ADVERTISEMENT

ಮರಾಠ ಸಮಾಜವನ್ನು ‘2ಎ’ಗೆ ಸೇರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2017, 19:30 IST
Last Updated 19 ಫೆಬ್ರುವರಿ 2017, 19:30 IST
ಛತ್ರಪತಿ ಶಿವಾಜಿ ಭಾವಚಿತ್ರಕ್ಕೆ ಪಿ.ಜಿ.ಆರ್.ಸಿಂಧ್ಯ ಅವರು ಪುಷ್ಪ ನಮನ ಸಲ್ಲಿಸಿದರು. (ಎಡದಿಂದ) ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಸುರೇಶ್‌ ರಾವ್ ಸಾಠೆ,   ರಾಣೋಜಿರಾವ್ ಸಾಠೆ,  ಬಿಬಿಎಂಪಿ ಸದಸ್ಯ ಗಣೇಶರಾವ್ ಮಾನೆ, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಜಿ.ಆರ್. ಹನುಮಂತ ರಾವ್  ಪನ್ನಾಳೆ,  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ ಉಪಸ್ಥಿತರಿದ್ದರು  –ಪ್ರಜಾವಾಣಿ ಚಿತ್ರ
ಛತ್ರಪತಿ ಶಿವಾಜಿ ಭಾವಚಿತ್ರಕ್ಕೆ ಪಿ.ಜಿ.ಆರ್.ಸಿಂಧ್ಯ ಅವರು ಪುಷ್ಪ ನಮನ ಸಲ್ಲಿಸಿದರು. (ಎಡದಿಂದ) ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಸುರೇಶ್‌ ರಾವ್ ಸಾಠೆ, ರಾಣೋಜಿರಾವ್ ಸಾಠೆ, ಬಿಬಿಎಂಪಿ ಸದಸ್ಯ ಗಣೇಶರಾವ್ ಮಾನೆ, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಜಿ.ಆರ್. ಹನುಮಂತ ರಾವ್ ಪನ್ನಾಳೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ ಉಪಸ್ಥಿತರಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಮರಾಠ ಸಮಾಜವನ್ನು ಹಿಂದುಳಿದ ವರ್ಗಗಳ 3ಬಿ ಪ್ರವರ್ಗ ದಿಂದ 2ಎಗೆ ಸೇರಿಸಬೇಕು’ ಎಂದು ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಆಡಳಿತ ಮಂಡಳಿಯ ಅಧ್ಯಕ್ಷ ವಿ.ಎ. ರಾಣೋಜಿರಾವ್ ಸಾಠೆ ಒತ್ತಾಯಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು. ‘ರಾಜ್ಯದಲ್ಲಿ ಮರಾಠ ಸಮಾಜದ  ಜನಸಂಖ್ಯೆ 35ಲಕ್ಷದಷ್ಟಿದೆ. ಸಮಾಜದ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ನೀಡಬೇಕು’ ಎಂದು ಆಗ್ರಹಿಸಿದರು. 

‘ಶಿವಾಜಿಯ ತಂದೆ ಷಹಾಜಿ ರಾಜೇ ಭೋಸ್ಲೆ ಅವರ ಸಮಾಧಿಯನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಬೇಕು. ಮರಾಠ ಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ನಿಗಮವನ್ನು ಸ್ಥಾಪಿಸಬೇಕು’ ಎಂದು ಒತ್ತಾಯಿಸಿದರು.

ಭಾರತ್ ಸ್ಕೌಟ್ಸ್‌ ಮತ್ತು ಗೈಡ್ಸ್‌ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯ ಮಾತನಾಡಿ, ‘ದಕ್ಷ ಆಡಳಿತಗಾರನಾಗಿದ್ದ ಶಿವಾಜಿಯು ಒಬ್ಬ ಆದರ್ಶ ಪುರುಷ ಹಾಗೂ ಶಾಂತಿ ಪ್ರಿಯ. ದೇಶದ ಸಂಸ್ಕೃತಿ, ಭಾಷೆ, ಹಿಂದೂ ಧರ್ಮದ ಉಳಿವಿಗೆ ಶಿವಾಜಿಯ ಕೊಡುಗೆ ಮಹತ್ವದ್ದು’ ಎಂದರು.

‘ಮರಾಠ ಸಮಾಜದವರು ನಮ್ಮ ರಾಜ್ಯದ ಮೂಲದವರಲ್ಲ ಎಂಬುದು ತಪ್ಪು ಕಲ್ಪನೆ. ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ರಾಜಕೀಯ ಹಾಗೂ ಭೌಗೋಳಿಕ ಸಂಬಂಧ ಎಂದಿಗೂ ಕೆಡಬಾರದು. ಈ ರಾಜ್ಯಗಳ ಜನತೆ ಸಹೋದರತ್ವ ಭಾವವನ್ನು ಹೊಂದಬೇಕು. ಮಹಾರಾಷ್ಟ್ರದಲ್ಲಿ ಕನಕದಾಸರ ಹಾಗೂ ಬಸವಣ್ಣನವರ ಜಯಂತಿ ಇಂದಿಗೂ ಆಚರಣೆಯಲ್ಲಿರುವುದು ಶ್ಲಾಘನೀಯ’ ಎಂದರು.

‘ಸಮಾಜ ಸುಧಾರಕರ ಆಚರಣೆಗಳಿಗೆ ಜಾತಿಯ ಲೇಪನ ನೀಡಬಾರದು. ದೇಶಕ್ಕಾಗಿ ಹೋರಾಡಿದ ಅಪ್ರತಿಮ ವೀರರ ಚರಿತ್ರೆಗಳನ್ನು ಸ್ವಹಿತಾಸಕ್ತಿಗಾಗಿ  ತಿರುಚಬಾರದು’ ಎಂದು ಹೇಳಿದರು.

ಅದ್ದೂರಿ ಮೆರವಣಿಗೆ: ನಗರದ ಮಿನರ್ವ ವೃತ್ತದ ಅರಸೋಜಿರಾವ್ ಛತ್ರದಿಂದ ರವೀಂದ್ರ ಕಲಾಕ್ಷೇತ್ರದವರೆಗೆ ಜನಪದ ಕಲಾ ತಂಡಗಳೊಂದಿಗೆ ಛತ್ರಪತಿ ಶಿವಾಜಿ ಅವರ ಭಾವಚಿತ್ರದ ಮೆರವಣಿಗೆ ನಡೆಯಿತು.

ಮನಸೆಳೆದ ಗೊಂದಲಿಗರ ಹಾಡು: ಬಾಗಲಕೋಟೆ ಜಿಲ್ಲೆ ವೆಂಕಟಪ್ಪ ಅಂಬಾಜಿ ಸುಗತೇಕರ್ ಮತ್ತು ಕಲಾ ತಂಡದವರು ನಡೆಸಿಕೊಟ್ಟ ಗೊಂದಲಿಗರ ಹಾಡು ಮನ ಸೆಳೆಯಿತು. 

ನಾಸಿಕ್ ಡೋಲು, ಕಂಸಾಳೆ, ಪೂಜಾ ಕುಣಿತ, ಕರಡಿ ಮಜಲು, ಜಗ್ಗಲಿಕೆ, ಗೊರವರ ಕುಣಿತ, ಕೀಲು ಕುದುರೆ, ಡೊಳ್ಳುಕುಣಿತ   ಮೆರವಣಿಗೆಗೆ ಕಳೆ ಕಟ್ಟಿದ್ದವು. ಛತ್ರಪತಿ ಶಿವಾಜಿ ನಾಟಕ ಪ್ರದರ್ಶನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT