ADVERTISEMENT

ರಾಜ್ಯದಲ್ಲಿ ವಿಪರೀತ ಭ್ರಷಾıಚಾರ

ನ್ಯಾಯಮೂರ್ತಿ ವೇಣುಗೋಪಾಲ ಗೌಡ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2016, 19:30 IST
Last Updated 8 ಫೆಬ್ರುವರಿ 2016, 19:30 IST
ರಾಜ್ಯದಲ್ಲಿ ವಿಪರೀತ ಭ್ರಷಾıಚಾರ
ರಾಜ್ಯದಲ್ಲಿ ವಿಪರೀತ ಭ್ರಷಾıಚಾರ   

ಬೆಂಗಳೂರು: ಕರ್ನಾಟಕದಲ್ಲಿನ ಸದ್ಯದ ಭ್ರಷ್ಟಾಚಾರವನ್ನು ಗಮನಿಸಿದರೆ ಇನ್ವೆಸ್ಟ್‌ ಕರ್ನಾಟಕ–2016 ಹೇಗೆ ತಾನೇ ಯಶಸ್ವಿಯಾದೀತು? ಹೊರಗಿನವರು ಇಲ್ಲಿ ಬಂದು ಹೇಗೆ ತಾನೇ ಬಂಡವಾಳ ಹೂಡಿಯಾರು..?

ಲೋಕಾಯುಕ್ತ ಪೊಲೀಸರ ಕಾರ್ಯವೈಖರಿ ವಿರುದ್ಧ ಮಂಡ್ಯದ ಡಾ.ವಿ.ಎಲ್‌. ನಂದೀಶ್‌ ದಾಖಲಿಸಿರುವ ಕ್ರಿಮಿನಲ್‌ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎ.ಎನ್. ವೇಣುಗೋಪಾಲ ಗೌಡ ಅವರ ಏಕಸದಸ್ಯ ಪೀಠ  ಸೋಮವಾರ ವಿಚಾರಣೆ ವೇಳೆ ವ್ಯಕ್ತಪಡಿಸಿದ ಮೌಖಿಕ ಅಭಿಪ್ರಾಯವಿದು.

‘ಇಲಾಖೆಯ ಜಂಟಿ ಕಾರ್ಯದರ್ಶಿಗಳು ಕುರ್ಚಿ ಮೇಲೆ ಕುಳಿತುಕೊಳ್ಳುತ್ತಿಲ್ಲ. ಬದಲಿಗೆ ಫೈಲುಗಳ ಮೇಲೆ ಕುಳಿತು ಆಡಳಿತ ನಡೆಸುತ್ತಿದ್ದಾರೆ’ ಎಂದು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿಗಳು, ‘ಸಾರ್ವಜನಿಕ ಕಳಕಳಿ ಇಲ್ಲದ ಅಧಿಕಾರಿಗಳಿಂದ ಇಲಾಖೆಗಳು ನಿದ್ರಿಸುತ್ತಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಭ್ರಷ್ಟಾಚಾರದ 100ಕ್ಕೂ ಹೆಚ್ಚು ಪ್ರಕರಣಗಳ ವಿಚಾರಣೆ  ಬಾಕಿ ಉಳಿದ ಪ್ರತಿಯೊಂದು ಜಿಲ್ಲೆಯಲ್ಲೂ ಹೆಚ್ಚುವರಿ ಲೋಕಾಯುಕ್ತ ನ್ಯಾಯಾಲಯ ಸ್ಥಾಪಿಸಬೇಕು’ ಎಂದು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಎ.ಎಸ್.ಪೊನ್ನಣ್ಣ ಅವರಿಗೆ  ಸೂಚಿಸಿದರು.

‘ಇದೇ 18ರೊಳಗೆ ಈ ಕುರಿತಂತೆ ಸಮಗ್ರ ವರದಿ ಸಲ್ಲಿಸಬೇಕು. ಎಲ್ಲೆಲ್ಲಿ ಲೋಕಾಯುಕ್ತ ನ್ಯಾಯಾಲಯಗಳಲ್ಲಿ ಸರ್ಕಾರದ ಪರ ವಕೀಲರು ಇಲ್ಲವೋ ಅಲ್ಲೆಲ್ಲಾ ವಕೀಲರನ್ನು ನೇಮಿಸಲು ಕ್ರಮ ಕೈಗೊಳ್ಳಬೇಕು. ಪ್ರತಿ ಇಲಾಖೆಯಲ್ಲೂ ವಿಚಕ್ಷಣಾ ವಿಭಾಗಗಳನ್ನು  ಸ್ಥಾಪಿಸಲು ಚಿಂತನೆ ನಡೆಸಬೇಕು. ಇದರಿಂದ ಲೋಕಾಯುಕ್ತ ಹೊರೆ ಕಡಿಮೆಯಾಗುತ್ತದೆ’ ಎಂದರು.

‘ಪ್ರಾಸಿಕ್ಯೂಷನ್‌ ಅನುಮತಿಗಾಗಿ ಕಾಯುತ್ತಿರುವ ಪ್ರಕರಣಗಳಲ್ಲಿ ನೋಡಲ್‌ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸಿದರೆ ಅವರ ವಿರುದ್ಧ ಪ್ರಧಾನ ಕಾರ್ಯದರ್ಶಿ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದೂ ಆದೇಶಿಸಿದರು.

ಲೋಕಾಯುಕ್ತಕ್ಕೂ ಕೈಪಿಡಿ ಸಲ್ಲಿಸಿ
‘ವಿಚಾರಣಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಿಬಿಐ ಮಾದರಿಯಲ್ಲೇ ಲೋಕಾಯುಕ್ತಕ್ಕೂ ಒಂದು ಕೈಪಿಡಿಯನ್ನು ಇದೇ 18ರೊಳಗೆ ಸಿದ್ಧಪಡಿಸಿ ನ್ಯಾಯಾಲಯಕ್ಕೆ ನೀಡಬೇಕು.  ಐಎಎಸ್‌, ಐಪಿಎಸ್‌ ಹಾಗೂ ಐಎಫ್‌ಎಸ್ ಅಧಿಕಾರಿಗಳ ವಿರುದ್ಧ ದಾಖಲಾಗಿರುವ ಭ್ರಷ್ಟಾಚಾರ ಆರೋಪ ಪಕ್ರರಣಗಳಲ್ಲಿ ಎಷ್ಟಕ್ಕೆ ಪ್ರಾಸಿಕ್ಯೂಷನ್‌ ಅನುಮತಿ ನೀಡಲಾಗಿದೆ ಮತ್ತು ನೀಡದೇ ಇರುವ ಪ್ರಕರಣಗಳಲ್ಲಿ ವಿಳಂಬಕ್ಕೆ ಕಾರಣಗಳೇನು ಎಂಬುದನ್ನು ತಿಳಿಸಬೇಕು’ ಎಂದು ಸೂಚಿಸಿದರು.

ಈ ವಿಷಯದಲ್ಲಿ ಸಹಾಯಕ ಸಾಲಿಸಿಟರ್‌ ಜನರಲ್ ಕೃಷ್ಣ ಎಸ್‌.ದೀಕ್ಷಿತ್‌ ಅವರನ್ನು ಅಮಿಕಸ್‌ ಕ್ಯೂರಿಯಾಗಿ (ನ್ಯಾಯಾಲಯಕ್ಕೆ ಸಹಕರಿಸುವ ವಕೀಲರು) ನ್ಯಾಯಪೀಠ ನೇಮಕ ಮಾಡಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.