ADVERTISEMENT

ಭಾವನಿಂದ ಅತ್ಯಾಚಾರ

ನಿವೃತ್ತ ಐಎಎಸ್‌ ಅಧಿಕಾರಿ ಪುತ್ರಿ ದೂರು

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2015, 19:30 IST
Last Updated 17 ಏಪ್ರಿಲ್ 2015, 19:30 IST

ಬೆಂಗಳೂರು: ‘ಎಂಟು ತಿಂಗಳ ಗರ್ಭಿಣಿ ಆಗಿದ್ದ ಸಂದರ್ಭದಲ್ಲಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದ ಭಾವ, ವಿಷಯ ಬಹಿರಂಗಪಡಿಸಿದರೆ ಗುಂಡಿಟ್ಟು ಕೊಲ್ಲುವುದಾಗಿ ಬೆದರಿಕೆ  ಹಾಕಿದ್ದ’ ಎಂದು ಆರೋಪಿಸಿ ನಿವೃತ್ತ ಐಎಎಸ್‌ ಅಧಿಕಾರಿಯೊಬ್ಬರ ಪುತ್ರಿ ಇಲ್ಲಿನ ಇಂದಿರಾನಗರ ಠಾಣೆಗೆ ದೂರು ಕೊಟ್ಟಿದ್ದಾರೆ.

‘ಸಿಖ್ ಧರ್ಮದ ನಾನು, ಮೈಸೂರು ಮೂಲದ ಹಿಂದೂ ಯುವಕನನ್ನು ಪ್ರೀತಿಸಿ ಮದುವೆಯಾದೆ. ಗಂಡನ ಮನೆಗೆ ಹೋದ ದಿನದಿಂದಲೇ ಅತ್ತೆ–ಮಾವ, ನಾದಿನಿ ಹಾಗೂ ಭಾವನಿಂದ ಕಿರುಕುಳ ಆರಂಭವಾಯಿತು. ಮೈಸೂರಿನಲ್ಲಿ ಪ್ರತಿಷ್ಠಿತ ಆಸ್ಪತ್ರೆ ಹೊಂದಿರುವ ಮಾವ, ತವರು ಮನೆಯಿಂದ ರೂ 15 ಕೋಟಿ ತರುವಂತೆ ಆರಂಭದಲ್ಲಿ ಒತ್ತಡ ಹೇರುತ್ತಿದ್ದರು’ ಎಂದು ದೂರಿದ್ದಾರೆ.

‘ಕ್ರಮೇಣ ಬೆಂಗಳೂರಿನಲ್ಲಿರುವ ಮನೆ ಮಾರಿ, ರೂ 45 ಕೋಟಿ ತರಬೇಕೆಂದು ಕಿರುಕುಳ ಪ್ರಾರಂಭಿಸಿದರು. ಇದಕ್ಕೆ ಒಪ್ಪದಿದ್ದಾಗ ರಾತ್ರೋರಾತ್ರಿ ಮನೆಯಿಂದ ಹೊರ ಹಾಕಿದ್ದರು. ಈ ವಿಷಯ ಈಗಲೂ ಪತಿಗೆ ಗೊತ್ತಿಲ್ಲ’ ಎಂದಿದ್ದಾರೆ.

‘2014ರ ನ.11ರಂದು ಕೋಣೆಯಲ್ಲಿ  ವಿಶ್ರಾಂತಿ ಪಡೆಯುತ್ತಿದ್ದೆ. ಆಗ ನಾನು ಎಂಟು ತಿಂಗಳ ಗರ್ಭಿಣಿ.  ಏಕಾಏಕಿ ಒಳಗೆ ನುಗ್ಗಿದ ಭಾವ, ನನ್ನ ಮೇಲೆ ಅತ್ಯಾಚಾರ ಎಸಗಿದ. ಚೀರಾಟ ಕೇಳಿ ಕೋಣೆಗೆ ಬಂದ ಪತಿ, ಆತನಿಂದ ನನ್ನನ್ನು ರಕ್ಷಿಸಿದ್ದರು. ಅಣ್ಣನ ವಿರುದ್ಧ ದೂರು ಕೊಡಲು ಮುಂದಾದ ಪತಿಯನ್ನು, ಅತ್ತೆ–ಮಾವ ಕೋಣೆಯಲ್ಲಿ ಕೂಡಿಟ್ಟರು. ಅಲ್ಲದೆ, ವಿಷಯ ಹೊರ ಹೋದರೆ ಎರಡೂ ಕುಟುಂಬಗಳ ಗೌರವಕ್ಕೆ ಧಕ್ಕೆ ಆಗುತ್ತದೆ ಎಂದು ಮನಪರಿವರ್ತಿಸಲು ಯತ್ನಿಸಿದ್ದರು’ ಎಂದು ಮಹಿಳೆ ತಿಳಿಸಿದ್ದಾರೆ.

‘ಮಗು ಜನಿಸಿದ ಬಳಿಕ  ಮೈಸೂರು ತೊರೆದು ಬೆಂಗಳೂರಿಗೆ ಬಂದೆವು. ಅಮಾನವೀಯವಾಗಿ ನಡೆಸಿಕೊಂಡ ಅತ್ತೆ–ಮಾವ ಹಾಗೂ ಭಾವನಿಗೆ ಶಿಕ್ಷೆಯಾಗಬೇಕೆಂದು ಈಗ ದೂರು ದಾಖಲಿಸುತ್ತಿದ್ದೇನೆ’ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.