ADVERTISEMENT

ಮಹಿಳೆಯನ್ನು ಅರೆನಗ್ನಗೊಳಿಸಿ ಥಳಿತ

ಬಂದಾಳ ಗ್ರಾಮದಲ್ಲಿ ಮಹಿಳೆಯರಿಂದಲೇ ನಡೆದ ಅಮಾನವೀಯ ಕೃತ್ಯ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2017, 19:30 IST
Last Updated 12 ಫೆಬ್ರುವರಿ 2017, 19:30 IST
ಮಹಿಳೆಯನ್ನು ಅರೆನಗ್ನಗೊಳಿಸಿ ಥಳಿತ
ಮಹಿಳೆಯನ್ನು ಅರೆನಗ್ನಗೊಳಿಸಿ ಥಳಿತ   
ಸಿಂದಗಿ (ವಿಜಯಪುರ): ಪಟ್ಟಣದ ಕಾಂಗ್ರೆಸ್‌ ಕಾರ್ಯಕರ್ತೆ ಸುಜಾತಾ ಸಿಂಧೆ ಅವರನ್ನು ಸಾರ್ವಜನಿಕವಾಗಿ ಅರೆನಗ್ನಗೊಳಿಸಿ, ಚಪ್ಪಲಿಯಿಂದ ಥಳಿಸಿದ ಅಮಾನವೀಯ ಕೃತ್ಯ ತಾಲ್ಲೂಕಿನ ಬಂದಾಳ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ.
 
ಗ್ರಾಮದ ಕೆಲ ಮಹಿಳೆಯರೇ ಈ ಕೃತ್ಯ ನಡೆಸಿರುವ ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಮೂಲಕ, ಘಟನೆ ಬೆಳಕಿಗೆ ಬಂದಿದೆ.
 
ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಯ ಸಿಂದಗಿ ಘಟಕದ ಚಾಲಕ ಮತ್ತು ನಿರ್ವಾಹಕ, ಗ್ರಾಮದ ಶ್ರೀಕಾಂತ ಬೀರಗೊಂಡ (37) ಎಂಬುವವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾದ ರೇಣುಕಾ ಮಣೂರ ಎಂಬಾಕೆಗೆ ಸುಜಾತಾ ಬೆಂಬಲ ನೀಡಿದ್ದಾರೆ ಎಂದು ಆರೋಪಿಸಿ, ಗ್ರಾಮಸ್ಥರು ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.
 
ಘಟನೆಗೆ ಸಂಬಂಧಿಸಿದಂತೆ ಸುಜಾತಾ ಅವರು ಭಾನುವಾರ ಸಿಂದಗಿ ಪೊಲೀಸ್ ಠಾಣೆಯಲ್ಲಿ 25 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
 
ಘಟನೆ ವಿವರ: ಶ್ರೀಕಾಂತ ಅವರ ಶವ ಶನಿವಾರ ಬೂದಿಹಾಳ ಗ್ರಾಮದ ಬಳಿಯ ಕಾಲುವೆಯಲ್ಲಿ ಪತ್ತೆಯಾಗಿತ್ತು. ಸಿಂದಗಿಯಲ್ಲಿ ಶ್ರೀಕಾಂತ ಅವರು ರೇಣುಕಾ ಜತೆಗೆ ವಾಸವಿದ್ದರು. ಆದರೆ ಅವರಿಬ್ಬರೂ ಮದುವೆಯಾಗಿರಲಿಲ್ಲ. ಈಚೆಗೆ ರೇಣುಕಾ ಮತ್ತೊಬ್ಬ ವ್ಯಕ್ತಿ ಜತೆಗೆ ಸಂಬಂಧ ಬೆಳೆಸಿದ್ದರು ಎನ್ನಲಾಗಿದ್ದು, ಇದಕ್ಕೆ ಶ್ರೀಕಾಂತ ಆಕ್ಷೇಪಿಸಿದ್ದರು ಎಂದು ತಿಳಿದುಬಂದಿದೆ.
 
ಶವ ಪತ್ತೆಯಾದ ನಂತರ, ಶ್ರೀಕಾಂತ ತಂದೆ ಗೊಲ್ಲಾಳಪ್ಪ ಅವರು ಕೊಲೆ ಶಂಕೆ ವ್ಯಕ್ತಪಡಿಸಿ ರೇಣುಕಾ ವಿರುದ್ಧ  ದೂರು ದಾಖಲಿಸಿದ್ದರು.
 
ಪೊಲೀಸರು ರೇಣುಕಾಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದರು. ಈಕೆಯ ಸ್ನೇಹಿತೆಯೇ ಹಲ್ಲೆಗೀಡಾದ ಸುಜಾತಾ. ಶನಿವಾರ ಗ್ರಾಮಕ್ಕೆ ಬಂದಿದ್ದ ಇವರು, ಶ್ರೀಕಾಂತ ಮನೆ ಬಳಿಯ ದೃಶ್ಯಾವಳಿಗಳನ್ನು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಳ್ಳುತ್ತಿದ್ದರು. ಇದನ್ನು ಪ್ರಶ್ನಿಸಿದ ಗ್ರಾಮಸ್ಥರಿಗೆ ತಾವು ಕಾಂಗ್ರೆಸ್‌ ಕಾರ್ಯಕರ್ತೆ ಎಂದು ಹೇಳಿದ್ದಾರೆ. ಅಷ್ಟರಲ್ಲಿ ರೇಣುಕಾಳ ಸ್ನೇಹಿತೆ ಎಂಬುದು ಗೊತ್ತಾಗಿ ಆಕ್ರೋಶಗೊಂಡ ಮಹಿಳೆಯರು ಚಪ್ಪಲಿಯಿಂದ ಥಳಿಸಿ, ಸೀರೆ–ಕುಪ್ಪಸ ಹರಿದು ಅರೆನಗ್ನಗೊಳಿಸಿದ್ದಾರೆ ಎಂದು ಸಿಂದಗಿ ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.