿಗಳತ್ತ ಕಣ್ಣು ಹಾಯಿಸುವ ಯುವಕ ತನ್ನನ್ನು ಯಾರೋ ನೋಡುತ್ತಿದ್ದಾರೆ ಎಂಬಂತೆ  ವರ್ತಿಸುತ್ತಾನೆ. ಬಾಗುತ್ತಾ ಮುಂದೆ ಸಾಗುತ್ತಾನೆ. ಈ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ  ಎಂದು   ವಿದ್ಯಾರ್ಥಿನಿ ವಿವರಿಸಿದರು.



‘ಟೆರೇಸ್‌ಗೆ ಯುವಕನೊಬ್ಬ ಬಂದು  ಒಳ ಉಡುಪು ಕದಿಯುವುದು ಗೊತ್ತಾದ ಬಳಿಕ ಟೆರೇಸ್‌ನಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಿದೆವು. ಅದರಲ್ಲಿ ಆತನ ಚಲನವಲನ  ಸೆರೆಯಾಗಿದೆ’ ಎಂದು ವಾರ್ಡನ್‌  ಹೇಳಿದರು.

‘ಯುವಕನ ಉಪಟಳದಿಂದಾಗಿ ಕೆಲವು ವಿದ್ಯಾರ್ಥಿನಿಯರು, ತೊಳೆದ ಬಟ್ಟೆಯನ್ನು ಒಣಗಲು ಹಾಕುವುದನ್ನೇ ನಿಲ್ಲಿಸಿದ್ದಾರೆ’ ಎಂದು ತಿಳಿಸಿದರು.

ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದ
‘ಮಾರ್ಚ್‌ 4ರಂದು ರಾತ್ರಿ 12ರ ಸುಮಾರಿಗೆ ಹಾಸ್ಟೆಲ್‌ಗೆ ಬಂದಿದ್ದ ಯುವಕನನ್ನು ಭದ್ರತಾ ಸಿಬ್ಬಂದಿ ಹಿಡಿದಿದ್ದರು. ಆಗ ಪೊಲೀಸರಿಗೂ ವಿಷಯ ತಿಳಿಸಿದ್ದೆವು. ಅವರು ಬರುವಷ್ಟರಲ್ಲಿ ಆತ ತಪ್ಪಿಸಿಕೊಂಡಿದ್ದ. ಮೈಗೆ ಎಣ್ಣೆ ಸವರಿಕೊಂಡಿದ್ದರಿಂದ ಆತನನ್ನು ಹೆಚ್ಚು ಹೊತ್ತು ಹಿಡಿದುಕೊಳ್ಳಲು ಭದ್ರತಾ ಸಿಬ್ಬಂದಿಗೂ ಸಾಧ್ಯವಾಗಿರಲಿಲ್ಲ’ ಎಂದು ಸುಮಿತ್ರಾ ವಿವರಿಸಿದರು.

ಎಫ್‌ಐಆರ್‌ ದಾಖಲಿಸಿಕೊಳ್ಳಲಿಲ್ಲ
‘ವಿದ್ಯಾರ್ಥಿನಿಯರ ಸುರಕ್ಷತೆ ದೃಷ್ಟಿಯಿಂದ ಘಟನೆ ಬಗ್ಗೆ ದೂರು ಕೊಡಲು ಪೊಲೀಸ್‌ ಕಮಿಷನರ್‌ ಕಚೇರಿಗೆ ಸೋಮವಾರ ಸಂಜೆ ಹೋಗಿದ್ದೆವು. ಅಲ್ಲಿಯ ಸಿಬ್ಬಂದಿ, ಕೇಂದ್ರ ವಿಭಾಗದ ಡಿಸಿಪಿ ಕಚೇರಿಗೆ ಕಳುಹಿಸಿದರು. ಬಳಿಕ ಅಲ್ಲಿ ದೂರು ಕೊಟ್ಟೆವು. ಅದನ್ನು ಸ್ವೀಕರಿಸಿದ ಸಿಬ್ಬಂದಿಯು ಎಫ್‌ಐಆರ್‌ ದಾಖಲಿಸಿಕೊಳ್ಳಲಿಲ್ಲ. ‘ಪ್ರತಿಭಟನೆ ನಡೆಯುತ್ತಿದ್ದ ಕಾರಣದಿಂದ ಡಿಸಿಪಿ ಅವರು ಹೊರಗಡೆ ಹೋಗಿದ್ದಾರೆ. ಅವರು ಬಂದ ಮೇಲೆ ಮಾತನಾಡುತ್ತೇವೆ. ನೀವು ನಾಳೆ ಬನ್ನಿ...’ ಎಂದು ಹೇಳಿ ಕಳುಹಿಸಿದರು’ ಎಂದು ಹಾಸ್ಟೆಲ್‌ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದರು.

‘ನಾಲ್ಕು ಬಾರಿ ದೂರು ಕೊಟ್ಟಿದ್ದೆವು’
‘ಅಪರಿಚಿತ ವ್ಯಕ್ತಿ ಬಗ್ಗೆ ಹೈಗ್ರೌಂಡ್ಸ್‌ ಠಾಣೆಗೆ ಈ ಹಿಂದೆಯೂ ನಾಲ್ಕು ಬಾರಿ ದೂರು ಕೊಟ್ಟಿದ್ದೆವು. ಆದರೆ, ಇದುವರೆಗೂ ಆತನನ್ನು ಬಂಧಿಸಲು ಸಾಧ್ಯವಾಗಿಲ್ಲ’ ಎಂದು ಹಾಸ್ಟೆಲ್‌ ಅಧಿಕಾರಿಗಳು ತಿಳಿಸಿದರು.

‘ಆರೋಪಿ ಬಂದು ಹೋದ ಮರುದಿನ ಪೊಲೀಸರು ಸ್ಥಳಕ್ಕೆ ಬಂದು ಗಸ್ತು ತಿರುಗುತ್ತಾರೆ. ಈ ವೇಳೆ ಅಜ್ಞಾತ ವ್ಯಕ್ತಿ ಇತ್ತ ಸುಳಿಯುವುದೇ ಇಲ್ಲ.  ಆತ ಬರುವುದಿಲ್ಲ ಎಂದು ತಿಳಿದು ಪೊಲೀಸರು ಗಸ್ತು ನಿಲ್ಲಿಸುತ್ತಿದ್ದಂತೆ ಪುನಃ ಆತ ಹಾಸ್ಟೆ ಲ್‌ಗೆ ಬರುತ್ತಾನೆ’ ಎಂದು ಹೇಳಿದರು.

ಮೂರು ಹಾಸ್ಟೆಲ್‌ : ಆವರಣದಲ್ಲಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಮೂರು ಹಾಸ್ಟೆಲ್‌ ಕಟ್ಟಡಗ ಳಿವೆ. ಅಲ್ಲಿ ಸದ್ಯ 800 ವಿದ್ಯಾರ್ಥಿನಿ ಯರು ಉಳಿದುಕೊಂಡಿದ್ದಾರೆ. ಈ ಮೂರು ಕಟ್ಟಡಗಳ ಟೆರೇಸ್‌ ಮೇಲೆ ಅಪರಿಚಿತ ವ್ಯಕ್ತಿ ಓಡಾಡುತ್ತಾನೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.