ADVERTISEMENT

ಮತದಾನ ತಪ್ಪಿಸಿದ ತಿಂಗಳ ರಜೆ!

​ಪ್ರಜಾವಾಣಿ ವಾರ್ತೆ
Published 3 ಜೂನ್ 2015, 19:30 IST
Last Updated 3 ಜೂನ್ 2015, 19:30 IST

ಹೊಳಲ್ಕೆರೆ: ಮಹಿಳೆಯರು ತಿಂಗಳ ರಜೆ ಅವಧಿಯಲ್ಲಿ 3 ದಿನ ಗ್ರಾಮದಿಂದ ಹೊರಗೆ ಇರುವ ಮೌಢ್ಯ ಇನ್ನೂ ಅನೇಕ ಗೊಲ್ಲರಹಟ್ಟಿಗಳಲ್ಲಿ ಇದೆ. ಈ ಅವಧಿಯಲ್ಲಿ ಗ್ರಾಮದ ಹೊರಗಿರುವ ಶಾಲಾ ಕಟ್ಟಡದ ಪಡಸಾಲೆಯಲ್ಲೋ, ಗುಡಿಸಲುಗಳಲ್ಲೋ ಇದ್ದು, ಮೂರು ದಿನಗಳ ನಂತರ ಮನೆಗೆ ಬರುವ ದೌರ್ಭಾಗ್ಯ ಈ ಮಹಿಳೆಯರದು.

ಈ ಬಗ್ಗೆ ಎಷ್ಟೇ ಜಾಗೃತಿ ಕಾರ್ಯ ನಡೆದರೂ ಈ ಸಂಪ್ರದಾಯ ಮಾತ್ರ ಸಂಪೂರ್ಣ ಹೋಗಿಲ್ಲ. ತಿಂಗಳ ರಜೆಯಲ್ಲಿದ್ದ 11 ಮಹಿಳೆಯರು ಮಂಗಳವಾರ ನಡೆದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಮತದಾನದ ಅವಕಾಶದಿಂದ ವಂಚಿತವಾದ ಘಟನೆ ಅವಳಿಹಟ್ಟಿ ಗ್ರಾಮದಲ್ಲಿ ನಡೆದಿದೆ.

ತಾಲ್ಲೂಕಿನ ಅವಳಿಹಟ್ಟಿಯ 11 ಮಹಿಳೆಯರು ಚುನಾವಣೆಯ ದಿನ ವೇ ತಿಂಗಳ ರಜೆಯಿಂದ ಗ್ರಾಮದ ಹೊರಗೆ ಇದ್ದರು. ‘ಮತದಾನ ಮಾಡುವ ಆಸೆ ಇದ್ದರೂ ಹೊರಗಾಗಿರುವ ನಾವು ಮತಕೇಂದ್ರದ ಒಳಗೆ ಹೋಗುವುದು ಹೇಗೆ?’ ಎಂದು ಸುಮ್ಮನೆ ಕುಳಿತಿದ್ದರು. ಗ್ರಾಮದ ಸಂಪ್ರದಾಯವಾದಿಗಳು, ‘ಈ ಮಹಿಳೆಯರು ಮತಗಟ್ಟೆಗೆ ಬರಬಾರದು, ಬಂದರೆ ಮೈಲಿಗೆ ಆಗುತ್ತದೆ’ ಎಂದು ಮೊದಲೇ ಸೂಚನೆ ನೀಡಿದ್ದರು. ಆದರೆ, ಸಂಜೆ 4.30ರ ವೇಳೆಗೆ ಗ್ರಾಮದ ಕೆಲವು ವಿಚಾರವಾದಿಗಳು, ‘ಇವರಿಗೂ ಮತದಾನ ಮಾಡುವ ಹಕ್ಕು ಇದೆ. ಇವರೂ ಮತ ಹಾಕಲಿ’ ಎಂದು ಮತಗಟ್ಟೆಗೆ ಕರೆದುಕೊಂಡು ಬಂದರು.

ಆಗಲೂ ಸಂಪ್ರದಾಯವಾದಿಗಳು ಈ ಮಹಿಳೆಯರು ಮತಗಟ್ಟೆಯ ಒಳಗೆ ಹೋಗಬಾರದೆಂದು ಹಠ ಹಿಡಿದರು. ಕೆಲವರು ಸರದಿ ಸಾಲಿನಲ್ಲಿ ನಿಂತರೆ ಬೇರೆಯವರನ್ನು ಸ್ಪರ್ಶಿಸಬೇಕಾಗುತ್ತದೆ. ಎಲ್ಲರೂ ಮತ ಹಾಕಿದ ನಂತರ ಕೊನೆಗೆ ಒಳಗೆ ಹೋಗಲಿ ಎಂದರು. ಈ ಬಗ್ಗೆ ಪಿಆರ್‌ಒಗೆ ದೂರು ನೀಡಿದಾಗ, ‘ನಿಮ್ಮ ಊರಿನ ಸಮಸ್ಯೆಯನ್ನು ನೀವೇ ಬಗೆಹರಿಸಿಕೊಂಡು ಬನ್ನಿ’ ಎಂದರು.

ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಇನ್ನೇನು ಮತ ಹಾಕಲು ಅವಕಾಶ ಸಿಕ್ಕಿತು ಎನ್ನುವಷ್ಟರಲ್ಲಿ ಸಮಯ 5 ಗಂಟೆ ಆಗಿತ್ತು. ಅಷ್ಟರಲ್ಲಿ ಒಳಗೆ ಮತಗಟ್ಟೆ ಅಧಿಕಾರಿಗಳು ಮತಪೆಟ್ಟಿಗೆಯನ್ನು ಸೀಲ್‌ ಮಾಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.