ADVERTISEMENT

ಮಹಾಂತೇಶ್‌, ಶಂಕರ್‌ ಮೊದಲಿಗರು

‘ಪ್ರಜಾವಾಣಿ’ ದೀಪಾವಳಿ ಕಥೆ–ಕಾವ್ಯ ಸ್ಪರ್ಧೆಗೆ ಉತ್ತಮ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2013, 19:30 IST
Last Updated 22 ಅಕ್ಟೋಬರ್ 2013, 19:30 IST

ಬೆಂಗಳೂರು: ‘ಪ್ರಜಾವಾಣಿ ದೀಪಾವಳಿ ವಿಶೇಷಾಂಕ­–2013’ರ ಕಥಾಸ್ಪರ್ಧೆ – ಕಾವ್ಯಸ್ಪರ್ಧೆಗೆ ಹಿರಿಯ ಮತ್ತು ಹೊಸ ತಲೆಮಾರಿನ ಬರಹಗಾರರಿಂದ ಅತ್ಯು ತ್ಸಾಹದ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮಹಾಂತೇಶ ನವಲಕಲ್‌ ಅವರ ‘ಬುದ್ಧಗಂಟೆಯ ಸದ್ದು’ ಕಥೆ ಹಾಗೂ ಡಾ. ಎಂ. ಶಂಕರ ಅವರ ‘ರೆಯ್ನ್ ರೆಯ್ನ್ ಗೋ ಅವೇ’ ಕವಿತೆಗಳು ಮೊದಲ ಬಹುಮಾನ ಪಡೆದಿವೆ.

ಕನಕರಾಜು ಆರನಕಟ್ಟೆ ಅವರ ‘ಗೋರುಕನ’ ಹಾಗೂ ಟಿ.ಕೆ. ದಯಾ ನಂದ ಅವರ ‘ರೆಕ್ಕೆಹಾವು’ ಕಥೆಗಳು ಕ್ರಮವಾಗಿ ಎರಡು ಮತ್ತು ಮೂರನೇ ಬಹುಮಾನ ಪಡೆದಿವೆ. ವಿದ್ಯಾರ್ಥಿ ವಿಭಾಗದಲ್ಲಿ ಅವಿನಾಶ ಬಡಿಗೇರ ಅವರ ‘ಒಳಗುದಿ’ ಕಥೆ ಬಹುಮಾನಕ್ಕೆ ಆಯ್ಕೆಯಾಗಿದ್ದರೆ, ಬಾದಲ್‌ ನಂಜುಂಡಸ್ವಾಮಿ ಅವರ ‘ಮೊರಖ ಇಲಿಗಳನ್ನು ಕೊಂದ ಕಥೆಯು’, ಬಸವಣ್ಣೆಪ್ಪ ಪ. ಕಂಬಾರ ಅವರ ‘ಗರ್ದಿ ಗಮ್ಮತ್ತ’, ಮಮತಾ ಆರ್‌. ಅವರ ‘ಅತಿ ತಲ್ಲಣ ಅತಿ ನಿಶ್ಶಬ್ದ’, ಮಿರ್ಜಾ ಬಷೀರ್‌ ಅವರ ‘ರೇಬಿಸ್‌’ ಹಾಗೂ ಸಂತೋಷ್‌ ಗುಡ್ಡಿಯಂಗಡಿ ಅವರ ‘ಕೊರಬಾಡು’ ಕಥೆಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.

ಕವನ ಸ್ಪರ್ಧೆ: ಕವನಸ್ಪರ್ಧೆಯಲ್ಲಿ ವನರಾಗಶರ್ಮ ಅವರ ‘ಕೇದಗೆಪುಷ್ಪ ಮತ್ತು ಹಾವು’ ಹಾಗೂ ಡಾ. ಎಚ್‌. ಎಸ್‌. ಅನುಪಮಾ ಕವಿತೆಗಳು ‘ಲೋಕವೇ ತಾನಾದ ಬಳಿಕ’ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆ ದಿವೆ. ಕಾವ್ಯಶ್ರೀ ನಾಯ್ಕ ಅವರ ‘ಹೂ ಮನೆ ಮತ್ತು ನಾನು’ ಹಾಗೂ ಕೆ.ಎ. ಪೃಥ್ವಿ ಅವರ ‘ಬೀಳದ ನಕ್ಷತ್ರ’ ರಚನೆ
ಗಳು ವಿದ್ಯಾರ್ಥಿ ವಿಭಾಗದಲ್ಲಿ ಬಹುಮಾವ ಪಡೆದಿವೆ.

ಜಿ.ವಿ. ಶಿವಕುಮಾರ ಅಮ್ಮಾಪುರ ಅವರ ‘ತೊಟ್ಟಿಲ ಹಗ್ಗಕ್ಕೆ ಕಟ್ಟಿದ ಮಿಡಿನಾಗರ’, ಗಿರೀಶ ಜಕಾಪುರೆ ಅವರ ‘ಅವಳೂ ಕವಿತೆ ಬರೆಯುತ್ತಿದ್ದಾಳೆ’, ಶಂಕರಯ್ಯ ಆರ್‌. ಘಂಟಿ ಅವರ ‘ನಾ ಶವ, ಬಯಸೆ ನಾಶವ’, ವಿ.ಕೆ. ಸಂಜ್ಯೋತಿ ಅವರ ‘ಖಾಲಿ ಬಿಳಿಗೋಡೆ’ ಮತ್ತು ಡಿ.ಎಸ್‌. ರಾಮ ಸ್ವಾಮಿ ಅವರ ‘ಅಕ್ಕನಿಗೆ’ ಕವಿತೆಗಳು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿವೆ.

ತೀರ್ಪುಗಾರರು: ಖ್ಯಾತ ಕಥೆಗಾರರಾದ ಕೆ.ವಿ. ತಿರುಮಲೇಶ್‌ ಮತ್ತು ಬಿ.ಟಿ ಜಾಹ್ನವಿ ಅವರು ಕಥಾಸ್ಪರ್ಧೆಯ ತೀರ್ಪುಗಾರ­ರಾಗಿ, ಹಿರಿಯ ಕವಿಗಳಾದ ಸುಬ್ರಾಯ ಚೊಕ್ಕಾಡಿ ಮತ್ತು ಹೇಮಾ ಪಟ್ಟಣಶೆಟ್ಟಿ ಕವನಸ್ಪರ್ಧೆಯ ನಿರ್ಣಾ ಯಕರಾಗಿ ಕಾರ್ಯ ನಿರ್ವಹಿಸಿದ್ದರು.

ಬಹುಮಾನದ ಮೊತ್ತ: ಮೊದಲ ಮೂರು ಸ್ಥಾನ ಪಡೆದ ಕಥೆಗಳು ಕ್ರಮವಾಗಿ ರೂ 20,000, ರೂ15,000 ಹಾಗೂ ರೂ10,000 ನಗದು ಬಹು ಮಾನ ಪಡೆಯಲಿವೆ. ಕವನಸ್ಪರ್ಧೆ ವಿಭಾಗದಲ್ಲಿನ ಮೊದಲ ಮೂರು ಕವಿತೆಗಳಿಗೆ ಕ್ರಮವಾಗಿ ರೂ5,000, ರೂ 3,000 ಹಾಗೂ ರೂ 2,000 ಬಹುಮಾನ ದೊರೆಯಲಿದೆ.

ಚಿಣ್ಣರ ವರ್ಣಚಿತ್ರ ಸ್ಪರ್ಧೆ: ಮಕ್ಕಳ ವರ್ಣಚಿತ್ರ ಸ್ಪರ್ಧೆಯಲ್ಲಿ ಪ್ರತೀಕ್ಷಾ ಮರಕಿಣಿ (ಬೆಂಗಳೂರು), ಲಕ್ಷ್ಮೀ ಪ್ರಸಾದ ಕೆ. ಆಚಾರ್‌ (ಪುತ್ತೂರು), ಮೇದಿನಿ ಶೆಟ್ಟಿ (ಕೋಟ), ಬಂಡೇಶ (ಎನ್‌. ಗಣೇಕಲ್‌, ದೇವದುರ್ಗ), ಎಸ್‌. ಕೀರ್ತಿ (ತುಮಕೂರು), ಮಹಿಮಾ ಗಣೇಶ್‌ ವೇರ್ಣೇಕರ್‌ (ಶಿರಸಿ), ಅಪೂರ್ವ (ರಾಯಚೂರು), ಆರ್‌. ಸಾನ್ವಿ (ಚಿತ್ರದುರ್ಗ) ಬಹುಮಾನ ಪಡೆದಿದ್ದಾರೆ. ಕಲಾವಿದೆ ಅಲಕಾ ರಾವ್‌ ಈ ಸ್ಪರ್ಧೆಯ ತೀರ್ಪುಗಾರರಾಗಿದ್ದರು.

ಬಹುಮಾನ ವಿತರಣೆ: ಅಕ್ಟೋಬರ್‌ 26ರಂದು ಗುಲ್ಬರ್ಗ­ದಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದ್ದು, ಹಿರಿಯ ಕಾದಂಬರಿಗಾರ್ತಿ  ಗೀತಾ ನಾಗಭೂಷಣ ಹಾಗೂ ಕಥೆಗಾರ ಅಮರೇಶ ನುಗ ಡೋಣಿ ಅವರು ಅತಿಥಿಗಳಾಗಿ ಭಾಗವಹಿಸುವರು.

ತೀರ್ಪುಗಾರರ ಅನಿಸಿಕೆ
ಕಥಾವಸ್ತುಗಳು, ಶೈಲಿಗಳು ವೈವಿಧ್ಯಮಯವಾಗಿರುವುದು ಸಂತೋಷದ ಸಂಗತಿ. ಕಥೆ ಹೇಳುವುದಕ್ಕೆ ಎಷ್ಟೊಂದು ಸಾಧ್ಯತೆಗಳಿವೆಯಲ್ಲ ಎನಿಸಿ ವಿಸ್ಮಯವೂ ಆಗುತ್ತದೆ. ಕನ್ನಡ ಕಥನ ಸಾಹಿತ್ಯದ ಭವಿಷ್ಯದ ಕುರಿತು ಭರವಸೆ ನೀಡುವಂಥ ಕಥೆಗಳಿವು.
–ಕೆ.ವಿ. ತಿರುಮಲೇಶ್.‌

ಬಹುಮಾನಿತ ಕಥೆಗಳ ಹೊಳಹು ಆಧುನಿಕ ಮನಸ್ಸುಗಳಿಂದ ಪ್ರೇರಿತಗೊಂಡಿದೆ.
–ಬಿ.ಟಿ. ಜಾಹ್ನವಿ.

ADVERTISEMENT

ಕವನಸ್ಪರ್ಧೆಗೆ ವ್ಯಕ್ತವಾಗಿರುವ ಪ್ರತಿಕ್ರಿಯೆ ಸಮಕಾಲೀನ ಕಾವ್ಯಸಂದರ್ಭದ ಉತ್ಸಾಹಕ್ಕೆ ಉದಾಹರಣೆ.
–ಸುಬ್ರಾಯ ಚೊಕ್ಕಾಡಿ.

ಸಮಕಾಲೀನ ಕಾವ್ಯಸಂದರ್ಭ ನಿಜಕ್ಕೂ ಆಶಾದಾಯಕವಾಗಿದೆ.
–ಹೇಮಾ ಪಟ್ಟಣಶೆಟ್ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.