ADVERTISEMENT

ಮೂವರಿಗೆ 625 ಅಂಕ

​ಪ್ರಜಾವಾಣಿ ವಾರ್ತೆ
Published 12 ಮೇ 2017, 19:30 IST
Last Updated 12 ಮೇ 2017, 19:30 IST
ಮೂವರಿಗೆ 625 ಅಂಕ
ಮೂವರಿಗೆ 625 ಅಂಕ   

ಬೆಂಗಳೂರು: ಎಸ್‌ಎಸ್‌ಎಲ್‌ಸಿಯಲ್ಲಿ  ಮೂವರು ವಿದ್ಯಾರ್ಥಿಗಳು 625ಕ್ಕೆ  625 ಅಂಕಗಳನ್ನು ಗಳಿಸಿ ಸಾಧನೆ ಮೆರೆದಿದ್ದಾರೆ. ಆದರೆ, ಒಟ್ಟಾರೆ ಫಲಿತಾಂಶ ಏಳು ವರ್ಷಗಳಿಗಿಂತ ಕೆಳಗೆ ಕುಸಿದಿದೆ.

ಕಳೆದ ವರ್ಷ ಭದ್ರಾವತಿಯ ಬಿ.ಎಸ್. ರಂಜನ್ ಎಂಬ ವಿದ್ಯಾರ್ಥಿ ಮೊದಲ ಬಾರಿಗೆ 625 ಅಂಕ ಪಡೆದು ಇತಿಹಾಸ ಸೃಷ್ಟಿಸಿದ್ದ. ಆ ಹೆಗ್ಗಳಿಕೆಗೆ ಈ ವರ್ಷ ಹೆಚ್ಚಿನ ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದಾರೆ. ಇದಲ್ಲದೆ, ಈ ಬಾರಿ ಆರು ವಿದ್ಯಾರ್ಥಿಗಳು 624 ಅಂಕ ಮತ್ತು 13 ವಿದ್ಯಾರ್ಥಿಗಳು 623 ಅಂಕ ಪಡೆದಿದ್ದಾರೆ.

ಬೆಂಗಳೂರಿನ ಎಂಇಎಸ್ ಕಿಶೋರ ಕೇಂದ್ರ ಪ್ರೌಢ ಶಾಲೆ ವಿದ್ಯಾರ್ಥಿ ಸುಮಂತ್ ಹೆಗ್ಡೆ, ಪುತ್ತೂರಿನ ಸೇಂಟ್ ಜೋಕಿಮ್ಸ್ ಪ್ರೌಢಶಾಲೆಯ ಎಚ್. ಪೂರ್ಣಾನಂದ ಮತ್ತು ಜಮಖಂಡಿಯ ಎಸ್‌.ಆರ್‌.ಎ ಸಂಯುಕ್ತ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಪಲ್ಲವಿ ಶಿರಹಟ್ಟಿ 625 ಅಂಕಗಳನ್ನು ಗಳಿಸಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್‌ ಮತ್ತು ಪ್ರೌಢ ಶಿಕ್ಷಣ ಇಲಾಖೆ ನಿರ್ದೇಶಕಿ ಯಶೋದಾ ಬೋಪಣ್ಣ ಶನಿವಾರ ಫಲಿತಾಂಶ ಪಟ್ಟಿ  ಬಿಡುಗಡೆ ಮಾಡಿದರು.

ADVERTISEMENT

ಏಳು ವರ್ಷಗಳಲ್ಲೇ ಕಳಪೆ: ಪಿಯುಸಿಯಂತೆ ಎಸ್‌ಎಸ್‌ಎಲ್‌ಸಿ ಫಲಿತಾಂಶವೂ ಈ ಬಾರಿ ಗಣನೀಯ ಕುಸಿತ ಕಂಡಿದೆ. ಒಟ್ಟಾರೆ ಶೇ 67.87ರಷ್ಟು ಫಲಿತಾಂಶ ದಾಖಲಾಗಿದ್ದು, 2011ರಿಂದ ಈ ವರೆಗೆ ಇಷ್ಟು ಕಡಿಮೆ ಫಲಿತಾಂಶ ದಾಖಲಾಗಿರಲಿಲ್ಲ. 2014 ಮತ್ತು 2015ರಲ್ಲಿ ಒಟ್ಟು  ಉತ್ತೀರ್ಣ ಪ್ರಮಾಣ ಶೇ 81ರಷ್ಟಿತ್ತು.

ಉಡುಪಿ ಪ್ರಥಮ: ಕಳೆದ ವರ್ಷ ಎರಡನೇ ಸ್ಥಾನದಲ್ಲಿದ್ದ ಉಡುಪಿ ಈ ಬಾರಿ ಪ್ರಥಮ ಸ್ಥಾನಕ್ಕೆ ಏರಿದೆ. ದಕ್ಷಿಣ ಕನ್ನಡ ಎರಡನೇ ಸ್ಥಾನದಲ್ಲಿದೆ. ವಿಶೇಷ ಎಂದರೆ ಕಳೆದ ವರ್ಷ ಮೊದಲ ಸ್ಥಾನದಲ್ಲಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆ ಈ ಬಾರಿ 10ನೇ ಸ್ಥಾನಕ್ಕೆ ಕುಸಿದಿದೆ. ಹಿಂದಿನ ಬಾರಿ ಕೊನೆ ಸ್ಥಾನ ಗಳಿಸಿದ್ದ ಬಳ್ಳಾರಿ ಜಿಲ್ಲೆ ಈ ಬಾರಿ 17ನೇ ಸ್ಥಾನ ಪಡೆದಿದೆ. ಬೀದರ್ ಕೊನೆಯ ಸ್ಥಾನ (34) ಗಳಿಸಿದೆ.

ಬಾಲಕಿಯರು ಮೇಲುಗೈ: ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ವಿದ್ಯಾರ್ಥಿನಿಯರ ಉತ್ತೀರ್ಣ ಪ್ರಮಾಣ ಶೇ 74.08 ರಷ್ಟಿದೆ.
ಗ್ರಾಮೀಣ ವಿದ್ಯಾರ್ಥಿಗಳು ನಗರದ ವಿದ್ಯಾರ್ಥಿಗಳಿಗಿಂತಲೂ ಮುಂದೆ ಇರುವುದು (ಶೇ74.12) ಫಲಿತಾಂಶದಲ್ಲಿ ಕಂಡುಬಂದಿದೆ.

ಜೂನ್‌ 15ರಿಂದ ಪೂರಕ ಪರೀಕ್ಷೆ: ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಜೂನ್‌ 15ರಿಂದ 22ರವರೆಗೆ ನಡೆಯಲಿದೆ.
ಪರೀಕ್ಷಾ ಶುಲ್ಕ ಪಾವತಿಸಲು ಇದೇ 22 ಕೊನೆಯ ದಿನ. ಪರಿಶಿಷ್ಟ ಜಾತಿ, ಪಂಗಡ ಹಾಗೂ ಪ್ರವರ್ಗ–1ರ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಇತರೆ ವಿದ್ಯಾರ್ಥಿಗಳಿಗೆ ಒಂದು ವಿಷಯಕ್ಕೆ ₹ 240, ಎರಡು ವಿಷಯಕ್ಕೆ ₹ 290 ಹಾಗೂ ಮೂರು ಅಥವಾ ಮೂರಕ್ಕಿಂತ ಹೆಚ್ಚು ವಿಷಯಗಳಿಗೆ ₹ 390 ಶುಲ್ಕವನ್ನು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿಗದಿ ಮಾಡಿದೆ.

ಮೇ 22 ಕೊನೇ ದಿನ

ಉತ್ತರ ಪತ್ರಿಕೆಯ ನಕಲು ಪ್ರತಿ ಹಾಗೂ ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಇದೇ 22 ಕೊನೆಯ ದಿನ. ಮರು ಎಣಿಕೆಗೆ ಒಂದು ವಿಷಯಕ್ಕೆ
₹ 150 ಹಾಗೂ ಛಾಯಾ ಪ್ರತಿಗೆ ಒಂದು  ವಿಷಯಕ್ಕೆ ₹ 300 ಶುಲ್ಕ ನಿಗದಿಪಡಿಸಲಾಗಿದೆ.
ಮರು ಮೌಲ್ಯಮಾಪನ:  ಉತ್ತರ ಪತ್ರಿಕೆಯ ಮರು ಮೌಲ್ಯಮಾಪನ ಬಯಸುವ ವಿದ್ಯಾರ್ಥಿಗಳು ನಕಲು ಪ್ರತಿ ಸ್ವೀಕರಿಸಿದ ಏಳು
ದಿನದೊಳಗೆ ಮಂಡಳಿಗೆ ಅರ್ಜಿ ಸಲ್ಲಿಸಬೇಕು.
ಮರು ಮೌಲ್ಯಮಾಪನಕ್ಕೆ ಒಂದು ವಿಷಯಕ್ಕೆ ₹ 700 ಶುಲ್ಕ ನಿಗದಿ ಮಾಡಲಾಗಿದೆ.
ಮರು ಎಣಿಕೆ, ನಕಲು ಪ್ರತಿ, ಮರು ಮೌಲ್ಯಮಾಪನಕ್ಕೆ ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್ ಮುಖಾಂತರವೂ ಅರ್ಜಿ ಸಲ್ಲಿಸಬಹುದು.

ಅಂಕಿಅಂಶ

8,56,286 ಪರೀಕ್ಷೆ ಬರೆದವರು

5,81,134 ಉತ್ತೀರ್ಣರಾದವರು

2,75,152 ಅನುತ್ತೀರ್ಣರಾದವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.