ADVERTISEMENT

ರಾಘವೇಶ್ವರಗೆ ಸರ್ಕಾರ ಶ್ರೀರಕ್ಕೆ

ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆಯ ಆರೋಪ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2015, 19:30 IST
Last Updated 22 ಸೆಪ್ಟೆಂಬರ್ 2015, 19:30 IST
ರಾಘವೇಶ್ವರಗೆ ಸರ್ಕಾರ ಶ್ರೀರಕ್ಕೆ
ರಾಘವೇಶ್ವರಗೆ ಸರ್ಕಾರ ಶ್ರೀರಕ್ಕೆ   

ಬೆಂಗಳೂರು: ‘ರಾಘವೇಶ್ವರ ಶ್ರೀ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿ ಒಂದು ವರ್ಷ ಕಳೆದರೂ  ಆರೋಪ ಪಟ್ಟಿ ಸಲ್ಲಿಸದಿರಲು ರಾಜಕೀಯ ವ್ಯಕ್ತಿಗಳ ಕೈವಾಡವೇ ಕಾರಣ’ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಲಲಿತಾ ಕುಮಾರಮಂಗಲಂ ಆರೋಪಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ‘ಸ್ವಾಮೀಜಿ ವಿರುದ್ಧ ಮೊದಲ ಪ್ರಕರಣ ದಾಖಲಾಗಿ ಒಂದು ವರ್ಷವಾಗಿದೆ. ಸಂತ್ರಸ್ತೆಯನ್ನು ಭೇಟಿ ಮಾಡಲು ಕಳೆದ ತಿಂಗಳು  ಬೆಂಗಳೂರಿಗೆ ಬಂದಿದ್ದಾಗ ಕಾನೂನು ಸಚಿವರನ್ನು ಭೇಟಿ ಮಾಡಿದ್ದೆ. ಒಂದು ವಾರದಲ್ಲಿ  ಆರೋಪಪಟ್ಟಿ ಸಲ್ಲಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದರು. ಆದರೆ, ಇದುವರೆಗೆ ಅಂಥ ಯಾವುದೇ  ಪ್ರಕ್ರಿಯೆ ನಡೆಸಿಲ್ಲ. ಇದು ಸರ್ಕಾರವೇ ಸ್ವಾಮೀಜಿಗೆ ರಕ್ಷಣೆ ನೀಡುತ್ತಿದೆ ಎಂಬ ಗುಮಾನಿಗೆ ಕಾರಣವಾಗಿದೆ’ ಎಂದು ಹೇಳಿದರು. 

‘ಆಗಸ್ಟ್‌ 29ರಂದು ಮತ್ತೊಬ್ಬ ಯುವತಿ ಅತ್ಯಾಚಾರದ ದೂರು ದಾಖಲಿಸಿದ್ದಾರೆ. ಆಕೆಯನ್ನು ಭೇಟಿ ಮಾಡಿ ಮಾಹಿತಿ ಪಡೆದಿದ್ದೇನೆ. ಇಬ್ಬರೂ ದೂರುದಾರರೂ ರಕ್ಷಣೆ ಕೋರಿದ್ದಾರೆ. ದೆಹಲಿಗೆ ಹೋದ ನಂತರ ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ ಮತ್ತು ಗೃಹ ಇಲಾಖೆ ಪತ್ರ ಬರೆಯಲಾಗುವುದು’ ಎಂದು ಮಾಹಿತಿ ನೀಡಿದರು.

‘ಎರಡನೇ ಪ್ರಕರಣದ ದೂರುದಾರೆ ತುಂಬ ಚಿಕ್ಕ ವಯಸ್ಸಿನ ಯುವತಿ. ಈ ಹಿಂದೆಯೇ ದೂರು ನೀಡಲು ಮುಂದಾದರೂ ದೂರು ನೀಡದಂತೆ ಒತ್ತಡ ಹೇರಲಾಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿಯ ಕಡೆಯವರಿಂದ ಜೀವ ಬೆದರಿಕೆ ಇದೆ ಎಂದೂ ಆಕೆ ಹೇಳಿಕೊಂಡಿದ್ದಾರೆ’ ಎಂದು ವಿವರಿಸಿದರು.

***
ರಾಜಾರೋಷ ಓಡಾಟ
‘ಅತ್ಯಾಚಾರದ ಆರೋಪಿ ರಾಜಾರೋಷವಾಗಿ ಓಡಾಡಿ ಕೊಂಡಿದ್ದಾರೆ. ಆದರೆ, ಸಂತ್ರಸ್ತರು ಮುಖ ಮುಚ್ಚಿಕೊಂಡು ತಿರುಗಾಡುವಂತಾಗಿದೆ. ಎರಡನೇ ಪ್ರಕರಣದ ಫಿರ್ಯಾದಿ ನನ್ನನ್ನು ಭೇಟಿ ಮಾಡಿದಾಗಲೂ ಮುಖಕ್ಕೆ ಬಟ್ಟೆ ಸುತ್ತಿಕೊಂಡಿದ್ದರು. ಆರೋಪಿಯ ಸಹಚರರು ದೂರುದಾರರ ತೇಜೋವಧೆ ಮಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ವಾಟ್ಸ್ಆ್ಯಪ್‌ಗಳಲ್ಲಿ ಹರಿದಾಡುತ್ತಿರುವ  ಸಂದೇಶಗಳನ್ನು ಗಮನಿಸಿದ್ದೇನೆ’ ಎಂದು ಲಲಿತಾ ಕುಮಾರಮಂಗಲಂ ಹೇಳಿದರು.

‘ಸಾಕಷ್ಟು ಪ್ರಭಾವವಿದ್ದ ಆಸಾರಾಂ ಬಾಪು, ಬಿಡದಿಯ ನಿತ್ಯಾನಂದ ಸ್ವಾಮಿ  ಅವರನ್ನು ಮೂರನೇ ವ್ಯಕ್ತಿಗಳು ನೀಡಿದ ದೂರಿನ ಆಧಾರದಲ್ಲಿ ಬಂಧಿಸಲಾಗಿತ್ತು. ಆದರೆ, ರಾಘವೇಶ್ವರ ಸ್ವಾಮಿ ವಿರುದ್ಧ ಅತ್ಯಾಚಾರಕ್ಕೊಳಗಾದವರೇ ದೂರು ನೀಡಿದರೂ ಯಾಕೆ ಬಂಧಿಸಿಲ್ಲ ’ ಎಂದು ಅವರು ಪ್ರಶ್ನಿಸಿದರು.

***
ಸುಮನ್‌ ಹೆಗಡೆ ಪದಚ್ಯುತಿ
ಬೆಂಗಳೂರು:
ರಾಘವೇಶ್ವರ ಶ್ರೀಗಳ ಪರ ಹಾಗೂ ಸಂತ್ರಸ್ತೆಯ ವಿರುದ್ಧ  ಹೇಳಿಕೆ ನೀಡಿದ್ದ ಆರೋಪ ಎದುರಿಸುತ್ತಿದ್ದ ರಾಜ್ಯ ಮಹಿಳಾ ಆಯೋಗದ ಸದಸ್ಯ ಸ್ಥಾನದಿಂದ ಸುಮನ್‌ ಹೆಗಡೆ ಅವರನ್ನು ಸರ್ಕಾರ ಪದಚ್ಯುತಿಗೊಳಿಸಿ, ಅವರ ಸ್ಥಾನಕ್ಕೆ ಬೆಂಗಳೂರಿನ ಗೌರಮ್ಮ ಅವರನ್ನು ನೇಮಕ ಮಾಡಿದೆ.

*
ವೈದ್ಯಕೀಯ ಪರೀಕ್ಷೆ ಹೆಸರಲ್ಲಿ ಸಂತ್ರಸ್ತರ ಜನನಾಂಗದ ಪರೀಕ್ಷೆ ನಡೆಸಿರುವುದು ಖಂಡನೀಯ. ಇದು ಸುಪ್ರೀಂ ಕೋರ್ಟ್‌ ನಿರ್ದೇಶನದ ಉಲ್ಲಂಘನೆ
-ಲಲಿತಾ,
ಕುಮಾರಮಂಗಲಂ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT