ADVERTISEMENT

ಮತ್ತೊಬ್ಬ ಆರೋಪಿ ಸಿಐಡಿ ಬಲೆಗೆ

ಕಲ್ಲಪ್ಪ ಹಂಡಿಬಾಗ ಆತ್ಮಹತ್ಯೆ– ತೇಜಸ್‌ ಅಪಹರಣ ಪ್ರಕರಣ

ಕೆ.ಎಂ.ಸಂತೋಷ್‌ ಕುಮಾರ್‌
Published 25 ಜುಲೈ 2016, 0:30 IST
Last Updated 25 ಜುಲೈ 2016, 0:30 IST
ಮತ್ತೊಬ್ಬ ಆರೋಪಿ ಸಿಐಡಿ ಬಲೆಗೆ
ಮತ್ತೊಬ್ಬ ಆರೋಪಿ ಸಿಐಡಿ ಬಲೆಗೆ   

ಚಿಕ್ಕಮಗಳೂರು: ಡಿವೈಎಸ್‌ಪಿ ಕಲ್ಲಪ್ಪ ಹಂಡಿಬಾಗ ಆತ್ಮಹತ್ಯೆ ಮತ್ತು ತೇಜಸ್‌ ಅಪಹರಣ ಪ್ರಕರಣ ಸಂಬಂಧ ಸಿಐಡಿ ಪೊಲೀಸರು ಜಾಯ್ ಮಿಲ್ಟನ್ (22) ಎಂಬಾತನನ್ನು ಬಂಧಿಸಿದ್ದು, ಈ ಮೂಲಕ ಪ್ರಕರಣದಲ್ಲಿ ಸೆರೆ ಸಿಕ್ಕಿದವರ ಸಂಖ್ಯೆ ನಾಲ್ಕಕ್ಕೇರಿದಂತಾಗಿದೆ.

‘ಸಿಐಡಿ ವಶದಲ್ಲಿರುವ ಆರೋಪಿ ಅಭಿರಾಮ ನೀಡಿದ ಸುಳಿವು ಆಧರಿಸಿ,  ಬೆಂಗಳೂರಿನ ಆನೇಪಾಳ್ಯ ನಿವಾಸಿಯಾದ ಜಾಯ್‌ನನ್ನು ಬಂಧಿಸಲಾಗಿದೆ.  ಈತ ಬೆಳ್ಳಂದೂರಿನ ಪಬ್‌ವೊಂದರಲ್ಲಿ ಬೌನ್ಸರ್‌ ಆಗಿದ್ದ’ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.

‘ನವೀನ್‌ ಶೆಟ್ಟಿ ಎಂಬಾತ ತೇಜಸ್‌ ಅಪಹರಿಸಿ ತಂದರೆ ತಲಾ ₹40 ಸಾವಿರ ಕೊಡುವುದಾಗಿ 7 ಮಂದಿಗೆ ಆಮಿಷ ತೋರಿಸಿದ್ದ. ಆದರೆ, ಪೂರ್ತಿ ಹಣ ಸಂದಾಯ ಮಾಡಲಿಲ್ಲ. ಎಲ್ಲರಿಗೆ ಸೇರಿಸಿ ಕೇವಲ ₹50 ಸಾವಿರ ನೀಡಿದ್ದ ಎನ್ನುವ ಸಂಗತಿಯನ್ನು ಆರೋಪಿ ವಿಚಾರಣೆಯಲ್ಲಿ ಬಾಯಿಬಿಟ್ಟಿದ್ದಾನೆ. ಅಭಿರಾಮ ಮತ್ತು ಜಾಯ್‌ ಇಬ್ಬರನ್ನೂ ತನಿಖಾ ತಂಡಗಳು ತೀವ್ರ ವಿಚಾರಣೆಗೆ ಒಳಪಡಿಸಿವೆ’ ಎಂದು ಮೂಲಗಳು ತಿಳಿಸಿವೆ.

‘ತೇಜಸ್‌ ಅಪಹರಿಸಲು ಖಾಂಡ್ಯ ಪ್ರವೀಣ್‌ಗೆ ಸುಪಾರಿ ನೀಡಿದ್ದ ಕಲ್ಮನೆ ಚಿಟ್‌ಫಂಡ್ ಸಂಸ್ಥೆ ಮುಖ್ಯಸ್ಥ ನಟರಾಜನ ಸಹೋದರನೊಬ್ಬನಿಗೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದಾರೆ. ಆತ ನಿರೀಕ್ಷಣಾ ಜಾಮೀನಿಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಸದ್ಯ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಪ್ರಕರಣದ ಪ್ರಮುಖ ಸೂತ್ರಧಾರ, ತಲೆಮರೆಸಿಕೊಂಡಿರುವ ಆರೋಪಿ ವಿಶ್ವ ಹಿಂದೂ ಪರಿಷತ್‌ ಶಿವಮೊಗ್ಗ ವಿಭಾಗೀಯ ಕಾರ್ಯದರ್ಶಿ ಖಾಂಡ್ಯ ಪ್ರವೀಣ್‌, ನವೀನ್‌ ಶೆಟ್ಟಿ ಹಾಗೂ ಆತನ ಸಹಚರರಿಗೆ ಸಿಐಡಿ ತಂಡಗಳು ರಾಜ್ಯ, ಹೊರ ರಾಜ್ಯಗಳಲ್ಲಿ ತೀವ್ರ ಶೋಧ ನಡೆಸುತ್ತಿವೆ.

ಪ್ರಕರಣದಲ್ಲಿ ಖಾಂಡ್ಯ ಪ್ರವೀಣ್‌ಗೆ ಸಹಕರಿಸಿರುವ ಶಂಕೆ ಮೇರೆಗೆ, ಆತನ ಆಪ್ತರಾದ ಕೆಲವು ಬಜರಂಗದಳದ ಮಾಜಿ ಸದಸ್ಯರಿಗಾಗಿ ನಗರದಲ್ಲಿ ಸಿಐಡಿ ತಂಡ ಹುಡುಕಾಟ ನಡೆಸುತ್ತಿದೆ. ಶಂಕಿತರು ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡು ನಗರ ತೊರೆದಿದ್ದಾರೆ’ ಎನ್ನುತ್ತವೆ ಮೂಲಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.