ADVERTISEMENT

ರಾಜ್ಯದಲ್ಲಿ ಮಳೆ ಬಿರುಸು

ಬಳ್ಳಾರಿ: ಹಳ್ಳದಲ್ಲಿ ಕೊಚ್ಚಿಹೋದ ಯುವಕ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2014, 19:30 IST
Last Updated 25 ಅಕ್ಟೋಬರ್ 2014, 19:30 IST

ಬೆಂಗಳೂರು: ರಾಜ್ಯದ ಕರಾವಳಿ, ­ ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ  ಶುಕ್ರವಾರ ರಾತ್ರಿ ಮತ್ತು ಶನಿವಾರ ಮಳೆ­ಯಾಗಿದೆ. ಬೆಂಗಳೂರು ಮಹಾ­ನಗರದ ಕೆಲವೆಡೆಯೂ ಶನಿವಾರ ಸಂಜೆ ಜೋರು ಮಳೆ ಸುರಿಯಿತು.

ಬಳ್ಳಾರಿ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶುಕ್ರವಾರ ರಾತ್ರಿಯಿಡೀ ಸುರಿದ ಮಳೆ ಶನಿವಾರವೂ ಮುಂದುವರಿ­ದಿತ್ತು. ಕರೂರು ಗ್ರಾಮದ ಬಳಿ ಬೆಳಿಗ್ಗೆ ಎಮ್ಮೆಗೆ ನೀರು ಕುಡಿಸಲು ಗುಂಜಿನ ಹಳ್ಳಕ್ಕೆ ಹೋಗಿದ್ದ ಕೆ.ನಾಗರಾಜ (20) ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾನೆ.
ಬಳ್ಳಾರಿ ತಾಲ್ಲೂಕಿನ ಕಮ್ಮರಚೇಡು ಗ್ರಾಮದಲ್ಲಿ ನೀರು ನುಗ್ಗಿದ್ದು, ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ಹತ್ತಿ, ಮೆಣಸಿನಕಾಯಿ, ಜೋಳ ಹಾಗೂ ಭತ್ತದ ಬೆಳೆ ಹಾನಿಗೊಳಗಾಗಿವೆ.

ಗ್ರಾಮ ಹಾಗೂ ಪಕ್ಕದ ಮಳೆಗಡ್ಡೆ ಕ್ಯಾಂಪ್‌ನಲ್ಲಿರುವ ಬಹುತೇಕ ಮನೆಗಳಿಗೆ ನೀರು ನುಗ್ಗಿದ್ದು, ಗ್ರಾಮಸ್ಥರು ಸಂಗ್ರಹಿ­ಸಿದ್ದ ಆಹಾರ ಧಾನ್ಯ ನಾಶವಾಗಿದೆ. ರೂಪನಗುಡಿ– ಬಳ್ಳಾರಿ ನಡುವೆ ಭಾರಿ ವಾಹನಗಳ ಸಂಚಾರ ಸ್ಥಗಿತ­ಗೊಂಡಿದೆ. ವಿಜಾಪುರ, ಬಾಗಲಕೋಟೆ ಜಿಲ್ಲೆ­ಗಳಲ್ಲಿ ರಭಸದ ಮಳೆ ಮತ್ತು ಗದಗ, ಹಾವೇರಿ, ಬೆಳಗಾವಿ, ಧಾರವಾಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ.

ಭತ್ತಕ್ಕೆ ಹಾನಿ: ಉತ್ತರ ಕನ್ನಡ ಜಿಲ್ಲೆ­ಯಲ್ಲಿಯೂ ಶನಿವಾರ ದಿನವಿಡೀ ಜಿಟಿಜಿಟಿ ಮಳೆ ಸುರಿಯಿತು. ಮುಂಡ­ಗೋಡದಲ್ಲಿ ಕಟಾವಾಗಿದ್ದ ಭತ್ತದ ಫಸಲಿಗೆ ಹಾನಿಯಾಗಿದೆ. ಹೊನ್ನಾವರದ ಶರಾವತಿ ನದಿಯಲ್ಲಿ ನೀರಿನ ಮಟ್ಟ ಸ್ವಲ್ಪ ಏರಿಕೆಯಾಗಿತ್ತು.

ಸಿಡಿಲಿಗೆ ಬಲಿ: ತಿಪಟೂರು ತಾಲ್ಲೂಕಿನ ಆಲೂರಿನಲ್ಲಿ ಸಿಡಿಲು ಬಡಿದು ಎರಡು ಮೇಕೆ ಮತ್ತು ನಾಯಿ ಮೃತಪಟ್ಟಿವೆ. 15 ಕ್ಕೂ ಹೆಚ್ಚು ಟಿ.ವಿ ಹಾನಿಗೊಳಗಾಗಿವೆ.

(ಪೂರಕ ಮಾಹಿತಿ: ವಿವಿಧ ಬ್ಯೂರೊಗಳಿಂದ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.