ADVERTISEMENT

ರಾಜ್ಯದಾದ್ಯಂತ ‘ತಾಯಿ ಕಾರ್ಡ್‌’ ಪೂರೈಕೆ ಸ್ಥಗಿತ

ತಾಯಿ, ಶಿಶುವಿಗೆ ಉಚಿತ ಆರೋಗ್ಯ ಸೇವೆ ಅತಂತ್ರ

ಕೆ.ಎಸ್.ಸುನಿಲ್
Published 19 ಅಕ್ಟೋಬರ್ 2014, 19:30 IST
Last Updated 19 ಅಕ್ಟೋಬರ್ 2014, 19:30 IST

ಗದಗ: ತಾಯಿ ಮತ್ತು ಮಗುವಿನ ಸುರಕ್ಷತೆಗಾಗಿ ನೀಡುತ್ತಿದ್ದ ‘ತಾಯಿ ಕಾರ್ಡ್‌’ ಪೂರೈಕೆ ಸ್ಥಗಿತ­ಗೊಂಡ ಕಾರಣ ಗರ್ಭಿಣಿಯರು, ತಾಯಂದಿರು ಹಾಗೂ ಶಿಶುಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ದೊರೆಯುತ್ತಿದ್ದ ಉಚಿತ ಆರೋಗ್ಯ ಸೇವೆ ಸ್ಥಗಿತವಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕಳೆದ ಎಂಟು ತಿಂಗಳಿನಿಂದ ಜಿಲ್ಲೆಗಳಿಗೆ ತಾಯಿ ಕಾರ್ಡ್‌ ಸರಬರಾಜು ನಿಲ್ಲಿಸಿದೆ. ಹೀಗಾಗಿ ಗ್ರಾಮೀಣ ಪ್ರದೇಶದ ಮಹಿಳೆಯರು ಜನನಿ ಸುರಕ್ಷಾ ಯೋಜನೆ, ಮಡಿಲು ಹಾಗೂ ಪ್ರಸೂತಿ ಆರೈಕೆ ಸೌಲಭ್ಯ ದೊರೆಯದೆ ಪರದಾಡುತ್ತಿದ್ದಾರೆ. 

ಗದಗ ಜಿಲ್ಲೆಯಲ್ಲಿಯೇ 2011 ರಲ್ಲಿ 29,000 ಮತ್ತು 2012ರಲ್ಲಿ 23,000 ಈ ಕಾರ್ಡ್‌ ವಿತರಣೆ ಯಾಗಿತ್ತು. 2014–15ನೇ ಸಾಲಿಗೆ 25,000 ಕಾರ್ಡ್‌ ನೀಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹಲವು ಬಾರಿ ಯೋಜನಾ ನಿರ್ದೇಶಕರಿಗೆ ಪತ್ರ ಬರೆದಿದ್ದರೂ ಪ್ರಯೋಜವಾಗಿಲ್ಲ.

ಕಾರ್ಡ್‌ ಇಲ್ಲದ ಗರ್ಭಿಣಿಯರು ಹಾಗೂ ತಾಯಂದಿರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಮೂತ್ರ, ರಕ್ತ ಸೇರಿ ಇತರೆ ಪರೀಕ್ಷೆಗಳನ್ನು ಮಾಡದೆ ವಾಪಸ್‌ ಕಳುಹಿಸ ಲಾಗುತ್ತಿದೆ. ಕಾರ್ಡ್‌ ವಿಷಯಕ್ಕೆ ಸಂಬಂಧಿಸಿ­ದಂತೆ ಆಸ್ಪತ್ರೆ ಸಿಬ್ಬಂದಿ ಹಾಗೂ ಆರೋಗ್ಯ ಕಾರ್ಯ­ಕರ್ತೆಯರ ನಡುವೆ ವಾಗ್ವಾದ ನಡೆಯುತ್ತಿದೆ.

ಕಿರಿಯ ಮಹಿಳಾ ಆರೋಗ್ಯ ಸಹಾಯಕರಲ್ಲಿ ಹೆಸರು ನೋಂದಾ ಯಿಸಿದ ಮೂರು ತಿಂಗಳ ಗರ್ಭಿಣಿ ಯರಿಗೆ ತಾಯಿ ಕಾರ್ಡ್‌ ನೀಡಲಾಗು ತ್ತದೆ. ಕಾರ್ಡ್‌ ನಂಬರ್‌ ಆನ್‌ಲೈನ್‌ನಲ್ಲಿ ನೋಂದಣಿ ಯಾಗುವುದರಿಂದ ಪ್ರಸವ ಪೂರ್ವ, ನಂತರ ಹಾಗೂ ಶಿಶುವಿಗೆ ನೀಡಿರುವ ಚಿಕಿತ್ಸೆ, ಆರೋಗ್ಯ ಸಮಸ್ಯೆ, ಲಸಿಕೆ, ಮಗುವಿನ ತೂಕ ಮತ್ತು ಬೆಳವಣಿಗೆ ಸೇರಿದಂತೆ ಎಲ್ಲ ಮಾಹಿತಿ­ಗಳನ್ನು ಅದರಲ್ಲಿ ದಾಖಲಾಗುತ್ತದೆ.

ಕಾರ್ಡ್‌ ಹೊಂದಿರುವ ಗರ್ಭಿಣಿಗೆ ಉತ್ತಮ ಪೌಷ್ಟಿಕಾಂಶ ಆಹಾರ ತೆಗೆದುಕೊಳ್ಳಲು ₨ 1,000 ಧನ ಸಹಾಯ ನೀಡಲಾಗುತ್ತದೆ. ತಾಯಿ ಮತ್ತು ಮಗುವಿಗೆ 19 ಸಾಮಗ್ರಿವುಳ್ಳ ಮಡಿಲು ಕಿಟ್‌ ಸಹ ದೊರೆಯುತ್ತದೆ. ಔಷಧಿಗಳ ಪೂರೈಕೆ, ರಕ್ತದ ವ್ಯವಸ್ಥೆ, ರಕ್ತ, ಮೂತ್ರ ಪರೀಕ್ಷೆಯನ್ನು ಉಚಿತವಾಗಿ ಮಾಡಲಾಗುತ್ತದೆ. ಜತೆಗೆ ರಾಜ್ಯದ ಯಾವುದೇ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದು.

‘ಕೆಲ ದಿನಗಳ ಹಿಂದೆಯಷ್ಟೇ ನನ್ನ ಪತ್ನಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಆಯಿತು. ತಾಯಿ ಕಾರ್ಡ್‌ ತಂದರಷ್ಟೇ ಮಡಿಲು ಕಿಟ್‌, ಪೌಷ್ಟಿ­ಕಾಂಶ ಆಹಾರ, ಹೆರಿಗೆ ಭತ್ಯೆ  ನೀಡಲಾಗುವುದು ಎನ್ನುತ್ತಾರೆ ಆಸ್ಪತ್ರೆ ಸಿಬ್ಬಂದಿ. ಭಾಗ್ಯಲಕ್ಷ್ಮೀ ಯೋಜನೆಗೂ ತಾಯಿ ಕಾರ್ಡ್‌ ಬೇಕಾಗಿದೆ. ಪ್ರತಿ ದಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿ ಬರುವುದರಲ್ಲೇ ಸಾಕಾಗಿದೆ. ಬಡವರ ಕಷ್ಟ ಯಾರಿಗೆ ಹೇಳೋದು’ ಎಂದು ಅಡವಿಸೋಮಾಪುರ ಗ್ರಾಮದ ನಿವಾಸಿ ಮಲ್ಲಪ್ಪ ಅಸುಂಡಿ ಅಳಲು ತೋಡಿಕೊಂಡರು.

‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ ಪಿ.ಎಚ್‌.ಕಬಾಡಿ, ‘ಸರ್ಕಾರದಿಂದಲೇ ತಾಯಿ ಕಾರ್ಡ್‌ ಪೂರೈಕೆ ಆಗುತ್ತಿಲ್ಲ. ಇದರಿಂದ ತಾಯಿ ಮತ್ತು ಶಿಶುವಿಗೆ ತೊಂದರೆಯಾಗುತ್ತಿದೆ. ಪ್ರತಿ ದಿನ ಕಚೇರಿಗೆ ಹಲವು ಮಂದಿ ಬಂದು ವಿಚಾರಿಸಿಕೊಂಡು ಹೋಗುತ್ತಾರೆ. ಇಲಾಖಾ ನಿರ್ದೇಶಕರಿಗೆ ಹಲವು ಬಾರಿ ಪತ್ರ ಬರೆಯಲಾಗಿದೆ. ಕಾರ್ಡ್‌ ಬಂದರೆ ಯಾವುದೇ ಕಾರಣಕ್ಕೂ ಇಟ್ಟುಕೊಳ್ಳು­ವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.