ADVERTISEMENT

‘ಮಧ್ಯಮ ಮಾರ್ಗದವರು ಮೈಕೊಡವಿ ನಿಲ್ಲಲಿ’

ಆಳ್ವಾಸ್ ನುಡಿಸಿರಿ ಸಮಾರೋಪದಲ್ಲಿ ಹಿರಿಯ ವಿಮರ್ಶಕ ಡಾ.ಗಿರಡ್ಡಿ ಗೋವಿಂದರಾಜ ಆಶಯ

ಚಿದಂಬರ ಪ್ರಸಾದ್
Published 20 ನವೆಂಬರ್ 2016, 19:30 IST
Last Updated 20 ನವೆಂಬರ್ 2016, 19:30 IST
ಮೂಡುಬಿದಿರೆಯಲ್ಲಿ ಭಾನುವಾರ ನಡೆದ ಆಳ್ವಾಸ್ ನುಡಿಸಿರಿ- 2016 ಸಮಾರೋಪ ಸಮಾರಂಭದಲ್ಲಿ  ಡಾ. ಜ್ಞಾನಾನಂದ, ಡಾ. ಚಂದ್ರಶೇಖರ ಚೌಟ, ಜಬ್ಬಾರ ಸಮೋ, ಶ್ರೀನಿವಾಸ್ ಜಿ.ಕಪ್ಪಣ್ಣ, ಕೆ.ವಿ. ಅಕ್ಷರ, ಡಾ. ಕೆ.ಆರ್. ಸಂಧ್ಯಾರೆಡ್ಡಿ, ಸುಬ್ರಾಯ ಚೊಕ್ಕಾಡಿ, ಡಾ.ಗಿರಡ್ಡಿ ಗೋವಿಂದರಾಜ ಡಾ. ಚೆನ್ನಣ್ಣ ವಾಲೀಕಾರ, ಜಿ.ಎನ್. ರಂಗನಾಥರಾವ್, ಹರಿಣಿ, ಶೀನಪ್ಪ ರೈ ಸಂಪಾಜೆ, ಎಚ್.ಆರ್. ಲೀಲಾವತಿ ಅವರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು                 ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ
ಮೂಡುಬಿದಿರೆಯಲ್ಲಿ ಭಾನುವಾರ ನಡೆದ ಆಳ್ವಾಸ್ ನುಡಿಸಿರಿ- 2016 ಸಮಾರೋಪ ಸಮಾರಂಭದಲ್ಲಿ ಡಾ. ಜ್ಞಾನಾನಂದ, ಡಾ. ಚಂದ್ರಶೇಖರ ಚೌಟ, ಜಬ್ಬಾರ ಸಮೋ, ಶ್ರೀನಿವಾಸ್ ಜಿ.ಕಪ್ಪಣ್ಣ, ಕೆ.ವಿ. ಅಕ್ಷರ, ಡಾ. ಕೆ.ಆರ್. ಸಂಧ್ಯಾರೆಡ್ಡಿ, ಸುಬ್ರಾಯ ಚೊಕ್ಕಾಡಿ, ಡಾ.ಗಿರಡ್ಡಿ ಗೋವಿಂದರಾಜ ಡಾ. ಚೆನ್ನಣ್ಣ ವಾಲೀಕಾರ, ಜಿ.ಎನ್. ರಂಗನಾಥರಾವ್, ಹರಿಣಿ, ಶೀನಪ್ಪ ರೈ ಸಂಪಾಜೆ, ಎಚ್.ಆರ್. ಲೀಲಾವತಿ ಅವರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ   
ಮೂಡುಬಿದಿರೆ: 'ಇಡೀ ದೇಶದಲ್ಲಿ ಅಸಹಿಷ್ಣುತೆಯ ವಾತಾವರಣ ನಿರ್ಮಾಣವಾಗಿದೆ. ಎಡ ಮತ್ತು ಬಲಪಂಥೀಯ ವಿಚಾರಗಳ ಮಧ್ಯೆ ಬೇರೆ ಆಯ್ಕೆಯೇ ಇಲ್ಲದಾಗಿದೆ. ಇದು ನಿಜವಾದ ಪ್ರಜಾಪ್ರಭುತ್ವ ಅಲ್ಲ' ಎಂದು ಹಿರಿಯ ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜ ಹೇಳಿದರು.
 
ವಿದ್ಯಾಗಿರಿಯಲ್ಲಿ ಭಾನುವಾರ ನಡೆದ 13ನೇ ವರ್ಷದ ಆಳ್ವಾಸ್ ನುಡಿಸಿರಿಯ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು. 
 
‘ಒಂದೋ ಎಡಪಂಥೀಯ ವಿಚಾರಗಳನ್ನು ಒಪ್ಪಿಕೊಳ್ಳಬೇಕು. ಇಲ್ಲವೇ ಬಲಪಂಥೀಯ ವಿಚಾರಗಳನ್ನು ಅಪ್ಪಿಕೊಳ್ಳಬೇಕು. ಇಂತಹ ಪರಿಸ್ಥಿತಿ ಪ್ರಜಾಪ್ರಭುತ್ವಕ್ಕೆ ಶೋಭೆ ಅಲ್ಲ. ಈ ಸ್ಥಿತಿಯಲ್ಲಿ ಮಧ್ಯಮ ಮಾರ್ಗದ ಗುಂಪು ಹೆಚ್ಚು ಪ್ರಸ್ತುತವಾಗುತ್ತಿದೆ. ಅದು ಹೆಚ್ಚು ಪ್ರಚಾರಕ್ಕೆ ಬರಬೇಕಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು. 
 
‘ಇಂದು ಎಡಪಂಥೀಯರು, ಬಲಪಂಥೀಯರಿಗೆ ಸೆಡ್ಡು ಹೊಡೆಯುವ ಉಗ್ರವಾದವನ್ನು ಅನುಸರಿಸುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಎಡಪಂಥೀಯ ಸರ್ಕಾರಗಳು 25 ವರ್ಷ ಆಡಳಿತ ನಡೆಸಿವೆ. ಗೂಂಡಾಗಳನ್ನು ಕಳುಹಿಸಿ ಮತ ಹಾಕಿಸಿಕೊಂಡು, ಆಡಳಿತ ನಡೆಸುವುದು ಪ್ರಜಾಪ್ರಭುತ್ವ ಅಲ್ಲ’ ಎಂದು ಹೇಳಿದರು. 
 
ಎಡ ಮತ್ತು ಬಲಪಂಥೀಯ ವಿಚಾರಗಳನ್ನು ನಿಗ್ರಹಿಸುವ ಶಕ್ತಿ ಇರುವ ಮಧ್ಯಮ ಮಾರ್ಗದವರು ಮೈಕೊಡವಿ ನಿಲ್ಲಬೇಕು. ಹೆಚ್ಚು ಕ್ರಿಯಾಶೀಲವಾಗಬೇಕು ಎಂದು ಗಿರಡ್ಡಿ ಅವರು ಸಲಹೆ ನೀಡಿದರು. 
 
‘ಇಂತಹ ಪರಿಸ್ಥಿತಿಯಲ್ಲಿ ಆಳ್ವಾಸ್ ನುಡಿಸಿರಿಯೂ ಕಲೆ, ಸಂಸ್ಕೃತಿ, ಪರಂಪರೆಗಳನ್ನು ಬೆಳೆಸುವ ಬಹುದೊಡ್ಡ ಪರಂಪರೆಯನ್ನು ಕೈಗೆತ್ತಿಕೊಂಡಿದೆ. ಆ ಮೂಲಕ ಮಧ್ಯಮ ವರ್ಗವನ್ನು ಬಡಿದೆಬ್ಬಿಸುವ ಕೆಲಸ ಮಾಡುತ್ತಿದೆ. ಹತ್ತಾರು ಸಾವಿರ ಜನರನ್ನು ಒಗ್ಗೂಡಿಸಿ, ಬಹುದೊಡ್ಡ ಕಾರ್ಯಕ್ರಮವನ್ನು ಎಂ. ಮೋಹನ್ ಆಳ್ವ ಮಾಡುತ್ತಿದ್ದಾರೆ. ಯಾವುದೇ ತಕರಾರು ಇಲ್ಲದೇ ಕಾರ್ಯಕ್ರಮಗಳು ನಡೆದಿವೆ. ಇಲ್ಲಿ ಸ್ವಾತಂತ್ರ್ಯ ಇರುವುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಿಲ್ಲ’ ಎಂದರು.
 
ನುಡಿಸಿರಿ ಸಮ್ಮೇಳನಾಧ್ಯಕ್ಷೆ ಡಾ. ಬಿ.ಎನ್. ಸುಮಿತ್ರಾಬಾಯಿ ಮಾತನಾಡಿ, ಆಳ್ವಾಸ್ ನುಡಿಸಿರಿಯು ಕೇವಲ ಹಿರಿಯರಿಂದ ಕಿರಿಯರಿಗೆ ಹರಿಯುವ ಜ್ಞಾನವಾಹಿನಿ ಅಷ್ಟೇ ಅಲ್ಲ. ಸಾಹಿತ್ಯ, ಸಂಸ್ಕೃತಿ, ಜಿಜ್ಞಾಸೆಗಳ ನೇಯ್ಗೆ ಇಲ್ಲಿದೆ. 
 
ಯಾರದ್ದೋ ಮಾತು ಕೇಳಿ ಸಮ್ಮೇಳನದ ಅಧ್ಯಕ್ಷತೆ ವಹಿಸಿಕೊಳ್ಳದೇ ಇದ್ದಿದ್ದರೆ, ಅಪೂರ್ವ ಅನುಭವವನ್ನು ಕಳೆದುಕೊಳ್ಳಬೇಕಿತ್ತು ಎಂದರು.
 
ಡಾ. ಗಿರಡ್ಡಿ ಅವರು ಹೇಳಿದ ಮಧ್ಯಮ ಮಾರ್ಗದ ಗುಂಪು ಈ ಸಂಸ್ಥೆಯಿಂದ ಪ್ರಾರಂಭವಾಗಿದೆ. ಇದು ಇಡೀ ನಾಡಿಗೆ ಪಸರಿಸುವಂತಾಗಲಿದೆ ಎಂದು ಆಶಿಸಿದರು. 
ತಲಾ ರೂ.25 ಸಾವಿರ ನಗದು, ಪ್ರಶಸ್ತಿ ಫಲಕಗಳನ್ನು ಒಳಗೊಂಡ ಆಳ್ವಾಸ್ ನುಡಿಸಿರಿ ಪ್ರಶಸ್ತಿಯನ್ನು 13 ಮಂದಿ ಗಣ್ಯರಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಪ್ರದಾನ ಮಾಡಿದರು.
 
**
ಸಾಹಿತಿಯಾಗಿ ಬೆಂಗಳೂರಿನ ಜನರಿಗೆ ನನ್ನನ್ನು ಪರಿಚಯಿಸಿದ್ದು 'ಪ್ರಜಾವಾಣಿ' ಪತ್ರಿಕೆ. ನನ್ನ ಲೇಖನಗಳನ್ನು ಪ್ರಕಟಿಸಲು ಅವಕಾಶ ನೀಡಿದ್ದರಿಂದಲೇ ಇದು ಸಾಧ್ಯವಾಯಿತು. 
-ಡಾ. ಬಿ.ಎನ್. ಸುಮಿತ್ರಾ ಬಾಯಿ, ಆಳ್ವಾಸ್ ನುಡಿಸಿರಿ ಸಮ್ಮೇಳನಾಧ್ಯಕ್ಷೆ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.