ADVERTISEMENT

ರಾಜ್ಯೋತ್ಸವ ಪ್ರಶಸ್ತಿಗೆ ಸಾವಿರ ಅರ್ಜಿಗಳು

62 ಸಾಧಕರಿಗೆ ಸಿಗಲಿರುವ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2017, 19:51 IST
Last Updated 19 ಅಕ್ಟೋಬರ್ 2017, 19:51 IST
- ಸಾಂದರ್ಭಿಕ ಚಿತ್ರ
- ಸಾಂದರ್ಭಿಕ ಚಿತ್ರ   

ಬೆಂಗಳೂರು: ಈ ವರ್ಷ 62 ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರಕಲಿದ್ದು, ಪ್ರಶಸ್ತಿ ಬಯಸಿ ಅರ್ಜಿ ಸಲ್ಲಿಸಿದವರ ಸಂಖ್ಯೆ ಒಂದು ಸಾವಿರ ದಾಟಿದೆ.

ಕಳೆದ ವರ್ಷ 831 ಜನ ಅರ್ಜಿ ಸಲ್ಲಿಸಿದ್ದರು. 61 ಸಾಧಕರು ಪ್ರಶಸ್ತಿಗೆ ಭಾಜನರಾಗಿದ್ದರು. ಪ್ರಶಸ್ತಿಯ ಘನತೆ ಹೆಚ್ಚಿಸಲು ಮತ್ತು  ಲಾಬಿ ತಡೆಯಲು ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಸಮಿತಿ ನೀಡಿದ್ದ ಶಿಫಾರಸುಗಳನ್ನು ಒಪ್ಪಿ, ನಿರ್ದಿಷ್ಟ ಮಾರ್ಗಸೂಚಿಯನ್ನು ಸರ್ಕಾರ ರಚಿಸಿದೆ.

ಅದರಂತೆ 60 ವರ್ಷ ದಾಟಿದವರು ಪ್ರಶಸ್ತಿಗೆ ಅರ್ಹತೆ ಪಡೆಯಲಿದ್ದಾರೆ. ಪ್ರಶಸ್ತಿಗಳ ಸಂಖ್ಯೆಗೂ ಸರ್ಕಾರ ಮಿತಿ ಹಾಕಿಕೊಂಡಿದೆ. ಕಳೆದ ವರ್ಷ 61 ಜನರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ಈ ವರ್ಷ 62 ಜನರಿಗೆ ಮಾತ್ರ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿ ಸಂಖ್ಯೆಯನ್ನು ವರ್ಷಕ್ಕೊಂದರಂತೆ ಏರಿಕೆ ಮಾಡಲು ನಿರ್ಧರಿಸಿದೆ.

ADVERTISEMENT

ಇದರ ನಡುವೆಯೂ ಹಲವು ಆಕಾಂಕ್ಷಿಗಳು ಸಚಿವರು, ಶಾಸಕರ ಪ್ರಭಾವ ಬಳಸಿ ಪ್ರಶಸ್ತಿ ಪಡೆಯಲು ಪೈಪೋಟಿ ನಡೆಸುತ್ತಿದ್ದಾರೆ. ಕೆಲವರಂತೂ ಮುಖ್ಯಮಂತ್ರಿ ಅವರಿಗೇ ದುಂಬಾಲು ಬಿದ್ದಿದ್ದು, ಒತ್ತಡ ಹೇರುವ ಪ್ರಯತ್ನ ನಡೆಸುತ್ತಿದ್ದಾರೆ. ಪ್ರಶಸ್ತಿಗೆ ಸಾಧಕರ ಪಟ್ಟಿ ಸಿದ್ಧಪಡಿಸಲು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅಧ್ಯಕ್ಷತೆಯಲ್ಲಿ 14 ಜನರ ಸಮಿತಿ ಮುಖ್ಯಮಂತ್ರಿ ರಚನೆ ಮಾಡಿದ್ದಾರೆ.

ಸಾವಿರಕ್ಕೂ ಹೆಚ್ಚಿರುವ ಅರ್ಜಿಗಳ ಕೂಲಂಕಷ ಪರಿಶೀಲನೆಯನ್ನು ಸಮಿತಿ ಆರಂಭಿಸಿದೆ. ಇದೇ 25ರೊಳಗೆ ಪಟ್ಟಿ ಸಿದ್ಧಪಡಿಸಿ ಮುಖ್ಯಮಂತ್ರಿ ಅವರಿಗೆ ಸಲ್ಲಿಸಲಿದೆ. ಅಗತ್ಯ ಬಿದ್ದರೆ ಪಟ್ಟಿಯನ್ನು ಮುಖ್ಯಮಂತ್ರಿ ಪರಿಷ್ಕರಿಸಲಿದ್ದಾರೆ. 26ರಂದು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಪ್ರಶಸ್ತಿ ಪುರಸ್ಕೃತರ ಪಟ್ಟಿ ಅಂತಿಮಗೊಳ್ಳಲಿದೆ.

ಅರ್ಜಿ ಸಲ್ಲಿಸದವರಿಗೂ ಪ್ರಶಸ್ತಿ: ಅರ್ಜಿ ಸಲ್ಲಿಸಿದವರು ಮಾತ್ರವಲ್ಲದೇ, ಅರ್ಜಿ ಸಲ್ಲಿಸದ ಸಾಧಕರನ್ನು ಗುರುತಿಸುವ ಕೆಲಸವನ್ನು ಸಲಹಾ ಸಮಿತಿ ಮಾಡುತ್ತಿದೆ.‘ಪ್ರಶಸ್ತಿ ಕೋರಿ ಅರ್ಜಿ ಸಲ್ಲಿಸದ ಸಾಕಷ್ಟು ಜನರಿದ್ದಾರೆ. ಅವರನ್ನು ಗುರುತಿಸದಿದ್ದರೆ ಪ್ರಶಸ್ತಿಯ ಘನತೆ ಉಳಿಯುವುದಿಲ್ಲ’ ಎಂದು ಸಮಿತಿಯ ಸದಸ್ಯರೊಬ್ಬರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.