ADVERTISEMENT

ರಜೆ ನಿರ್ಧಾರ ವಾಪಸ್: ಹರ್ಷಗುಪ್ತಗೆ ಸಂತೈಸಿದ ಮುಖ್ಯ ಕಾರ್ಯದರ್ಶಿ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2015, 20:23 IST
Last Updated 25 ನವೆಂಬರ್ 2015, 20:23 IST

ಬೆಂಗಳೂರು: ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ ಅವರು ವಿಧಾನಸೌಧದ ಕಾರಿಡಾರ್‌ನಲ್ಲಿ ವಿನಾಕಾರಣ ಬೈಯ್ದರು ಎನ್ನವ ಕಾರಣಕ್ಕೆ ರಜೆ ಮೇಲೆ ತೆರಳುವುದಾಗಿ ಹೇಳಿದ್ದ ಮೈಸೂರು ಕಾಗದ ಕಾರ್ಖಾನೆ (ಎಂಪಿಎಂ) ವ್ಯವಸ್ಥಾಪಕ ನಿರ್ದೇಶಕ ಹರ್ಷಗುಪ್ತ ಅವರನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್‌ ಮುಖರ್ಜಿ ಬುಧವಾರ ಸಮಾಧಾನಪಡಿಸಿದರು. ಬಳಿಕ ಗುಪ್ತ  ರಜೆ ರದ್ದು ಮಾಡಿ ಕರ್ತವ್ಯಕ್ಕೆ ಹಾಜರಾದರು.

ಎಂಪಿಎಂ ಕಾರ್ಖಾನೆ ಸ್ಥಗಿತಗೊಂಡಿರುವ ಕಾರಣ ಅಂದಾಜು ಒಂದು ಸಾವಿರ ನೌಕರರಿಗೆ ರಜೆ ಮೇಲೆ ಹೋಗಲು ಹೇಳಿದ್ದು ವಿವಾದಕ್ಕೆ ಕಾರಣವಾಗಿದೆ. ಇದು ಭದ್ರಾವತಿಯಲ್ಲಿ ಸಂಘರ್ಷಕ್ಕೂ ಎಡೆ ಮಾಡಿದೆ ಎನ್ನಲಾಗಿದೆ. ಈ ವಿಷಯವನ್ನು ಮುಂದಿಟ್ಟುಕೊಂಡು  ಸಚಿವರು ಹರ್ಷಗುಪ್ತ ಅವರನ್ನು ಸೋಮವಾರ (ನ.23) ವಿಧಾನಸೌಧದ ಕಾರಿಡಾರ್‌ನಲ್ಲಿ ತರಾಟೆಗೆ ತೆಗೆದುಕೊಂಡಿದ್ದರು. ಇದರಿಂದ ಬೇಸತ್ತ ಗುಪ್ತ ರಜೆ ಮೇಲೆ ತೆರಳುವುದಾಗಿ ಹೇಳಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.

‘ಕಾರ್ಖಾನೆಯನ್ನು ನಷ್ಟದಿಂದ ಪಾರು ಮಾಡಬೇಕಾಗಿದೆ. ಇದರಲ್ಲಿ ನನ್ನ ವೈಯಕ್ತಿಕ ಆಸಕ್ತಿ ಏನೂ ಇಲ್ಲ. ಈ ವಿಷಯವನ್ನು ಕೈಗಾರಿಕಾ ಸಚಿವ ಆರ್‌.ವಿ.ದೇಶಪಾಂಡೆ ಮತ್ತು ಇಲಾಖೆಯ ಕಾರ್ಯದರ್ಶಿ ಗಮನಕ್ಕೂ ತಂದಿದ್ದೇನೆ. ಇದರ ನಡುವೆ ಜಿಲ್ಲಾ ಉಸ್ತುವಾರಿ ಸಚಿವರು ನನ್ನ ವಿರುದ್ಧ ಸಾರ್ವಜನಿಕರ ಮುಂದೆ ಕೂಗಾಡಿದ್ದು ಸರಿಯಲ್ಲ’ ಎಂದು ಗುಪ್ತ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.