ADVERTISEMENT

ಬ್ಲ್ಯಾಕ್‌ಮೇಲ್‌ ಇಲ್ಲ: ಪ್ರೇಮಲತಾ

ಪ್ರಜಾವಾಣಿ ಸಂದರ್ಶನ

ಪ್ರಜಾವಾಣಿ ವಿಶೇಷ
Published 25 ಅಕ್ಟೋಬರ್ 2014, 19:51 IST
Last Updated 25 ಅಕ್ಟೋಬರ್ 2014, 19:51 IST

ಬೆಂಗಳೂರು: ‘ಶ್ರೀಮಠಕ್ಕೆ ಬ್ಲ್ಯಾಕ್‌ಮೇಲ್‌ ಮಾಡುವ ಉದ್ದೇಶ ಹೊಂದಿದ್ದರೆ ನಾನು ಸಾಕ್ಷ್ಯಗಳನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳುತ್ತಿದ್ದೆ. ಆದರೆ ಅಂಥ ಯಾವ ಉದ್ದೇಶವೂ ನನಗೆ ಇರಲಿಲ್ಲ. ಅಚಾನಕ್‌ ಆಗಿ ಒಂದೆರಡು ಸಾಕ್ಷ್ಯಗಳು ನನ್ನ ಬಳಿ ಇದ್ದವು. ಅದನ್ನು ತನಿಖಾಧಿಕಾರಿಗಳಿಗೆ ನೀಡಿದ್ದೇನೆ...’

ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಅವರು ತಮ್ಮ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿದ್ದಾರೆ ಎಂಬ ಆರೋಪ ಹೊರಿಸಿರುವ ಗಾಯಕಿ ಪ್ರೇಮಲತಾ ಶಾಸ್ತ್ರಿ ಅವರು ಉಮ್ಮಳಿಸಿ ಬರುತ್ತಿದ್ದ ದುಃಖವನ್ನು ತಡೆದು ಆಡಿದ ಮಾತು ಇದು.

ರೂ 3 ಕೋಟಿ ಕೇಳುವ ಮೂಲಕ ಬ್ಲ್ಯಾಕ್‌ಮೇಲ್‌ ಮಾಡುತ್ತಿರು ವುದಾಗಿ ನನ್ನ ವಿರುದ್ಧ ಆರೋಪ ಮಾಡಲಾಗುತ್ತಿದೆ. ಆದರೆ ಅದೇ ಉದ್ದೇಶ ಇದ್ದಿದ್ದರೆ ನಾನು ಕೇವಲ ರೂ 3 ಕೋಟಿ ಯಾಕೆ ಕೇಳುತ್ತಿದ್ದೆ. ಕನಿಷ್ಠ ರೂ 30 ಕೋಟಿ ಕೇಳುತ್ತಿದ್ದೆ.

ತಾವು ಸ್ವಾಮೀಜಿ ವಿರುದ್ಧ ಮಾಡಿರುವ ಆರೋಪ, ಅದರ ನಂತರ ತಮ್ಮ ವಿರುದ್ಧ ಕೇಳಿಬರುತ್ತಿರುವ ಮಾತುಗಳ ಬಗ್ಗೆ ಪ್ರೇಮಲತಾ ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ವಿವರವಾಗಿ ಮಾತನಾಡಿದ್ದಾರೆ. ಅವರ ಜೊತೆ ನಡೆಸಿದ ಮಾತುಕತೆಯ ಆಯ್ದ ಭಾಗ ಇಲ್ಲಿದೆ:

ಪ್ರ: ಸ್ವಾಮೀಜಿ ನಿಮಗೆ ಮೋಸ ಮಾಡಿದ್ದು ಹೇಗೆ?
ಚಾತುರ್ಮಾಸದ ಸಂದರ್ಭದಲ್ಲಿ ಗೋಕರ್ಣದ ಅಶೋಕೆಯಲ್ಲಿ ಸ್ವಾಮೀಜಿ ಮೊದಲ ಬಾರಿಗೆ ನನ್ನನ್ನು ಏಕಾಂತದಲ್ಲಿ ಕರೆಸಿ ಮಾತನಾಡಿದರು. ಅಂದು ನನ್ನನ್ನು ಹೊಗಳಿದರು. ನೀನು ದಿವ್ಯಳು ಎಂದೆಲ್ಲ ಹೇಳಿದರು. ಇದೇ ಮಾತುಗಳನ್ನು ಬೆಂಗಳೂರಿನಲ್ಲೂ ಒಮ್ಮೆ ಆಡಿದ್ದಾರೆ.

ಅವರ ವಿಶ್ರಾಂತಿ ಕೊಠಡಿಗೆ ಕರೆದೊಯ್ದು, ರಾಮನ ಎದುರು ಪ್ರಾರ್ಥಿಸು ಎಂದು ಹೇಳಿದ್ದಾರೆ. ಗುರುಪೀಠಕ್ಕೆ ನಿನ್ನನ್ನು ಸಮರ್ಪಿಸಿಕೊಳ್ಳಬೇಕು, ಇದು ನಿನ್ನ ಸೌಭಾಗ್ಯ. ನಾನು (ಸ್ವಾಮೀಜಿ) ರಾಮ ಎಂದು ನಂಬು. ಈ ವಿಚಾರ ನಾಲ್ಕು ಕಿವಿಗಳನ್ನು
ದಾಟಿ ಎಲ್ಲಿಯೂ ಹೋಗಬಾರದು. ಪತಿಗೂ ವಿಚಾರ ತಿಳಿಸಬಾರದು ಎಂದೆಲ್ಲ ಹೇಳಿದರು. ಅವರ ಕುರಿತು ನನಗೆ ಬಹಳ ಶ್ರದ್ಧೆ ಇತ್ತು. ಅವರ ಮಾತನ್ನು ತಳ್ಳಿಹಾಕುವ ಸ್ಥಿತಿಯಲ್ಲಿ ನಾನಿರಲಿಲ್ಲ.

ನೀನು ರಾಮನ ಆಯ್ಕೆ. ಇಂಥ ಪವಿತ್ರ ಕೆಲಸಕ್ಕೆ ರಾಮ ನಿನ್ನನ್ನು ಆಯ್ಕೆ ಮಾಡಿದ್ದಾನೆ. ಈ ವಿಚಾರವನ್ನು ನೀನು ಹೊರಗಡೆ ಹೇಳಿದರೆ ಗುರುಪೀಠದ ಶಾಪ ತಟ್ಟುತ್ತದೆ. ನಿನ್ನ ಕುಟುಂಬಕ್ಕೆ ತೊಂದರೆ ಆಗುತ್ತದೆ ಎಂದು ಸ್ವಾಮೀಜಿ ಹೇಳಿದ್ದರು. ಅವರ ಮೇಲೆ ಭಕ್ತಿ ಇದ್ದ ನಾನು ಅವರ ಮಾತುಗಳನ್ನು ಇನ್ನೊಬ್ಬರಲ್ಲಿ ಹೇಳುವ ಸ್ಥಿತಿಯಲ್ಲಿ ಇರಲಿಲ್ಲ. ‘ಇದು’ ನೀನು ಗುರುಪೀಠಕ್ಕೆ ಮಾಡಬೇಕಾದ ಕರ್ತವ್ಯ ಎಂದೂ ಹೇಳುತ್ತಿದ್ದರು. ನಾನು ಪ್ರತಿಭಟಿಸಲು ಆಗದಂತೆ ಕಟ್ಟಿ ಹಾಕಿದ್ದರು. ಆ ಸುಳಿಯಿಂದ ಹೊರಬರಲು ಆಗದಂತೆ ಮಾಡಿಬಿಟ್ಟರು. ಭಾವನಾತ್ಮಕವಾಗಿ ಸೂಕ್ಷ್ಮವಾಗಿರುವ ವರನ್ನೇ ಆಯ್ಕೆ ಮಾಡಿ ಬಲಿಪಶು ಮಾಡಲಾಗಿದೆ.

ಇಂಥ ಪೀಠದಲ್ಲಿ ಕುಳಿತು ಹೀಗೆ ಮಾಡುವುದು ಸರಿಯಾ ಎಂಬ ಪ್ರಶ್ನೆಯನ್ನು ಸಾಕಷ್ಟು ಬಾರಿ ನಾನು ಸ್ವಾಮೀಜಿ ಅವರಲ್ಲಿ ಕೇಳಿದ್ದೇನೆ. ಆಗ ಅವರು ಸಮರ್ಥನೆಯ ಸಾಕಷ್ಟು ಮಾತುಗಳನ್ನು ಆಡಿದ್ದಾರೆ. ಆಡಬಾರದ ಮಾತುಗಳನ್ನು ಆಡಿ ನನ್ನ ಬಾಯಿ ಮುಚ್ಚಿಸಿದ್ದಾರೆ. ನನಗೆ ಇದು ಸರಿಬರುತ್ತಿಲ್ಲ, ಮನಸ್ಸಿಗೆ ಹಿಂಸೆಯಾಗುತ್ತಿದೆ ಎಂದು ಹೇಳಿದ್ದೇನೆ. ನೀವು ಆಣೆ ಹಾಕಿಸಿ, ಪತಿಯ ಬಳಿ, ಮಕ್ಕಳ ಬಳಿ ಹೇಳಬಾರದು ಎನ್ನುವುದು ಸರಿಯಲ್ಲ ಎಂದಾಗ ಅವರು ನನ್ನನ್ನು ಒದ್ದಿದ್ದಾರೆ. ಹೊಡೆದು ಬೀಳಿಸಿದ್ದಾರೆ. ಮೃಗೀಯವಾಗಿ ವರ್ತಿಸಿದ್ದಾರೆ. ನಿನಗೆ, ನಿನ್ನ ಕುಟುಂಬಕ್ಕೆ ಏನು ಬೇಕಿದ್ದರೂ ಆಗಬಹುದು ಎಂದು ಅವರು ನನ್ನನ್ನು ಬೆದರಿಸಿದ್ದಾರೆ.

ನಿನ್ನ ಆರೋಗ್ಯ ನೀನು ನೋಡಿಕೊ, ರಾಮಕತೆಯನ್ನು ಯಾವ ಕಾರಣಕ್ಕೂ ತಪ್ಪಿಸಬಾರದು ಎನ್ನುತ್ತಿದ್ದರು. ನಾನು ಬಂದ ತಕ್ಷಣ ರಾಮನಿಗೆ ಸಮಸ್ಕಾರ ಮಾಡಿಸುತ್ತಿದ್ದರು. ರಾಮ ಪ್ರಸಾದ ತಿನ್ನಿಸುತ್ತಿದ್ದರು.

ಪ್ರ: ಸ್ವಾಮೀಜಿ ವಿರುದ್ಧ ನೀವು ಬಹಿರಂಗವಾಗಿ ಆರೋಪ ಮಾಡಿದ ನಂತರ ನಿಮಗೆ ಹವ್ಯಕ ಸಮುದಾಯದ ಬೆಂಬಲ ದೊರೆತಿದೆಯಾ?
ಯಾರಾದರೂ ನನ್ನ ಜೊತೆ ಬಂದು, ನನ್ನ ದುಃಖಕ್ಕೆ ಜೊತೆಯಾಗಬಹುದು ಎಂಬ ನಂಬಿಕೆ ಈಗಲೂ ಇದೆ. ಆದರೆ ಇದುವರೆಗೆ ಯಾರೂ ಮುಂದೆ ಬಂದಿಲ್ಲ. ಹವ್ಯಕ ಸಮುದಾಯದ ಮೇಲೆ ಸ್ವಾಮೀಜಿಗೆ ಇರುವ ಹಿಡಿತ, ಒತ್ತಡ ಅಷ್ಟಿದೆ. ಯಾರಾದರೂ ನನ್ನ ಜೊತೆ ಬರಬಹುದು ಎಂದು ದಿನಂಪ್ರತಿ ಕಾಯುತ್ತಿದ್ದೇನೆ. ಸ್ವಾಮೀಜಿ ಬಂಧನ ಆಗುವವರೆಗೆ ಅಂಥವರು ಮುಂದೆ ಬರುವುದು ಕಷ್ಟ. ಈ ವಿಚಾರಗಳನ್ನು ಹೇಳುವಾಗ ಕೂಡ, ಅವರು ನನಗೆ ಇನ್ನೇನಾದರೂ ಮಾಡಬಹುದು ಎಂಬ ಭಯ ಕಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಾಧ್ಯವಿರುವಷ್ಟು ಮಟ್ಟಿಗೆ ನಮ್ಮನ್ನು ಬೆತ್ತಲಾಗಿ ನಿಲ್ಲಿಸುತ್ತಿದ್ದಾರೆ ಅವರು.

ಪ್ರ: ಸಂಘ–ಸಂಸ್ಥೆಗಳಿಂದ ಬೆಂಬಲ ಸಿಕ್ಕಿದೆಯಾ?
ಒಂದು ಹಂತದವರೆಗೆ ಸಿಕ್ಕಿದೆ. ಬನಶಂಕರಿ ಬಡಾವಣೆಯವರು, ನಾವು ಹೇಗೆ ಎಂಬುದನ್ನು ತಿಳಿದವರು ಬೆಂಬಲ ಕೊಟ್ಟಿದ್ದಾರೆ. ಇನ್ನಿತರ ಕೆಲವರು ನಮ್ಮ ಸಹಾಯಕ್ಕೆ ಬಂದಿದ್ದಾರೆ. ಆದರೆ ನಮ್ಮ ವಿರುದ್ಧ ಇದ್ದ ನ್ಯಾಯಾಲಯದ ತಡೆಯಾಜ್ಞೆ ಕಾರಣ, ಕೆಲವು ಕಡೆಯಿಂದ ಬೆಂಬಲ ದೊರೆಯಲಿಲ್ಲ.
ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್‌. ವಿಮಲಾ ಬೆಂಬಲ ನೀಡಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ನನಗೆ ಬೆಂಬಲ ನೀಡಿದ್ದು ಸೌಭಾಗ್ಯ. ನನಗೆ ನಿರೀಕ್ಷೆ ಇದೆ, ನ್ಯಾಯ ಸಿಗುತ್ತದೆ. ನಾವು ಹೆದರಿ ಕುಳಿತರೆ ಹೇಗೆ? ನಮ್ಮ ಕುಟುಂಬಕ್ಕೆ ಕೆಟ್ಟದ್ದು ಆಗಲು ಇನ್ನೇನೂ ಉಳಿದಿಲ್ಲ. ಇನ್ನು ಹೆದರುವುದೇನಿದೆ. ಅನ್ಯಾಯಕ್ಕೆ ಒಳಗಾದ ಕೆಲವರು ಮುಕ್ತವಾಗಿ ಹೇಳಲು ಹೆದರುತ್ತಿದ್ದಾರೆ. ಅವರೂ ಮುಂದೆ ಬರಬೇಕು.

ಪ್ರ: ಅಷ್ಟೆಲ್ಲ ಕಷ್ಟ ಅನುಭವಿಸಿಯೂ ನೀವು ರಾಮಕತೆ ಕಾರ್ಯಕ್ರಮದಲ್ಲಿ ಹಾಡಿದ್ದು ಹೇಗೆ?
ಹಾಡುವುದು ನನ್ನ ವೃತ್ತಿ. ಇಂಥ ಪ್ರಶ್ನೆಗಳಿಗೆಲ್ಲ ನಾನು ಏನಂತ ಉತ್ತರಿಸುವುದು? ಆದರೆ ಕೆಲವು ರಾಮಕತೆಗಳ ಹಾಡುಗಳನ್ನು ಕೇಳಿದರೆ, ನನ್ನ ದುಃಖ ಅಲ್ಲಿ ನಿಮಗೆ ಕಾಣುತ್ತದೆ. ಏನೇ ಆದರೂ ರಾಮಕತೆ ತಪ್ಪಿಸಬಾರದು, ನೀನು ಬಂದು ಹಾಡಲೇಬೇಕು ಎಂದು ಅವರು (ಸ್ವಾಮೀಜಿ) ಕೂಡ ಹೇಳುತ್ತಿದ್ದರು.

ಪ್ರ: ಅತ್ಯಾಚಾರ ನಿರಂತರವಾಗಿ ನಡೆದಿದೆ ಎನ್ನುತ್ತೀರಿ. ಅದು ಸ್ವಾಮೀಜಿ ಅವರ ಪರಿವಾರಕ್ಕೆ ತಿಳಿಯಲಿಲ್ಲವೇ?
ಇದು ನನಗೂ ಕಾಡುತ್ತಿರುವ ಪ್ರಶ್ನೆ. ಕೊನೆ ಹಂತದಲ್ಲಿ ಸ್ವಾಮೀಜಿ ಒಮ್ಮೆ ಬಾಯಿಬಿಟ್ಟು ಹೇಳಿದ್ದಾರೆ. ನೀನು ಚಿಂತಿಸಬೇಡ, ಇಲ್ಲಿರುವವರೆಲ್ಲ ನಮ್ಮ ಅನುಕೂಲಕ್ಕಾಗಿ ಇರುವವರು ಎಂದು ಹೇಳಿದ್ದಾರೆ. ಇದು ಕೇಳಿ ನನಗೆ ಆಘಾತವಾಯಿತು. ನಾನು ಒಳಗೆ ಬರುವುದನ್ನು, ಹೊರಗೆ ಅಳುತ್ತ ಹೋಗುವುದನ್ನು ಸಾಕಷ್ಟು ಜನ ನೋಡಿದ್ದಾರೆ. ಯಾರೂ ನನ್ನ ಪ್ರಶ್ನಿಸಿಲ್ಲ. ನನ್ನ ಸ್ಥಿತಿಯಲ್ಲಿ ಬರುವ ಬೇರೆಯವರೂ ಅಲ್ಲಿದ್ದರು ಎಂಬುದು ಅಲ್ಲಿದ್ದವರಿಗೂ ಬಹುಷಃ ಗೊತ್ತಿತ್ತು.

ಪ್ರ: ಆರೋಪಕ್ಕೆ ಪೂರಕವಾಗಿ ನಿಮ್ಮಲ್ಲಿ ಸಾಕ್ಯ್ಯ ಇದೆಯಾ? ಅದನ್ನು ತನಿಖಾಧಿಕಾರಿಗಳಿಗೆ ನೀಡಿದ್ದೀರಾ?
ಸಾಕ್ಷ್ಯಗಳಿವೆ. ಅದನ್ನು ತನಿಖಾಧಿಕಾರಿಗಳಿಗೆ ಕೊಟ್ಟಿರುವೆ. ಅಚಾನಕ್‌ ಆಗಿ ಕೆಲವು ಸಾಕ್ಷ್ಯಗಳು ನನಗೆ ದೊರೆತವು. ಅದನ್ನು ಕೊಟ್ಟಿದ್ದೇನೆ. ನಾನು ಬ್ಲ್ಯಾಕ್‌ಮೇಲ್‌ ಮಾಡುವ ಉದ್ದೇಶ ಹೊಂದಿದ್ದರೆ, ಇಷ್ಟು ದಿನ ನೋವು ಅನುಭವಿಸಬೇಕಿತ್ತಾ? ಆರೋಪ ಮಾಡುವುದಿಲ್ಲ, ಮೂರು ಕೋಟಿ ರೂಪಾಯಿ ಕೊಡಿ ಎಂದು ನಾನು ಮಠದವರಲ್ಲಿ ಕೇಳಿದ್ದೇನೆ ಎಂಬ ಆರೋಪ ಇದೆ. ಅಂಥ ಮನಸ್ಸು ನನ್ನದಾಗಿದ್ದರೆ ರೂ 30 ಕೋಟಿ ಕೇಳಬಹುದಿತ್ತಲ್ಲ? ನನ್ನ ತಂದೆ ತೀರಿದ ನಂತರ ಮಠವನ್ನು ತವರು ಮನೆ ಎಂದು ಭಾವಿಸಿದ್ದೆ. ಆದರೆ ಅವರು ಹಾಗೆ ಮಾಡಿದ್ದು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ.

ಪ್ರ: ಈ ಹಂತದಲ್ಲಿ ನಿಮ್ಮ ಕುಟುಂಬದ ಸ್ಥಿತಿ ಹೇಗಿತ್ತು?
ಮೂರು ವರ್ಷದಿಂದ ನನಗೆ ಹೇಳಲಾಗದ್ದನ್ನು ಪತಿಯ ಬಳಿ ಹೇಳಿಕೊಳ್ಳಬೇಕು ಎಂದು ಬಹಳ ದಿನಗಳಿಂದ ಅನಿಸುತ್ತಿತ್ತು. ಪೊಲೀಸರಿಗೆ ವಿಷಯ ಹೇಳಬೇಕು ಎಂಬುದು ನನ್ನ ತಲೆಯಲ್ಲಿರಲಿಲ್ಲ. ಆದರೆ ನನ್ನ ಪತಿ ದಿವಾಕರ್‌ಗೆ ಹೇಳಬೇಕಿತ್ತು. ಈ ವಿಚಾರ ನಾನು ಹೇಳಿದರೆ ದಿವಾಕರ್‌ ನನ್ನನ್ನು ಬಿಟ್ಟುಬಿಡುತ್ತಾರೆ, ನನ್ನ ಕುಟುಂಬ ನನ್ನ ಕೈಬಿಡುತ್ತದೆ ಎಂಬ ಅಳುಕು ಕಾಡುತ್ತಿತ್ತು. ಅವರು ನನ್ನನ್ನು ನಂಬಲಾರರು ಎಂಬ ಭೀತಿ ಇತ್ತು. ನಿನ್ನ ಜೊತೆ ಬದುಕಲಾಗದು ಎಂದು ದಿವಾಕರ್‌ ಹೇಳಿಬಿಟ್ಟರೆ ಎಂಬ ಆತಂಕ ಕಾಡುತ್ತಿತ್ತು.

ನನ್ನ ಅಕ್ಕ ಧೈರ್ಯ ತುಂಬಿದ ನಂತರ ದಿವಾಕರ್‌ಗೆ ವಿಷಯ ಹೇಳಿದೆ. ಅದೂ ಫೋನ್‌ನಲ್ಲಿ. ವಿಷಯ ತಿಳಿಸಿದಾಗ ದಿವಾಕರ್‌ ಕೂಡ ತಳಮಳಕ್ಕೆ ಒಳಗಾದರು. ಆದರೆ ಅವರಿಗೆ ವಿಷಯ ಹೇಳಿದ ನಂತರ ನನಗೆ ಸಮಾಧಾನ ಆಯಿತು. ಇನ್ನು ನನ್ನ ಪ್ರಾಣ ಹೋದರೂ ಚಿಂತೆಯಿಲ್ಲ, ಹೇಳಬೇಕಾಗಿದ್ದನ್ನು ದಿವಾಕರ್‌ಗೆ ಹೇಳಿಬಿಟ್ಟೆ ಎಂಬ ಸಮಾಧಾನ. ಇಬ್ಬರೂ ಸಾಯಬೇಕು ಎಂದು ಅನಿಸಿತ್ತು. ಆದರೆ ಮಕ್ಕಳಿದ್ದಾರೆ ಎಂಬುದು ಮನಸ್ಸಿಗೆ ಬರುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.