ADVERTISEMENT

ರಾಮಚಂದ್ರಾಪುರ ಮಠದಿಂದ ಚಾತುರ್ವರ್ಣ ಪ್ರತಿಪಾದನೆ

ಎ.ಎಂ.ಭಾಸ್ಕರರಿಂದ ಮುಖ್ಯ ಕಾರ್ಯದರ್ಶಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2016, 19:30 IST
Last Updated 28 ಅಕ್ಟೋಬರ್ 2016, 19:30 IST
ರಾಘವೇಶ್ವರ ಸ್ವಾಮೀಜಿ
ರಾಘವೇಶ್ವರ ಸ್ವಾಮೀಜಿ   

ಬೆಂಗಳೂರು: ‘ಹೊಸನಗರದ ರಾಮಚಂದ್ರಾಪುರ  ಮಠ ಚಾತುರ್ವಣದ ತತ್ವಗಳನ್ನು ಪ್ರತಿಪಾದಿಸುವ ಮಠವಾಗಿದ್ದು, ಇದರ ಸುಪರ್ದಿಯಲ್ಲಿರುವ ಗೋಕರ್ಣದ ಪ್ರಸಿದ್ಧ ಮಹಾಬಲೇಶ್ವರ ದೇವಾಲಯವನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆಯಬೇಕು’ ಎಂದು  ಮೈಸೂರಿನ ವಕೀಲ ಎ.ಎಂ.ಭಾಸ್ಕರ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿದ್ದಾರೆ.

ಈ ಕುರಿತಂತೆ ಸುದೀರ್ಘ ಪತ್ರ ಬರೆದಿರುವ ಅವರು, ‘2008ರ ಆಗಸ್ಟ್‌ನಲ್ಲಿ ಅಂದಿನ ರಾಜ್ಯ ಸರ್ಕಾರ ಮಹಾಬಲೇಶ್ವರ ದೇವಾಲಯವನ್ನು ಮಠದ ಸುಪರ್ದಿಗೆ ಒಪ್ಪಿಸಿದ್ದು ಸಂವಿಧಾನ ಬಾಹಿರ.  ದೇವಸ್ಥಾನವನ್ನು ಮಠದ ವಶಕ್ಕೆ ಒಪ್ಪಿಸುವ ಮುನ್ನ ಅಂದಿನ ರಾಜ್ಯ ಸರ್ಕಾರ ಸಚಿವ ಸಂಪುಟದ ನಿರ್ಣಯ ಕೈಗೊಂಡಿಲ್ಲ ಹಾಗೂ ತಜ್ಞರ ಅಭಿಪ್ರಾಯ ಪಡೆದಿಲ್ಲ’ ಎಂದು ಅವರು ದೂರಿದ್ದಾರೆ.

‘ಸಾರ್ವಜನಿಕರಿಗೆ ಸೇರಿದ ದೇವಾಲಯದ ಸಂಪೂರ್ಣ ಟ್ರಸ್ಟ್‌ಗೆ ಒಬ್ಬ ವ್ಯಕ್ತಿ ಹೇಗೆ ವಾರಸುದಾರ ಆಗುತ್ತಾರೆ’ ಎಂದು ಪ್ರಶ್ನಿಸಿರುವ ಭಾಸ್ಕರ್‌, ‘ಒಂದು ವೇಳೆ ದೇವಾಲಯವನ್ನು ನಿರ್ವಹಣೆ ಮಾಡುವುದು ಕಷ್ಟ ಎನಿಸಿದ್ದರೆ ಪ್ರತ್ಯೇಕ ಮಂಡಳಿಯನ್ನೇ ನೇಮಕ ಮಾಡಬಹುದಿತ್ತು. ಮಠಕ್ಕೆ ಕೊಡುವ ಜರೂರತ್ತು ಇರಲಿಲ್ಲ’ ಎಂದು ಪ್ರತಿಪಾದಿಸಿದ್ದಾರೆ.

‘ಮಠ ಮತ್ತು ದೇವಸ್ಥಾನಗಳ ನಡುವಿನ ವ್ಯತ್ಯಾಸವನ್ನು ಸುಪ್ರೀಂ ಕೋರ್ಟ್‌ ಮತ್ತು ಹಲವು ಹೈಕೋರ್ಟ್‌ಗಳು ಅನೇಕ ಪ್ರಸಂಗಗಳಲ್ಲಿ ಸ್ಪಷ್ಟವಾಗಿ ವಿವರಿಸಿದ್ದು, ದೇವಸ್ಥಾನಗಳು ಸಾರ್ವಜನಿಕರಿಗೆ ಸೇರಿದ ಕೇಂದ್ರಗಳು ಎಂಬುದನ್ನು ಹೇಳಿವೆ. ಆದ್ದರಿಂದ ದೇವಾಲಯವನ್ನು ಮಠದ ಸುಪರ್ದಿಗೆ ನೀಡಿರುವುದು ಸರಿಯಲ್ಲ’ ಎಂದು ಭಾಸ್ಕರ ಅವರು ಹೇಳಿದ್ದಾರೆ.
*
ಒತ್ತುವರಿ–ನೋಟಿಸ್ ಪ್ರಕ್ರಿಯೆ ಪೂರ್ಣ
ಬೆಂಗಳೂರಿನ ಗಿರಿನಗರದಲ್ಲಿರುವ  ರಾಮಚಂದ್ರಾಪುರ ಶಾಖಾ ಮಠವು ಬನಶಂಕರಿ ಮೂರನೇ ಹಂತದ ವಿಶ್ವಭಾರತಿ ಗೃಹ ನಿರ್ಮಾಣ ಸಹಕಾರ ಸಂಘದ 1ನೇ ಹಂತದ ಬಡಾವಣೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಸೇರಿದ ಉದ್ಯಾನವನದ ಜಾಗವನ್ನು ಅತಿಕ್ರಮಿಸಿದೆ ಎಂಬ ರಿಟ್‌ ಅರ್ಜಿಗೆ ಸಂಬಂಧಿಸಿದಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್‌ ಜಾರಿಯಾಗಿದೆ.

ಈ ಸಂಬಂಧ ಕರಣಂ ಪವನ ಪ್ರಸಾದ್ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ವಿಭಾಗೀಯ ಪೀಠವು ಶುಕ್ರವಾರ ವಿಚಾರಣೆ ನಡೆಸಿತು. ಪ್ರಕರಣದಲ್ಲಿ ರಾಘವೇಶ್ವರ ಶ್ರೀಗಳು, ಬಿಬಿಎಂಪಿ ಆಯುಕ್ತರು, ಬೆಂಗಳೂರು ಮೆಟ್ರೊಪಾಲಿಟನ್‌ ಕಾರ್ಯಪಡೆ ಆಯುಕ್ತ ಪ್ರತಿವಾದಿಗಳಾಗಿದ್ದಾರೆ.
*
ಆರ್‌ಎಸ್‌ಎಸ್‌ ತಟಸ್ಥ ನಿಲುವು
ಬೆಂಗಳೂರು:
‘ರಾಘವೇಶ್ವರ ಸ್ವಾಮೀಜಿ ಮತ್ತು ಪ್ರೇಮಲತಾ ಇಬ್ಬರ ನಡುವೆ ಅನೈತಿಕ ಸಂಬಂಧದ ಬಗ್ಗೆ ಸೆಷನ್‌ ನ್ಯಾಯಾಲಯ ಸ್ಪಷ್ಟಪಡಿಸಿದೆ. ಆದರೆ ಅತ್ಯಾಚಾರ ಹೌದೇ ಅಲ್ಲವೇ ಎನ್ನುವುದನ್ನು ಹೇಳಿಲ್ಲ. ಆ ಗೊಂದಲ ಉಳಿದಿದೆ. ಆರ್ಎಸ್‌ಎಸ್‌ ಏನು ಹೇಳಲು ಆಗುವುದಿಲ್ಲ’ ಎಂದು ಆರ್ಎಸ್‌ಎಸ್ ದಕ್ಷಿಣ ಮಧ್ಯಕ್ಷೇತ್ರದ ಸಂಘಚಾಲಕ ವಿ. ನಾಗರಾಜ್ ತಿಳಿಸಿದರು. 

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒಟ್ಟಿನಲ್ಲಿ ರಾಮಚಂದ್ರಾಪುರ ಮಠದ ವಿವಾದ ಬಗ್ಗೆ ನಮ್ಮದು ತಟಸ್ಥ ನಿಲವು. ಮಠದ ಬಗ್ಗೆ ಗೌರವ ಇದೆ. ಆದರೆ ಮಠದಲ್ಲಿರುವ ಸ್ವಾಮೀಜಿ ತಪ್ಪು ಮಾಡಿದ್ದರೆ, ಆ ಬಗ್ಗೆ ಕೋರ್ಟ್ ತೀರ್ಪು ನೀಡುತ್ತದೆ’ ಎಂದರು. 

‘ಅಲ್ಲಿರುವ ಮಠದ ಭಕ್ತರು, ಹವ್ಯಕ ಸಮಾಜ ಅದನ್ನು ಯೋಚಿಸಬೇಕು. ಅದು ಸ್ವಾಮೀಜಿ ವೈಯಕ್ತಿಕ ವಿಚಾರ. ಸಿಐಡಿ ಎಲ್ಲ ಸಾಕ್ಷ್ಯಗಳನ್ನು ಒದಗಿಸಿದ್ದೇವೆ ಎಂದು ಪ್ರಕರಣವನ್ನು ಹೈಕೋರ್ಟ್‌ಗೆ  ತೆಗೆದುಕೊಂಡು ಹೋಗಿದ್ದಾರೆ. ಕೋರ್ಟ್‌ ತೀರ್ಪು ಬರುವವರೆಗೆ ನಾವು ಏನೂ ಹೇಳಲು ಸಾಧ್ಯವಿಲ್ಲ’ ಎಂದು ನಾಗರಾಜ್ ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.