ADVERTISEMENT

ಮೆಸ್ಕಾಂ ಹಿರಿಯ ಎಂಜಿನಿಯರ್‌ ಕೊಲೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2014, 19:30 IST
Last Updated 21 ಸೆಪ್ಟೆಂಬರ್ 2014, 19:30 IST

ಮಂಗಳೂರು: ಮೆಸ್ಕಾಂನ ಕಾರ್ಯನಿರ್ವಾಹಕ ಎಂಜಿನಿಯರ್‌ ಜಗದೀಶ್ ರಾವ್ (53) ಅವರನ್ನು ಅವರ ಮನೆಯಲ್ಲೇ ಕತ್ತು ಕೊಯ್ದು ಕೊಲೆ ಮಾಡಿದ ಘಟನೆ ನಗರದ ಕದ್ರಿ ಕಂಬಳ ಪ್ರದೇಶದಲ್ಲಿ ಭಾನುವಾರ ಮುಂಜಾನೆ ನಡೆದಿದೆ. ದುಷ್ಕರ್ಮಿಗಳು ಜಗದೀಶ್‌ ಅವರ ಮನೆಯ ಒಳಗೆ ಬಂದು ಕೊಲೆ ಮಾಡಿ ಪರಾರಿಯಾಗಿದ್ದಾರೆ.

‘ಭಾನುವಾರ ಮುಂಜಾನೆ 2.30ರ ವೇಳೆ ಮಲಗುವ ಕೊಠಡಿಯಲ್ಲಿ ಗಾಢ ನಿದ್ದೆಯಲ್ಲಿದ್ದಾಗ ಸಹಾಯಕ್ಕಾಗಿ ಪತಿ ಕೂಗುವ ಶಬ್ದ ಕೇಳಿಸಿತು. ಎದ್ದು ನೋಡಿದಾಗ ಅವರು ಮನೆಯ ಹಾಲ್‌ನಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ನೋಡುತ್ತಿದ್ದಂತೆ ಇಬ್ಬರು ಮಾಳಿಗೆಯಿಂದ ಇಳಿದು ಓಡಿದರು. ಕರೆ ಮಾಡಿದ 10 ನಿಮಿಷದಲ್ಲೇ ಬಂದ ಪರಿಚಯದ ವೈದ್ಯರು ಜಗದೀಶ್‌ ಅವರನ್ನು ಪರೀಕ್ಷಿಸಿ­ದರು. ಆ ವೇಳೆಗಾಗಲೇ ಅವರು  ಸಾವ­ನ್ನ­ಪ್ಪಿದ್ದರು’ ಎಂದು ಪತ್ನಿ ಭಾರತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮನೆಯ ಮಹಡಿಗೆ ಇದ್ದ ಬಾಗಿಲನ್ನು ರಾತ್ರಿ ಹಾಕಿರಲಿಲ್ಲ. ಅದರ ಮೂಲಕವೇ ಮನೆ ಪ್ರವೇಶಿಸಿರುವ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಭಾರತಿ ಅವರ ಕೂಗು ಕೇಳಿ ಪಕ್ಕದ ಮನೆಯಲ್ಲಿ­ದ್ದವರೊ­ಬ್ಬರು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ದುಷ್ಕರ್ಮಿಗಳು ಗುಂಡಿನ ಸದ್ದು ಕೇಳಿ ಓಡಿ ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಚಿನ್ನದ ಸರ ಕಳವು: ಮನೆಯ ಡ್ರಾದಲ್ಲಿದ್ದ 28 ಗ್ರಾಂ ಚಿನ್ನದ ಸರ ಕಳವಾಗಿದ್ದು ಕಳವು ಮಾಡಲು ಬಂದವರೇ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಜಗದೀಶ್‌ ರಾವ್‌ ಅವರು ಮಲಗುವ ಕೊಠಡಿಯಿಂದ ಹಾಲ್‌ಗೆ ಬಂದಿದ್ದೇಕೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಮೂರು ತಿಂಗಳ ಹಿಂದೆ ಕಳವು ಯತ್ನ: ಕೊಲೆಯಾದ ಜಗದೀಶ್ ಅವರ ನೆರೆಮನೆಯಲ್ಲಿ ಮೂರು ತಿಂಗಳ ಹಿಂದೆ ಕಳವು ಯತ್ನ ನಡೆದಿತ್ತು. ನಾಯಿಗೆ ವಿಷ ಪದಾರ್ಥ ನೀಡಿ ಮನೆಗೆ ನುಗ್ಗಲು ಯತ್ನಿಸಿದ ಸಂದರ್ಭದಲ್ಲಿ ಮನೆಯವರು ಎಚ್ಚರಗೊಂಡಿದ್ದರಿಂದ ಕಳ್ಳರು ಪರಾರಿಯಾಗಿದ್ದರು. ಇದೇ ಆತಂಕದಿಂದ ನೆರೆಮನೆಯವರು ಗುಂಡು ಹಾರಿಸಿರಬೇಕೆಂದು ಸಂಶಯ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.