ADVERTISEMENT

ಮೈಸೂರಿನಲ್ಲಿ ಮುಂದಿನ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2016, 19:30 IST
Last Updated 3 ಡಿಸೆಂಬರ್ 2016, 19:30 IST
ಮೈಸೂರಿನಲ್ಲಿ ಮುಂದಿನ ಸಮ್ಮೇಳನ
ಮೈಸೂರಿನಲ್ಲಿ ಮುಂದಿನ ಸಮ್ಮೇಳನ   

ರಾಯಚೂರು: 83ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮೈಸೂರಿನಲ್ಲಿ ನಡೆಸಲು ನಿರ್ಧರಿಸಲಾಗಿದೆ.

ಕಸಾಪ ಅಧ್ಯಕ್ಷ ಮನು ಬಳಿಗಾರ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಪರಿಷತ್‌ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.  ಮುಂದಿನ ಸಮ್ಮೇಳನವನ್ನು ತಮ್ಮ ಜಿಲ್ಲೆಯಲ್ಲಿ ನಡೆಸಬೇಕು ಎಂದು ಮೈಸೂರು, ಹಾವೇರಿ, ಧಾರವಾಡ, ಚಿಕ್ಕಮಗಳೂರು, ಉತ್ತರ ಕನ್ನಡ, ಚಿಕ್ಕಬಳ್ಳಾಪುರ ಜಿಲ್ಲೆಗಳವರು ಕೋರಿಕೆ ಮಂಡಿಸಿದರು.

ಸಭೆಯಲ್ಲಿ ಒಮ್ಮತಾಭಿಪ್ರಾಯ ವ್ಯಕ್ತವಾಗದಾಗ ಮತದಾನದ ವಿಷಯ ಪ್ರಸ್ತಾಪವಾಯಿತು. ಧಾರವಾಡದಲ್ಲಿಯೇ ಮುಂದಿನ ಸಮ್ಮೇಳನ ನಡೆಸಬೇಕು ಎಂದು ಪಟ್ಟುಹಿಡಿದ ಧಾರವಾಡ ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗರಾಜ ಅಂಗಡಿ, ‘ಸ್ಥಳ ಆಯ್ಕೆಗೆ ಬಹಿರಂಗ ಮತದಾನ ಬೇಡ. ಗೋಪ್ಯ ಮತದಾನ ಮಾಡಬೇಕು’ ಎಂದು ಪಟ್ಟುಹಿಡಿದರು. ಈ ಹಂತದಲ್ಲಿ ವಾಗ್ವಾದ ನಡೆದು ನಂತರ ಅವರು ಸಭೆ ಬಹಿಷ್ಕರಿಸುವುದಾಗಿ ಹೇಳಿ ಹೊರ ಬಂದರು.  ಅವರನ್ನು ಮನವೊಲಿಸಿ ಸಭೆಗೆ ಕರೆದೊಯ್ಯಲಾಯಿತು.

ADVERTISEMENT

ಮತದಾನ ಕೈಬಿಟ್ಟು ಕಾರ್ಯಕಾರಿ ಸಮಿತಿ ಸದಸ್ಯರ ವೈಯಕ್ತಿಕ ಅಭಿಪ್ರಾಯ ಕೇಳಲಾಯಿತು. ಏಳು ಜನರು ಮೈಸೂರು, ಏಳು ಜನ ಹಾವೇರಿ ಹಾಗೂ ಒಂದಿಬ್ಬರು ಧಾರವಾಡದಲ್ಲಿ  ಸಮ್ಮೇಳನ ನಡೆಸಬೇಕು ಎಂದರೆ, ಉಳಿದವರು ಕಸಾಪ ಅಧ್ಯಕ್ಷರ ನಿರ್ಣಯಕ್ಕೆ ತಾವು ಬದ್ಧ ಎಂದು ಹೇಳಿದ್ದಾಗಿ ಮೂಲಗಳು ತಿಳಿಸಿವೆ.

‘ಹಲವು ಜಿಲ್ಲೆಗಳ ಹೆಸರು ಪ್ರಸ್ತಾಪಕ್ಕೆ ಬಂದವು. ಮುಕ್ತವಾಗಿ ಚರ್ಚಿಸಲಾಯಿತು. ಅಂತಿಮವಾಗಿ ಮೈಸೂರಿನಲ್ಲಿ ಮುಂದಿನ ಸಮ್ಮೇಳನ ನಡೆಸಲು ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು’ ಎಂದು ಮನು ಬಳಿಗಾರ್‌ ತಿಳಿಸಿದರು.

ಫಲಿಸಿದ ಸಂಘಟಿತ ಪ್ರಯತ್ನ:  ಮುಂದಿನ ಸಮ್ಮೇಳನ ಮೈಸೂರಿನಲ್ಲಿಯೇ ನಡೆಸಬೇಕು. ಅದಕ್ಕೆ ಬೇಕಿರುವ ಸಕಲ ವ್ಯವಸ್ಥೆ ಮಾಡಲು ತಾವು ಬದ್ಧ ಎಂದು ಆ ಜಿಲ್ಲೆಯ ಸಚಿವರು ಭರವಸೆ ನೀಡಿದ್ದರು. ಈ ವಿಷಯದಲ್ಲಿ ಮೈಸೂರು ಜಿಲ್ಲಾ ಕಸಾಪ ಪದಾಧಿಕಾರಿಗಳು ಹಲವು ದಿನಗಳಿಂದ ಕೇಂದ್ರ ಕಸಾಪ ಕಾರ್ಯಕಾರಿ ಸಮಿತಿ ಸದಸ್ಯರ ಮನವೊಲಿಸುವಲ್ಲಿ ನಿರತರಾಗಿದ್ದರು. ಈ ಸಂಘಟಿತ ಪ್ರಯತ್ನದ ಫಲವಾಗಿ ಮೈಸೂರಿಗೆ ಸಮ್ಮೇಳನದ ಆತಿಥ್ಯ ವಹಿಸಿಕೊಳ್ಳುವ ಅವಕಾಶ ದೊರೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.