ADVERTISEMENT

ರಾಜ್ಯದಲ್ಲಿ ಶೇ 23.2ರಷ್ಟು ಬಾಲ್ಯ ವಿವಾಹ

ರಾಷ್ಟ್ರೀಯ ಆರೋಗ್ಯ ಅಭಿಯಾನ ನಡೆಸಿರುವ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2017, 19:30 IST
Last Updated 20 ಜನವರಿ 2017, 19:30 IST
ರಾಜ್ಯದಲ್ಲಿ ಶೇ 23.2ರಷ್ಟು ಬಾಲ್ಯ ವಿವಾಹ
ರಾಜ್ಯದಲ್ಲಿ ಶೇ 23.2ರಷ್ಟು ಬಾಲ್ಯ ವಿವಾಹ   

ಬೆಂಗಳೂರು: ರಾಜ್ಯದಲ್ಲಿ ಬಾಲ್ಯವಿವಾಹ ಪ್ರಮಾಣ ಶೇ 23.2ರಷ್ಟಿದ್ದು, ಕರ್ನಾಟಕ ದೇಶದಲ್ಲಿಯೆ 8ನೇ ಸ್ಥಾನದಲ್ಲಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ  ಆಳ್ವ ಹೇಳಿದರು. ರಾಷ್ಟ್ರೀಯ ಆರೋಗ್ಯ ಅಭಿಯಾನ ನಡೆಸಿರುವ ಸಮೀಕ್ಷೆಯಲ್ಲಿ ಈ ಅಂಕಿ–ಅಂಶ ಲಭ್ಯವಾಗಿದೆ ಎಂದು ಅವರು ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಯಾದಗಿರಿ ಜಿಲ್ಲೆ ಮೊದಲ ಸ್ಥಾನದಲ್ಲಿದೆ.  ಬೆಳಗಾವಿ, ಧಾರವಾಡ, ಕಲಬುರ್ಗಿ, ಬಾಗಲಕೋಟೆ, ಬಳ್ಳಾರಿ ಮತ್ತು ಮಂಡ್ಯ ಜಿಲ್ಲೆಗಳಲ್ಲಿ  ಬಾಲ್ಯ ವಿವಾಹ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ವಿವರಿಸಿದರು.

ಬಾಲ್ಯ ವಿವಾಹ ತಡೆಯುವ ಜವಾಬ್ದಾರಿ ಪೊಲೀಸ್‌, ಶಿಕ್ಷಣ ಇಲಾಖೆ ಸೇರಿ 10 ಇಲಾಖೆಗಳ ಮೇಲಿದೆ. ಎಲ್ಲರೂ ಸಮನ್ವಯದಿಂದ ಕೆಲಸ ಮಾಡಿದರೆ  ಬಾಲ್ಯ ವಿವಾಹ ಮುಕ್ತ ರಾಜ್ಯ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಈ ನಿಟ್ಟಿನಲ್ಲಿ ಅರಿವು ಮೂಡಿಸುವ ಸಲುವಾಗಿ ಇದೇ 21ರಂದು ರಾಜ್ಯದಾದ್ಯಂತ ಜಿಲ್ಲಾ ಮಟ್ಟದಿಂದ ಗ್ರಾಮ ಮಟ್ಟದವರೆಗೆ  ಬೃಹತ್ ಜಾಗೃತಿ ಆಂದೋಲನ ಆಯೋಜಿಸಲಾಗಿದೆ. ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಂದೋಲನಕ್ಕೆ ಚಾಲನೆ ನೀಡುವರು ಎಂದು ತಿಳಿಸಿದರು.

‘ಕರೆ’ ವೆಬ್‌ಸೈಟ್‌: ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಸ್ಪಂದಿಸಲು ‘ಕರೆ’ ವೆಬ್‌ಸೈಟ್‌ ವಿನ್ಯಾಸಗೊಳಿಸಲಾಗಿದೆ ಎಂದು ಕೃಪಾ ಆಳ್ವಾ ಹೇಳಿದರು. ಮಕ್ಕಳು ಹಕ್ಕು ಉಲ್ಲಂಘನೆ ಬಗ್ಗೆ ಆನ್‌ಲೈನ್‌ನಲ್ಲೆ ದೂರು ನೀಡುವ ಅವಕಾಶವನ್ನು ವೆಬ್‌ಸೈಟ್‌ನಲ್ಲಿ ಕಲ್ಪಿಸಲಾಗಿದೆ. ದೂರುಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಲು ಇದು ಸಹಕಾರಿ ಆಗಲಿದೆ ಎಂದರು.

ಪ್ರೇಮ ವಿವಾಹದ ಹೆಸರಿನಲ್ಲಿ ಬಾಲ್ಯವಿವಾಹ
ಪ್ರೀತಿ ಪ್ರೇಮದ ಹೆಸರಿನಲ್ಲೂ ಬಾಲ್ಯ ವಿವಾಹಗಳು ನಡೆಯುತ್ತಿವೆ ಎಂದು ಕೃಪಾ ಆಳ್ವ ಹೇಳಿದರು. ಸಿನಿಮಾಗಳು ಕೂಡ ಇದಕ್ಕೆ ಪರೋಕ್ಷ ಕಾರಣ ಆಗುತ್ತಿವೆ. ಶೌಚಾಲಯ ಇಲ್ಲ ಎಂಬ ಕಾರಣಕ್ಕೂ ಬಾಲ್ಯ ವಿವಾಹ ನಡೆದಿರುವ ಉದಾಹರಣೆ ಇದೆ. ಬಾಲ್ಯ ವಿವಾಹಗಳ ಸಂಖ್ಯೆಗೂ  ಪ್ರಕರಣ ದಾಖಲಾಗುವ ಸಂಖ್ಯೆಗೂ ತುಂಬಾ ವ್ಯತ್ಯಾಸ ಇದೆ ಎಂದೂ ಅವರು ಹೇಳಿದರು.

***
ರಾಜಸ್ತಾನದ ಶ್ರೀಮಂತರು ಉತ್ತರ ಕರ್ನಾಟಕದ ಬಡವರ ಮನೆ ಹೆಣ್ಣು ಮಕ್ಕಳನ್ನು ಹಣ ಕೊಟ್ಟು ಮದುವೆ ಮಾಡಿಕೊಳ್ಳುವ ಪದ್ದತಿ ಇದೆ. ಇವೆಲ್ಲವೂ   ಬಾಲ್ಯ ವಿವಾಹಗಳಾಗಿವೆ
-ಕೃಪಾ ಆಳ್ವ
ಅಧ್ಯಕ್ಷೆ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.