ADVERTISEMENT

ಮೊದಲು ಪಿಸ್ತೂಲ್‌, ಕೊನೆಗೆ ಹೋಮ ಕುಂಡ!

ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ l ಜೋತಿಷಿ ಸಂಚು ರೂಪಿಸಿದ ಪರಿ

ಎಂ.ಸಿ.ಮಂಜುನಾಥ
Published 27 ಸೆಪ್ಟೆಂಬರ್ 2016, 19:30 IST
Last Updated 27 ಸೆಪ್ಟೆಂಬರ್ 2016, 19:30 IST
ಭಾಸ್ಕರ್‌ ಶೆಟ್ಟಿ
ಭಾಸ್ಕರ್‌ ಶೆಟ್ಟಿ   

ಬೆಂಗಳೂರು: ಉದ್ಯಮಿ ಭಾಸ್ಕರ್ ಶೆಟ್ಟಿ ಅವರನ್ನು ಗುಂಡಿಕ್ಕಿ ಕೊಲ್ಲಲು ನಿರ್ಧರಿಸಿದ್ದ ನಂದಳಿಕೆಯ ಜ್ಯೋತಿಷಿ ನಿರಂಜನ್‌ ಭಟ್, ಮುಂಬೈನಲ್ಲಿರುವ ಸ್ನೇಹಿತನಿಗೆ ಪಿಸ್ತೂಲು ಕೊಡಿಸುವಂತೆ ದುಂಬಾಲು ಬಿದ್ದಿದ್ದ ಸಂಗತಿ ಸಿಐಡಿ ತನಿಖೆಯಿಂದ ಬೆಳಕಿಗೆ ಬಂದಿದೆ.

ನಿರಂಜನ್‌ನ ಬಾಲ್ಯ ಸ್ನೇಹಿತ ಸತೀಶ್ ಎಂಬಾತ, ಮುಂಬೈನ ಹೋಟೆಲ್‌ ವೊಂದರಲ್ಲಿ ಉದ್ಯೋಗಿಯಾಗಿದ್ದಾನೆ. ಶೆಟ್ಟಿ ಅವರನ್ನು ಕೊಲ್ಲುವುದಕ್ಕೂ 4 ದಿನ ಮೊದಲು ಆತನಿಗೆ ಕರೆ ಮಾಡಿದ್ದ ನಿರಂಜನ್,  ‘ನನಗೆ ಪಿಸ್ತೂಲು ಬೇಕು. ಎಷ್ಟಾದರೂ ಹಣ ಖರ್ಚಾಗಲಿ. ಪಿಸ್ತೂಲು ಖರೀದಿಸಿ, ಶೀಘ್ರವೇ ನನಗೆ ತಲುಪಿಸುವ ವ್ಯವಸ್ಥೆ ಮಾಡು’ ಎಂದಿದ್ದ ಎಂಬುದನ್ನು ಸಿಐಡಿ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಅಷ್ಟು ಸುಲಭವಾಗಿ ಪಿಸ್ತೂಲು ಸಿಗುವುದಿಲ್ಲ ಎಂದು ಸತೀಶ್ ಹೇಳಿದಾಗ, ‘ಅಲ್ಲೇ ಕ್ಲೋರೋಫಾರ್ಮ್ ತೆಗೆದುಕೊಂಡು ಕೂಡಲೇ ಉಡುಪಿಗೆ ಬಾ. ನನಗೆ ಈಗ ನಿನ್ನ ನೆರವು ಬೇಕಿದೆ’ ಎಂದು ಹೇಳಿದ್ದ.

‘ಕ್ಲೋರೋಫಾರ್ಮ್‌ ಕೇಳಿಕೊಂಡು ಆತ ಮೆಡಿಕಲ್‌ ಶಾಪ್‌ಗೆ ಹೋದಾಗ, ‘ನಿಮ್ಮ ಹೆಸರು, ಮೊಬೈಲ್ ಸಂಖ್ಯೆ ಹಾಗೂ ಕ್ಲೋರೋಫಾರ್ಮ್‌ ಖರೀದಿಸುತ್ತಿರುವ ಉದ್ದೇಶವನ್ನು ಇದರಲ್ಲಿ ಬರೆಯಿರಿ’ ಎಂದು ಶಾಪ್‌ ಮಾಲೀಕರು ಪುಸ್ತಕ ಮುಂದಿಟ್ಟಿದ್ದರು. ಇದರಿಂದ ಹೆದರಿದ ಸತೀಶ್, ಮತ್ತೆ ಬರುವ ನೆಪ ಹೇಳಿ ಅದನ್ನು ಖರೀದಿಸದೆ ವಾಪಸ್ ಬಂದಿದ್ದ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

‘ಈ ವಿಷಯದಲ್ಲಿ ನಿರಂಜನ್‌ನ ಕಾಟ ಹೆಚ್ಚಾದ ಬಳಿಕ ಸತೀಶ್, ನಾಲ್ಕೈದು ದಿನ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಟ್ಟಿದ್ದ. ನಿರಂಜನ್‌ನ ಮೊಬೈಲ್ ಕರೆಗಳ ವಿವರ (ಸಿಡಿಆರ್) ಪರಿಶೀಲಿಸಿದಾಗ, ಶೆಟ್ಟಿ ಅವರ ಹತ್ಯೆಗೂ ಮುನ್ನ ಹಾಗೂ ಹತ್ಯೆ ನಂತರ ಸತೀಶ್ ಜತೆ ಮಾತನಾಡಿರುವುದು ಗೊತ್ತಾಯಿತು. ಈ ಸುಳಿವು ಆಧರಿಸಿ ಮುಂಬೈನಲ್ಲಿ ಸತೀಶ್‌ನನ್ನು ಪತ್ತೆ ಮಾಡಲಾಯಿತು.

ಎರಡು ಕಾರು ಬಳಕೆ: ‘ಇನ್ನೇನು ಪಿಸ್ತೂಲು ಸಿಗುವುದಿಲ್ಲ ಎಂಬುದು ಖಚಿತವಾದ ಬಳಿಕ ನಿರಂಜನ್‌, ಶೆಟ್ಟಿ ಅವರನ್ನು ಹೊಡೆದು ಕೊಲ್ಲುವ ಹಾಗೂ ಶವವನ್ನು ಹೋಮಕುಂಡದಲ್ಲಿ ಸುಟ್ಟು ಹಾಕುವ ಯೋಜನೆ ಹಾಕಿಕೊಂಡ. ಅದರಂತೆ ಜುಲೈ 28ರಂದು ಶೆಟ್ಟಿ ಅವರ ಪತ್ನಿ ರಾಜೇಶ್ವರಿ, ಮಗ ನವನೀತ್ ಹಾಗೂ ನಿರಂಜನ್ ಅವರು ಕಬ್ಬಿಣದ ಸಲಾಕೆಯಿಂದ ಹೊಡೆದು ಇಂದ್ರಾಳಿಯ ಮನೆಯಲ್ಲೇ ಶೆಟ್ಟಿ ಅವರನ್ನು ಹತ್ಯೆಗೈದಿದ್ದರು.

‘ಇಂದ್ರಾಳಿಯಿಂದ ಶವವನ್ನು ನವನೀತ್‌ನ ‘ಕ್ರೆಟಾ’ ಕಾರಿನಲ್ಲಿ ನಂದಳಿಕೆಯ ನಿರಂಜನ್‌ ಮನೆಗೆ ಸಾಗಿಸಲಾಗಿತ್ತು. ಅಲ್ಲಿ ಮೃತದೇಹವನ್ನು ಹೋಮಕುಂಡದಲ್ಲಿ ಕರ್ಪೂರದಿಂದ ಸುಟ್ಟು ಹಾಕಲಾಗಿತ್ತು. ಬಳಿಕ ಎಲುಬು, ಬೂದಿ, ಹೋಮಕುಂಡದ ಸಿಮೆಂಟ್ ಇಟ್ಟಿಗೆಗಳು, ಹತ್ಯೆಗೆ ಬಳಸಿದ್ದ ಸಲಾಕೆಯನ್ನು ನದಿ ಹತ್ತಿರಕ್ಕೆ ಸಾಗಿಸಲು ನಿರಂಜನ್‌ನ ‘ವರ್ನಾ’ ಕಾರನ್ನು ಬಳಸಲಾಗಿತ್ತು. ಆ ಎರಡು ಕಾರುಗಳಲ್ಲೂ ರಕ್ತದ ಕಲೆಗಳು ಪತ್ತೆಯಾಗಿವೆ’ ಎಂದು ಮಾಹಿತಿ ನೀಡಿದರು.

ನದಿಯಲ್ಲಿ ಇಟ್ಟಿಗೆ ಪತ್ತೆ: ‘ಮಂಗಳೂರಿನ ಆರು ಈಜುಗಾರರಿಗೆ ₹ 45 ಸಾವಿರ ಕೊಟ್ಟು ನದಿಯಲ್ಲಿ ಹುಡುಕಾಟ ಮಾಡಿಸಿದೆವು. 25 ಅಡಿ ಆಳದ ಆ ನದಿಗೆ ಧುಮುಕಿದ ಆ ಈಜುಗಾರರು, ಒಂದೇ ತಾಸಿನಲ್ಲಿ ಸಿಮೆಂಟ್ ಇಟ್ಟಿಗೆ, ಎಲುಬುಗಳು, ಕಬ್ಬಿಣದ ಸಲಾಕೆಯನ್ನು ಪತ್ತೆ ಮಾಡಿದ್ದಾರೆ. ಅವುಗಳನ್ನು ಹಾಗೂ ಕಾರಿನಲ್ಲಿ ಸಿಕ್ಕ ರಕ್ತದ ಕಲೆಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ’ ಎಂದು ಅಧಿಕಾರಿಗಳು ಹೇಳಿದರು.

38 ಖಾತೆಗಳ ಪರಿಶೀಲನೆ:  ಭಾಸ್ಕರ್ ಶೆಟ್ಟಿ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ 13 ಖಾತೆಗಳಿದ್ದವು. ಅದೇ ರೀತಿ ರಾಜೇಶ್ವರಿಯ 8, ನವನೀತ್‌ನ 10 ಹಾಗೂ ನಿರಂಜನ್‌ ಭಟ್ಟನ ಹೆಸರಿನಲ್ಲಿ 7 ಖಾತೆಗಳಿವೆ. ಅಷ್ಟೂ ಖಾತೆಗಳನ್ನು ಪರಿಶೀಲಿಸಲಾಗಿದ್ದು, ಭಾಸ್ಕರ್ ಶೆಟ್ಟಿ  ಅವರ ಆಸ್ತಿ ₹ 100 ಕೋಟಿ ಎಂಬುದು ಖಚಿತವಾಗಿದೆ’ ಎಂದು ಸೈಬರ್ ಪೊಲೀಸರು ಮಾಹಿತಿ ನೀಡಿದರು.

ಸ್ನೇಹಿತನಿಗೆ ಪುನಃ ಕರೆ
ಹತ್ಯೆ ನಂತರವೂ ಮುಂಬೈನ ಸ್ನೇಹಿತ ಸತೀಶ್‌ಗೆ ಕರೆ ಮಾಡಿದ್ದ ನಿರಂಜನ್‌, ‘ಜಮೀನು ವ್ಯಾಜ್ಯದ ವಿಚಾರಕ್ಕೆ ಉದ್ಯಮಿಯೊಬ್ಬರನ್ನು ಕೊಲೆ ಮಾಡಿದ್ದೇವೆ. ಕೂಡಲೇ ಯಾರಾದರೂ ಸುಪಾರಿ ಹಂತಕರನ್ನು ಹುಡುಕು. ತಾವೇ ಕೊಲೆ ಮಾಡಿದ್ದಾಗಿ ಅವರು ಒಪ್ಪಿಕೊಂಡು ಪೊಲೀಸರಿಗೆ ಶರಣಾದರೆ ಸಾಕು. ಅವರಿಗೆ ಜಾಮೀನು ಕೊಡಿಸುವ ವ್ಯವಸ್ಥೆಯನ್ನು ನಾವು ಮಾಡುತ್ತೇವೆ. ಇದಕ್ಕೆ ಒಪ್ಪಿಕೊಂಡರೆ ಕೇಳಿದಷ್ಟು ಹಣ ಕೊಡುತ್ತೇವೆ’ ಎಂದು ಆಮಿಷ ಒಡ್ಡಿದ್ದ. ಆದರೆ, ಅದಕ್ಕೆ ಸತೀಶ್ ಒಪ್ಪಿರಲಿಲ್ಲವೆಂದು ಸಿಐಡಿ ಮೂಲಗಳು ತಿಳಿಸಿವೆ.

ಸಿಐಡಿಗೆ ಮಹತ್ವದ ಸಾಕ್ಷಿ
‘ಸಿಆರ್‌ಪಿಸಿ 164 ಅನ್ವಯ ನ್ಯಾಯಾಧೀಶರ ಮುಂದೆ ಸತೀಶ್‌ ಹೇಳಿಕೆ ನೀಡಿದ್ದಾನೆ. ಈವರೆಗೆ ಪ್ರಬಲ ಸಾಕ್ಷಿ ಹಾಗೂ ದಾಖಲೆಗಳಿಗಾಗಿ ಪರದಾಡುತ್ತಿದ್ದೆವು. ಈಗ ಸತೀಶ್ ಮೂಲಕ ಮಹತ್ವದ ಸಾಕ್ಷಿ ಸಿಕ್ಕಂತಾಗಿದೆ’ ಎಂದು ಅಧಿಕಾರಿಗಳು ಹೇಳಿದರು.

ಮುಖ್ಯಾಂಶಗಳು
* ಕೃತ್ಯಕ್ಕೆ ಮುಂಬೈ ಸ್ನೇಹಿತನ ನೆರವು ಕೇಳಿದ್ದ ಆರೋಪಿ
* ಸಿಐಡಿಗೆ ಮಹತ್ವದ ಸಾಕ್ಷಿ ಲಭ್ಯ
* ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ  ಸ್ನೇಹಿತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.