ADVERTISEMENT

ಮೆರೆದ ಸೌಹಾರ್ದತೆ, ಮಸೀದಿಗೆ ಜಾಗ ದಾನ ನೀಡಿದ ದೇವಸ್ಥಾನ ಮಂಡಳಿ!

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2017, 19:48 IST
Last Updated 16 ಡಿಸೆಂಬರ್ 2017, 19:48 IST
ಓಲೆ ಮುಂಡೋವು ಮಸೀದಿಗೆ ಶುಕ್ರವಾರ ಬಂದಿದ್ದ ಮೋಹನ್ ರೈ ಅವರು ತಮ್ಮ ಜಾಗವನ್ನು ಮಸೀದಿಗೆ ದಾನವಾಗಿ ನೀಡಿದರು.
ಓಲೆ ಮುಂಡೋವು ಮಸೀದಿಗೆ ಶುಕ್ರವಾರ ಬಂದಿದ್ದ ಮೋಹನ್ ರೈ ಅವರು ತಮ್ಮ ಜಾಗವನ್ನು ಮಸೀದಿಗೆ ದಾನವಾಗಿ ನೀಡಿದರು.   

ಪುತ್ತೂರು: ಮಸೀದಿ, ದರ್ಗಾ ಕಟ್ಟಡ ವಿಸ್ತರಣೆಗಾಗಿ ಸ್ವಂತ ಜಮೀನಿನ ಭಾಗವನ್ನೇ ದಾನ ಮಾಡಿದ ದೇವಸ್ಥಾನ ವೊಂದರ ಆಡಳಿತ ಮಂಡಳಿ ಮಾಜಿ ಅಧ್ಯಕ್ಷರು ಸೌಹಾರ್ದತೆಗೆ ಸಾಕ್ಷಿಯಾಗಿದ್ದಾರೆ.

ಪುತ್ತೂರು ತಾಲ್ಲೂಕಿನ ಕೆಯ್ಯೂರು ಗ್ರಾಮ ಓಲೆಮುಂಡೋವು ನಿವಾಸಿ ಮೋಹನ್ ರೈ ಕೋಮು ಸಾಮರಸ್ಯ ಮೆರೆದವರು. ಪ್ರಗತಿಪರ ಕೃಷಿಕರಾದ ಇವರು ಕೆಯ್ಯೂರು ದುರ್ಗಾಪರಮೇಶ್ವರಿ ಮಹಿಷ ಮರ್ದಿನಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ. ರೈ ಅವರ ಜಮೀನಿನ ಪಕ್ಕದಲ್ಲೇ ಓಲೆಮುಂಡೋವು ದರ್ಗಾ ಮತ್ತು ಮಸೀದಿ ಇದೆ.

ದರ್ಗಾ ಕಟ್ಟಡ ವಿಸ್ತರಣೆಗೆ ಸ್ಥಳಾವಕಾಶದ ಕೊರತೆ ಇರುವ ಕಾರಣ ಮಸೀದಿ ಸಮಿತಿಯವರು ಮೋಹನ್ ರೈ ಅವರಲ್ಲಿ ಜಾಗವನ್ನು ನೀಡುವಂತೆ ಕೇಳಿಕೊಂಡಿದ್ದರು. ಅದರಂತೆ ಶುಕ್ರವಾರ ಮಸೀದಿಗೆ ತೆರಳಿ ತನ್ನ ಸ್ವಾಧೀನದ ಪಟ್ಟಾ ಜಾಗದಲ್ಲಿ ಸುಮಾರು 12 ಸೆಂಟ್ಸ್ ಸ್ಥಳವನ್ನು ಮಸೀದಿಗೆ
ಬಿಟ್ಟುಕೊಡುವುದಾಗಿ ವಾಗ್ದಾನ ಮಾಡಿದ್ದಾರೆ.

ADVERTISEMENT

ದರ್ಗಾದಲ್ಲಿ ನಡೆಯುವ ಉರೂಸ್, ಇತರ ಕಾರ್ಯಕ್ರಮಗಳಲ್ಲಿ ಮೋಹನ್‌ ರೈ ಭಾಗವಹಿಸುತ್ತಿದ್ದಾರೆ. ಭೂಮಿ ದಾನ ಮಾಡುವ ವಾಗ್ದಾನ ನೀಡಿದ ವೇಳೆ ಓಲೆಮುಂಡೋವು ಮಸೀದಿ ಅಧ್ಯಕ್ಷ ಪುತ್ತುಮೋನು ಹಾಜಿ, ಮಸೀದಿಯ ಖತೀಬರಾದ ಸಯ್ಯದಲವಿ ತಂಙಳ್ ಮಾಸ್ತಿಕುಂಡು, ಉಮ್ಮರ್ ಮುಸ್ಲಿಯಾರ್, ಇಬ್ರಾಹಿಂ ಕಡ್ಯ, ರೆಂಜಲಾಡಿ ಇಸ್ಲಾಮಿಕ್ ಸೆಂಟರ್‌ನ ಸಂಚಾಲಕ ಕೆ ಆರ್ ಹುಸೈನ್ ದಾರಿಮಿ ರೆಂಜಲಾಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.