ADVERTISEMENT

ರವಿ ಬೆಳಗೆರೆ, ಅನಿಲ್‌ ರಾಜ್‌ ಶಿಕ್ಷೆ ಜಾರಿಗೆ ಆದೇಶ

​ಪ್ರಜಾವಾಣಿ ವಾರ್ತೆ
Published 22 ಜೂನ್ 2017, 19:30 IST
Last Updated 22 ಜೂನ್ 2017, 19:30 IST

ಬೆಂಗಳೂರು: ‘ಹಾಯ್‌ ಬೆಂಗಳೂರು ಸಂಪಾದಕ’ ರವಿ ಬೆಳಗೆರೆ ಮತ್ತು ‘ಯಲಹಂಕ ವಾಯ್ಸ್‌’  ಸಂಪಾದಕ ಅನಿಲ್‌ರಾಜ್‌ ಅವರಿಗೆ 1 ವರ್ಷ ಜೈಲು ಮತ್ತು ₹10 ಸಾವಿರ ದಂಡ ಶಿಕ್ಷೆ ಜಾರಿಗೊಳಿಸಲು ಪೊಲೀಸ್‌ ಇಲಾಖೆಗೆ ವಿಧಾನಸಭೆ ಸಚಿವಾಲಯ ಆದೇಶ ನೀಡಿದೆ.

ವಿಧಾನಸಭೆ ಹಕ್ಕು ಬಾಧ್ಯತೆಗಳ ಸಮಿತಿಯು  ಇಬ್ಬರೂ ಸಂಪಾದಕರಿಗೆ  ಶಿಕ್ಷೆ ವಿಧಿಸಿತ್ತು. ವಿಧಾನಸಭಾ ಅಧಿವೇಶನದಲ್ಲೂ ಈ ವಿಷಯವನ್ನು ಸದಸ್ಯರು ಪ್ರಸ್ತಾಪಿಸಿದ್ದರು. ಸದನವೂ ಹಕ್ಕು ಬಾಧ್ಯತೆ ಸಮಿತಿಯ ವರದಿಯನ್ನು ಅಂಗೀಕರಿಸಿ  ಶಿಕ್ಷೆ ಜಾರಿಗೊಳಿಸಲು ನಿರ್ಣಯ ತೆಗೆದುಕೊಂಡಿತ್ತು.

ತಕ್ಷಣವೇ ಆದೇಶವನ್ನು ಜಾರಿಗೊಳಿಸುವಂತೆ  ಸಚಿವಾಲಯ ಕಾರ್ಯದರ್ಶಿ ಎಸ್‌.ಮೂರ್ತಿ ಒಳಾಡಳಿತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಭಾಷ್‌ ಚಂದ್ರ ಅವರಿಗೆ ಪತ್ರ ಬರೆದಿದ್ದಾರೆ.

ADVERTISEMENT

ಶಿಕ್ಷೆ ಪ್ರಶ್ನೆ ಮಾಡಬಹುದು: ‘ಶಿಕ್ಷೆಗೆ ಗುರಿಯಾದವರು ಸಭಾಧ್ಯಕ್ಷರಿಗೆ ಮನವಿ ಮಾಡಲು ಅವಕಾಶವಿದೆ. ಸದನ ದಲ್ಲಿ ನಿರ್ಣಯ ತೆಗೆದುಕೊಂಡಿದ್ದರೂ ಅದನ್ನು ಜಾರಿ ಮಾಡುವ ಅಥವಾ ಬಿಡುವ ಅಧಿಕಾರ ಸರ್ಕಾರಕ್ಕೆ ಇದೆ’ ಎಂದು ವಿಧಾನ ಪರಿಷತ್‌ನ ಮಾಜಿ ಸಭಾಪತಿ ವಿ.ಆರ್‌. ಸುದರ್ಶನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನ್ಯಾಯಾಲಯದಲ್ಲೂ ಪ್ರಶ್ನೆ ಮಾಡಲು ಅವಕಾಶವಿದೆ. ಶಾಸಕಾಂಗದ ಕೆಲಸ ಶಾಸನ ಮಾಡುವುದು. ಶಿಕ್ಷೆ ನೀಡುವುದು ಅಲ್ಲ’  ಎಂದೂ ಅವರು ಹೇಳಿದರು.
ಸದನದ ನಿರ್ಣಯವೇ ಅಂತಿಮ:  ಸದನದಲ್ಲಿ ತೆಗೆದುಕೊಂಡ ನಿರ್ಣಯವೇ ಅಂತಿಮ. ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಆಗುವುದಿಲ್ಲ ಎಂದು ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಮತ್ತು ವಿಧಾನಪರಿಷತ್‌ ಸದಸ್ಯ ವಿ.ಎಸ್‌.ಉಗ್ರಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.