ADVERTISEMENT

ಯಶವಂತಪುರ– ಹಾಸನ ರೈಲು 26ರಿಂದ ಆರಂಭ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 19:30 IST
Last Updated 23 ಮಾರ್ಚ್ 2017, 19:30 IST
ಯಶವಂತಪುರ– ಹಾಸನ ರೈಲು 26ರಿಂದ ಆರಂಭ
ಯಶವಂತಪುರ– ಹಾಸನ ರೈಲು 26ರಿಂದ ಆರಂಭ   
ಹುಬ್ಬಳ್ಳಿ: ಹೊಸದಾಗಿ ನಿರ್ಮಿಸಿರುವ ಯಶವಂತಪುರ– ಹಾಸನ ಮಾರ್ಗದಲ್ಲಿ ಇದೇ 26ರಿಂದ ರೈಲು ಸಂಚಾರ ಆರಂಭವಾಗಲಿದೆ. ಅಂದು ಬೆಳಿಗ್ಗೆ 11 ಗಂಟೆಗೆ ಯಶವಂತಪುರ ನಿಲ್ದಾಣದಲ್ಲಿ ರೈಲ್ವೆ ಸಚಿವ ಸುರೇಶ ಪ್ರಭು ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರುವರು.
 
ಯಶವಂತಪುರ– ಹಾಸನ ನಡುವೆ ಸದ್ಯಕ್ಕೆ ಇಂಟರ್‌ ಸಿಟಿ ಎಕ್ಸ್‌ಪ್ರೆಸ್‌ ರೈಲು ಮಾತ್ರ ಸಂಚರಿಸಲಿದೆ. ಎರಡೂ ನಗರಗಳ ನಡುವಿನ ಪ್ರಯಾಣದ ಅವಧಿ 2 ಗಂಟೆ 45 ನಿಮಿಷ.

ರೈಲು ಪ್ರತಿದಿನ ಬೆಳಿಗ್ಗೆ ಹಾಸನದಿಂದ ಯಶವಂತಪುರಕ್ಕೆ ಹಾಗೂ ಸಂಜೆ ಯಶವಂತಪುರದಿಂದ ಹಾಸನಕ್ಕೆ ಸಂಚರಿಸಲಿದೆ ಎಂದು ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಇ.ವಿಜಯಾ ‘ಪ್ರಜಾವಾಣಿ’ಗೆ ತಿಳಿಸಿದರು. ಸಂಚಾರ ದಟ್ಟಣೆ ನೋಡಿಕೊಂಡು ಈ ಮಾರ್ಗದಲ್ಲಿ ಮತ್ತಷ್ಟು ರೈಲುಗಳನ್ನು ಓಡಿಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಅವರು ವಿವರಿಸಿದರು.
 
ಮಂಡಳಿಗೆ ಪತ್ರ: ‘ಅರಸೀಕೆರೆ ಮಾರ್ಗವಾಗಿ ಬೆಂಗಳೂರು– ಮಂಗಳೂರು ನಡುವೆ ಸಂಚರಿಸುತ್ತಿರುವ ರೈಲು ಗಾಡಿಯನ್ನು ಕುಣಿಗಲ್‌ ಮಾರ್ಗವಾಗಿ ಓಡಿಸುವಂತೆ ಕೋರಿ ರೈಲ್ವೆ ಮಂಡಳಿಗೆ ಪತ್ರ ಬರೆಯಲಾಗಿದ್ದು ಇನ್ನೂ ಒಪ್ಪಿಗೆ ಸಿಕ್ಕಿಲ್ಲ.

ಒಪ್ಪಿಗೆ ಸಿಕ್ಕ ಬಳಿಕ ಅದು ಕೂಡ ಕುಣಿಗಲ್‌ ಮಾರ್ಗವಾಗಿ ಸಂಚರಿಸಲಿದೆ. ಇದಲ್ಲದೆ, ಮೈಸೂರು ಮಾರ್ಗವಾಗಿ ಸಂಚರಿಸುವ ರೈಲನ್ನು ಕೂಡ ಇದೇ ಮಾರ್ಗದಲ್ಲಿ ಓಡಿಸುವ ಯೋಚನೆ ಇದೆ. ಈ ಕುರಿತು ಇನ್ನೂ ಅಂತಿಮ ತೀರ್ಮಾನ ಆಗಿಲ್ಲ’ ಎಂದು ವಿಜಯಾ ತಿಳಿಸಿದರು.
 
ಯಶವಂತಪುರ–ಎರ್ನಾಕುಳಂ ರೈಲು: ಯಶವಂತಪುರ ಮತ್ತು ಎರ್ನಾಕುಳಂ ನಡುವೆ ವಾರದಲ್ಲಿ ಒಂದು ದಿನ ತತ್ಕಾಲ್‌ ವಿಶೇಷ ರೈಲು ಸಂಚರಿಸಲಿದೆ. 
ಏಪ್ರಿಲ್ 4ರಿಂದ ಜೂನ್ 13ರವರೆಗೆ ಪ್ರತಿ ಮಂಗಳವಾರ ಯಶವಂತಪುರದಿಂದ ರಾತ್ರಿ 10.45ಕ್ಕೆ ಹೊರಡುವ ರೈಲು (065547) ಮರುದಿನ ಬೆಳಿಗ್ಗೆ 10.30ಕ್ಕೆ ಎರ್ನಾಕುಳಂ ತಲುಪಲಿದೆ.
 
ಏಪ್ರಿಲ್‌ 5ರಿಂದ ಜೂನ್ 14ರವರೆಗೆ ಪ್ರತಿ ಬುಧವಾರ ರಾತ್ರಿ 10 ಗಂಟೆಗೆ ಎರ್ನಾಕುಳಂನಿಂದ ಹೊರಡುವ ರೈಲು (065548) ಮರುದಿನ ಬೆಳಿಗ್ಗೆ 11.50ಕ್ಕೆ ಯಶವಂತಪುರ ತಲುಪಲಿದೆ ಎಂದು ಪ್ರಕಟಣೆ ತಿಳಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.