ADVERTISEMENT

ಯಾರೇ ಆದರೂ ಕಾನೂನು ಒಂದೇ: ರಾಮಲಿಂಗಾರೆಡ್ಡಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2017, 13:18 IST
Last Updated 4 ಡಿಸೆಂಬರ್ 2017, 13:18 IST
ಗೃಹ ಸಚಿವ ರಾಮಲಿಂಗಾರೆಡ್ಡಿ
ಗೃಹ ಸಚಿವ ರಾಮಲಿಂಗಾರೆಡ್ಡಿ   

ಬೆಂಗಳೂರು: ‘ಪ್ರತಾಪ್ ಸಿಂಹ ಒಬ್ಬ ಸಂಸದ. ಅವರಿಗೆ ಕಾನುನು ತಿಳಿದಿರುತ್ತದೆ. ಪ್ರತಾಪ್ ಸಿಂಹ ಪದೇಪದೇ ಕಾನೂನು ಉಲ್ಲಂಘಿಸುತ್ತಿರುವುದು ಸರಿಯಲ್ಲ. ಕಾನೂನು ಉಲ್ಲಂಘನೆ ಮಾಡಿದ್ದಕ್ಕಾಗಿ ಅವರ ಬಂಧನವಾಗಿದೆ. ಯಾರೇ ಆದರೂ ಎಲ್ಲರಿಗೂ ಒಂದೇ ಕಾನೂನು’ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಹುಣಸೂರಿನಲ್ಲಿ ಹನುಮ ಜಯಂತಿ ಮಾಡಲು ಅಭ್ಯಂತರವಿರಲಿಲ್ಲ. ಬಿಜೆಪಿಯವರು ಹನುಮ ಜಯಂತಿ ಆಚರಣೆಗೆ ಅನುಮತಿಯನ್ನೂ ಪಡೆದಿದ್ದರು. ಮೆರವಣಿಗೆ ನಡೆಸಲು ಅನುಮತಿ ಪಡೆಯುವ ವೇಳೆ ನೀಡಿದ್ದ ಮಾರ್ಗ ನಕ್ಷೆ ಬಿಟ್ಟು ಬೇರೆ ಮಾರ್ಗದಲ್ಲಿ ಮೆರವಣಿಗೆ ಮಾಡಲು ಪ್ರತಾಪ್‌ ಸಿಂಹ ಮುಂದಾಗಿದ್ದರು. ಯಾರೇ ಆಗಿರಲಿ ಎಲ್ಲರಿಗೂ ಒಂದೇ ಕಾನೂನು. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದವರು. ಅವರಿಗೆ ಕಾನೂನು ಗೊತ್ತಿಲ್ಲವೇ? ಇಂಥವರಿಗೆ ಅಧಿಕಾರ ಸಿಕ್ಕರೆ ಏನಾಗುತ್ತದೆ ಎಂಬುದನ್ನು ಜನರೇ ತೀರ್ಮಾನಿಸಲಿ’ ಎಂದರು.

‘ಬಿಜೆಪಿ ಪಕ್ಷದಿಂದ ಕಾನೂನು ಕಾರ್ಯಾಗಾರ ನಡೆಸಲಿ. ಯಡಿಯೂರಪ್ಪ, ಅನಂತ ಕುಮಾರ್ ಹೆಗಡೆ, ಪ್ರತಾಪ್ ಸಿಂಹ ಮುಂತಾದವರಿಗೆ ಕಾನೂನಿನ ಅರಿವಿಲ್ಲ. ಬಿಜೆಪಿಯವರು ಹನುಮ ಜಯಂತಿಯನ್ನು ಭಕ್ತಿಯಿಂದ ಮಾಡಿದ್ದಲ್ಲ, ರಾಜಕಾರಣದಿಂದ ಮಾಡಿರುವುದು. ಬಿಜೆಪಿ ಶಾಂತಿ ಕದಡುವ ಕೆಲಸ ಮಾಡಿದೆ. ಅವರ ಉದ್ದೇಶವೇ ಶಾಂತಿ ಕೆಡುವುದು. 2008 ರಿಂದ 2016 ರವರೆಗೆ ದೇಶದಲ್ಲಿ ನಡೆದಿರುವ ಅಪರಾಧಗಳ ಪಟ್ಟಿಯಲ್ಲಿ ಗುಜರಾತ್ ಮೊದಲ ಸ್ಥಾನ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.