ADVERTISEMENT

ರಾಘವೇಶ್ವರ ಸ್ವಾಮೀಜಿ ಸನ್ಯಾಸಿಯೇ ಅಲ್ಲ

ಸಮಾನ ಮನಸ್ಕ ಹವ್ಯಕರ ವೇದಿಕೆ ಆರೋಪ

​ಪ್ರಜಾವಾಣಿ ವಾರ್ತೆ
Published 30 ಜುಲೈ 2015, 19:42 IST
Last Updated 30 ಜುಲೈ 2015, 19:42 IST

ಹುಬ್ಬಳ್ಳಿ: ‘ಹಲವು ದಾಖಲೆಗಳಲ್ಲಿ, ಕಾಗದ ಪತ್ರಗಳಲ್ಲಿ ತಮ್ಮ ಪೂರ್ವಾಶ್ರಮದ ಹೆಸರನ್ನೇ ನಮೂದಿಸುತ್ತಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ಸನ್ಯಾಸಿಯೇ ಅಲ್ಲ’ ಎಂದು ಸಮಾನ ಮನಸ್ಕ ಹವ್ಯಕರ ವೇದಿಕೆ ಆರೋಪಿಸಿದೆ.

‘ರಾಘವೇಶ್ವರ ಸ್ವಾಮೀಜಿ ಪೀಠಾಧೀಶರಾದ ನಂತರವೂ, ತಮ್ಮ ಹೆಸರನ್ನು ರಾಘವೇಶ್ವರ ಭಾರತೀ ಸ್ವಾಮೀಜಿ ಅಲಿಯಾಸ್‌ ಹರೀಶ ಶರ್ಮ ಅಥವಾ ಹರೀಶ ಭಟ್‌ ಅಥವಾ ಹರೀಶ ಎಸ್. ಎಂದು ಬರೆಯಿಸಿದ್ದಾರೆ. ಅಲ್ಲದೆ, ತಮ್ಮ ಹೆಸರಿನಲ್ಲಿ ₨ 1ಕೋಟಿ ಮೊತ್ತದ ವಿಮೆ ಮಾಡಿಸಿದ್ದಾರೆ. ಅದರಲ್ಲಿಯೂ ತಮ್ಮ ಪೂರ್ವಾಶ್ರಮದ ಹೆಸರನ್ನೇ ಉಲ್ಲೇಖಿಸಿದ್ದಾರೆ. ಪೀಠತ್ಯಾಗದ ನಂತರವೂ ಮಠದ ಆಸ್ತಿಯೆಲ್ಲ ತಮ್ಮ ವೈಯಕ್ತಿಕ ಆಸ್ತಿ ಎಂದು ಸಾಧಿಸಲು ಸ್ವಾಮೀಜಿ ಈ ರೀತಿ ಮಾಡುತ್ತಿದ್ದಾರೆ’ ಎಂದು ವೇದಿಕೆಯ ಸಂಚಾಲಕ ಸಿ.ಬಿ.ಎಲ್‌.ಹೆಗಡೆ,  ಖಜಾಂಚಿ ಅಶ್ವಿನಿ ಕುಮಾರ್‌   ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆಪಾದಿಸಿದರು.

ಸಿಐಡಿ ತನಿಖೆ ಚುರುಕುಗೊಳ್ಳಲಿ: ‘ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ರಾಘವೇಶ್ವರ ಸ್ವಾಮೀಜಿ ವಿರುದ್ಧ ತನಿಖೆ ನಡೆಸುತ್ತಿರುವ ಸಿಐಡಿಯು ವಿಳಂಬ ಧೋರಣೆ ಅನುಸರಿಸುತ್ತಿದೆ. ಕಳೆದ ವರ್ಷ ಆಗಸ್ಟ್‌ 27ರಂದು ಪ್ರಕರಣ ದಾಖಲಾಗಿದ್ದು, ಈಗ ಮಹಜರು ಆರಂಭಿಸಿದ್ದಾರೆ. ಸಂತ್ರಸ್ತ ಮಹಿಳೆಯನ್ನು ಊರಿನಿಂದ ಊರಿಗೆ ತಿರುಗಿಸುತ್ತಿದ್ದಾರೆ. ಸಿಐಡಿ ಅಧಿಕಾರಿಗಳೂ ಸ್ವಾಮೀಜಿಯವರ ಪ್ರಭಾವಕ್ಕೆ ಒಳಗಾದಂತೆ ಕಾಣುತ್ತಿದೆ’ ಎಂದು ಟೀಕಿಸಿದರು.

‘ಅತ್ಯಾಚಾರ ನಡೆದಿದೆ ಎನ್ನಲಾದ ಕೊಠಡಿಯನ್ನೂ ಧ್ವಂಸಗೊಳಿಸಲಾಗಿದೆ. ಈ ಹತ್ತು ತಿಂಗಳ ಅವಧಿಯಲ್ಲಿ ಮತ್ತಷ್ಟು ಸಾಕ್ಷ್ಯ ನಾಶವಾಗಿರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ’ ಎಂದು ಅವರು ಸಂಶಯ ವ್ಯಕ್ತಪಡಿಸಿದರು. ‘ಹಿಂದೂ ಸಂಘಟನೆಗಳು ಈ ವಿಷಯದಲ್ಲಿ ರಾಘವೇಶ್ವರ ಸ್ವಾಮೀಜಿ ಅವರ ಪರವಾಗಿ ಇಲ್ಲ. ಆರ್‌ಎಸ್‌ಎಸ್‌ ಕೂಡ ತಟಸ್ಥವಾಗಿದೆ’ ಎಂದು  ಅವರು ಹೇಳಿದರು.

ಪೂಜೆಗೆ ಅವಕಾಶ ಬೇಡ: ‘ಶುಕ್ರವಾರದಿಂದ ಮಠದಲ್ಲಿ ಚಾತುರ್ಮಾಸ ಪೂಜೆ ಆರಂಭವಾಗುತ್ತದೆ. ಬ್ರಹ್ಮಚರ್ಯ ಮತ್ತು ವೈರಾಗ್ಯ ಎರಡನ್ನೂ ಕಳೆದುಕೊಂಡಿರುವ ರಾಘವೇಶ್ವರ ಸ್ವಾಮೀಜಿ ಈ ಪೂಜೆ ಮಾಡಬಾರದು. ಅದಕ್ಕೆ ಭಕ್ತರು ಅವಕಾಶ ನೀಡಬಾರದು’ ಎಂದು  ಹೇಳಿದರು.

‘ಅವರ ವಿರುದ್ಧ ಯಾರೂ ಧ್ವನಿ ಎತ್ತದ ಸ್ಥಿತಿಯನ್ನು ರಾಘವೇಶ್ವರ ಸ್ವಾಮೀಜಿ ಮತ್ತು ಅವರ ಶಿಷ್ಯರು ಸೃಷ್ಟಿಸಿದ್ದಾರೆ. ಸ್ವಾಮೀಜಿ ವಿರುದ್ಧ ಮಾತನಾಡಿದವರಿಗೆ ಯಾವುದೇ ಸಭೆ ಸಮಾರಂಭ, ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ಬಹಿಷ್ಕಾರ ಹಾಕುವ ಮೂಲಕ ಭಯ ಹುಟ್ಟಿಸುತ್ತಿದ್ದಾರೆ’ ಎಂದು  ಆರೋಪಿಸಿದರು. ವೇದಿಕೆಯ ಉಪಾಧ್ಯಕ್ಷ ಸಚ್ಚಿದಾನಂದ ಹೆಗಡೆ ಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.