ADVERTISEMENT

ಮೈಸೂರು ವಿ.ವಿ ಕುಲಪತಿ ಹುದ್ದೆಗೆ ಜಾತಿ ಲಾಬಿ

ಬಿ.ಜೆ.ಧನ್ಯಪ್ರಸಾದ್
Published 15 ಫೆಬ್ರುವರಿ 2017, 19:30 IST
Last Updated 15 ಫೆಬ್ರುವರಿ 2017, 19:30 IST
ಮೈಸೂರು ವಿ.ವಿ ಕುಲಪತಿ ಹುದ್ದೆಗೆ ಜಾತಿ ಲಾಬಿ
ಮೈಸೂರು ವಿ.ವಿ ಕುಲಪತಿ ಹುದ್ದೆಗೆ ಜಾತಿ ಲಾಬಿ   

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಜಾತಿ ಲಾಬಿ ಶುರುವಾಗಿದೆ. ತಮ್ಮ ಜಾತಿಯ ಅಭ್ಯರ್ಥಿಯನ್ನೇ ನೇಮಿಸುವಂತೆ ವಿವಿಧ ಸಮುದಾಯ ಹಾಗೂ ಸಂಘಟನೆ ಮುಖಂಡರು ತೆರೆಮರೆಯಲ್ಲಿ ಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವರ ಮೇಲೆ ಒತ್ತಡ ಹಾಕುತ್ತಿದ್ದಾರೆ.

ವಿಶ್ವಮಾನವ ಮೈಸೂರು ವಿಶ್ವವಿದ್ಯಾಲಯ ನೌಕರರ ವೇದಿಕೆ ಪದಾಧಿಕಾರಿಗಳು ಈಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಕುರುಬ ಸಮುದಾಯದ ಅಭ್ಯರ್ಥಿಯನ್ನು ನೇಮಕ ಮಾಡುವಂತೆ ಮನವಿ ಸಲ್ಲಿಸಿದ್ದಾರೆ. ‘ಕುರುಬ ಜಾತಿಯ ಒಬ್ಬರೂ ಈವರೆಗೆ ಈ ವಿವಿಯ ಕುಲಪತಿಯಾಗಿಲ್ಲ. ಇದೇ ಸಮುದಾಯದವರಾದ ತಾವು ಈ ನಿಟ್ಟಿನಲ್ಲಿ ಗಮನಹರಿಸಿ ಈ ಜಾತಿಯ ಅಭ್ಯರ್ಥಿಯನ್ನು ನೇಮಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಮೈಸೂರು ವಿಶ್ವವಿದ್ಯಾಲಯದ ವಾಣಿಜ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಸುರೇಶ್‌ ಅವರು ವಿಶ್ವವಿದ್ಯಾಲಯದಲ್ಲಿ ಉಪಕುಲಸಚಿವರಾಗಿ, ಹಣಕಾಸು ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ ಎಂಬ ಉಲ್ಲೇಖ ಪತ್ರದಲ್ಲಿದೆ. ಅವರನ್ನು ಕುಲಪತಿ ಹುದ್ದೆಗೆ ನೇಮಕ ಮಾಡಬೇಕು ಎಂದು ವೇದಿಕೆಯು ಪರೋಕ್ಷವಾಗಿ ಇಂಗಿತ ವ್ಯಕ್ತಪಡಿಸಿದೆ. ಪತ್ರದ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಕುಲಪತಿ ಹುದ್ದೆಗೆ 150ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಮೈಸೂರು ವಿವಿಯಿಂದಲೇ ಸುಮಾರು 50 ಆಕಾಂಕ್ಷಿಗಳು ಇದ್ದಾರೆ. ಕುಲಸಚಿವ (ಆಡಳಿತ) ಪ್ರೊ.ಆರ್‌.ರಾಜಣ್ಣ, ಪಿಎಂಇ ವಿಭಾಗ ನಿರ್ದೇಶಕ ಪ್ರೊ.ಲಿಂಗರಾಜ ಗಾಂಧಿ, ಪ್ರೊ.ಅರವಿಂದ ಮಾಲಗತ್ತಿ, ಪ್ರೊ.ಮುಜಾಫರ್‌ ಅಸಾದಿ, ಪ್ರೊ.ಅಸ್ನಾ ಉರೂಜ್‌, ಪ್ರೊ.ಸಯ್ಯದ್‌ ಅಕೀಲ್‌ ಅಹಮದ್‌, ಪ್ರೊ.ಪಿ.ನಾಗಭೂಷಣ್‌, ಪ್ರೊ.ಎನ್‌.ಬಿ.ರಾಮಚಂದ್ರ, ಪ್ರೊ.ಶಾಲಿನಿ ಆರ್‌.ಅರಸ್‌, ಪ್ರೊ.ಬಿ.ಶಿವರಾಜ್‌, ಪ್ರೊ.ಬಿ.ಕೆ.ತುಳಸಿಮಾಲಾ, ಪ್ರೊ.ಹೇಮಂತ್‌ಕುಮಾರ್‌, ಪ್ರೊ.ಸಿ.ಬಸವರಾಜು, ಪ್ರೊ.ಸಿದ್ಧಾಶ್ರಮ, ಪ್ರೊ.ಬಿ.ಎ.ದೊಡ್ಡಮನಿ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ.

ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ಮಂಗಳೂರು ವಿಶ್ವವಿದ್ಯಾಲಯ, ಗುಲ್ಬರ್ಗ ವಿಶ್ವವಿದ್ಯಾಲಯ, ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರೂ ಅರ್ಜಿ ಸಲ್ಲಿಸಿದ್ದಾರೆ.

‘ಕುಲಪತಿಯಾಗಿ ಇದೇ ವಿಶ್ವವಿದ್ಯಾಲಯದ ಹಲವರು ಸೇವೆ ಸಲ್ಲಿಸಿದ್ದಾರೆ. ಹೀಗಾಗಿ, ಆಕಾಂಕ್ಷಿಗಳ ಸಂಖ್ಯೆ ಹೆಚ್ಚು ಇದೆ. ಪ್ರಾಧ್ಯಾಪಕರಾಗಿ 10 ವರ್ಷ ಅನುಭವ ಇಲ್ಲದವರೂ ಅರ್ಜಿ ಸಲ್ಲಿಸಿದ್ದಾರೆ. ಆಡಳಿತಾತ್ಮಕ ಅನುಭವದ ಮೇಲೂ ಕೆಲವರು ಅರ್ಜಿ ಸಲ್ಲಿಸಿದ್ದಾರೆ’ ಎಂದು ಪ್ರಾಧ್ಯಾಪಕರೊಬ್ಬರು ಹೇಳಿದರು.

‘ಹೈದರಾಬಾದ್‌ ಕರ್ನಾಟಕ ಭಾಗದ ವಿವಿಯ ಕುಲಸಚಿವರೊಬ್ಬರು ಮಠಾಧೀಶರ ಮೂಲಕ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರ ಮೇಲೆ ಒತ್ತಡ ತಂದಿದ್ದಾರೆ. ಸಚಿವರು ಲಿಂಗಾಯತ ಜಾತಿಗೆ ಸೇರಿದವರು ಎಂದು ಈ ತಂತ್ರಗಾರಿಕೆ ಹೆಣೆದಿದ್ದಾರೆ. ಕರಾವಳಿ ಭಾಗದ ವಿವಿವೊಂದರ ಹಾಲಿ ಕುಲಪತಿಯೊಬ್ಬರನ್ನು ಇಲ್ಲಿಗೆ ತರಲು ಒಕ್ಕಲಿಗ ಸಮುದಾಯದ ನಿವೃತ್ತ ಕುಲಪತಿಯೊಬ್ಬರು ಲಾಬಿ ನಡೆಸಿದ್ದಾರೆ’ ಎಂದರು.

ಮೈಸೂರು ವಿವಿ ಕುಲಪತಿ ಹುದ್ದೆ ತೆರವಾಗಿ ತಿಂಗಳು ಕಳೆದಿದೆ. ಕುಲಪತಿ ನೇಮಕಾತಿಗೆ ರಚಿಸಿರುವ ಶೋಧನಾ ಸಮಿತಿಯು ಈವರೆಗೆ ಪ್ರಕ್ರಿಯೆ ಆರಂಭಿಸಿಲ್ಲ. ಸಮಿತಿಯ ಸದಸ್ಯರ ನಡುವಿನ ಸಮನ್ವಯ ಕೊರತೆಯಿಂದಾಗಿ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

‘ಶೋಧನಾ ಸಮಿತಿಯು ಪ್ರಭಾವಕ್ಕೆ ಮಣಿಯಬಾರದು. ಅರ್ಹತೆಯನ್ನೇ ಮಾನದಂಡವಾಗಿಟ್ಟುಕೊಂಡು ಪ್ರಕ್ರಿಯೆ ನಡೆಸಬೇಕು. ಸರ್ಕಾರವು ಲಾಬಿಗೆ ಓಗೊಡದೆ ಸೂಕ್ತರಾದವರನ್ನು ಶಿಫಾರಸು ಮಾಡಬೇಕು’ ಎಂದು ಕುಲಸಚಿವರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.