ADVERTISEMENT

ರಾಮಾನುಜಾಚಾರ್ಯರ ಸಹಸ್ರಮಾನೋತ್ಸವ ಕಡೆಗಣನೆ

ವಿಪ್ರರಿಗೆ ಮಾಡಿದ ಅವಮಾನ: ಯದುಗಿರಿ ಯತಿರಾಜ ಮಠದ ಯತಿರಾಜ ನಾರಾಯಣ ಜೀಯರ್‌ ಬೇಸರ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2018, 19:30 IST
Last Updated 25 ಫೆಬ್ರುವರಿ 2018, 19:30 IST
ಸಮಾವೇಶದ ಪ್ರಯುಕ್ತ ಬಸವನಗುಡಿ ದೊಡ್ಡ ಗಣಪತಿ ದೇವಸ್ಥಾನದಿಂದ ನ್ಯಾಷನಲ್‌ ಕಾಲೇಜು ಮೈದಾನದವರೆಗೆ ಶೋಭಾಯಾತ್ರೆ ನಡೆಯಿತು –ಪ್ರಜಾವಾಣಿ ಚಿತ್ರ
ಸಮಾವೇಶದ ಪ್ರಯುಕ್ತ ಬಸವನಗುಡಿ ದೊಡ್ಡ ಗಣಪತಿ ದೇವಸ್ಥಾನದಿಂದ ನ್ಯಾಷನಲ್‌ ಕಾಲೇಜು ಮೈದಾನದವರೆಗೆ ಶೋಭಾಯಾತ್ರೆ ನಡೆಯಿತು –ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಮಾನುಜಾಚಾರ್ಯರ ಸಹಸ್ರಮಾನೋತ್ಸವವನ್ನು ರಾಜ್ಯ ಸರ್ಕಾರದ ವತಿಯಿಂದ ಆಚರಿಸಲಿಲ್ಲ. ಇದು ವಿಪ್ರ ಸಮಾಜಕ್ಕೆ ಮಾಡಿದ ಅವಮಾನ ಎಂದು ಮೇಲುಕೋಟೆಯ ಯದುಗಿರಿ ಯತಿರಾಜ ಮಠದ ಯತಿರಾಜ ನಾರಾಯಣ ಜೀಯರ್‌ ಬೇಸರ ವ್ಯಕ್ತಪಡಿಸಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ನಗರದಲ್ಲಿ ಹಮ್ಮಿಕೊಂಡಿದ್ದ ‘ವಿಪ್ರರ ಸಮಾವೇಶ’ದಲ್ಲಿ ಅವರು ಭಾನುವಾರ ಮಾತನಾಡಿದರು.

‘ರಾಮಾನುಜಾಚಾರ್ಯರು ಈ ನಾಡಿನಲ್ಲಿ 36 ವರ್ಷ ಓಡಾಡಿದ್ದರು. ಆಗ ಭಕ್ತಿಯ ಯುಗ ಆರಂಭವಾಗಿತ್ತು. ಅವರ ಸಹಸ್ರಮಾನೋತ್ಸವ ಆಚರಣೆ ಮಾಡುವಂತೆ ಮುಖ್ಯಮಂತ್ರಿಯನ್ನು ಕೋರಿದ್ದೆವು’ ಎಂದರು.

ADVERTISEMENT

ಸಮಾಜವಾದ, ಅಹಿಂದ, ಅಸ್ಪೃಶ್ಯತೆ ನಿವಾರಣೆಯ ಬಗ್ಗೆ ಸರ್ಕಾರ ನಡೆಸುತ್ತಿರುವವರು ಈಗ ಮಾತನಾಡುತ್ತಾರೆ. ಆದರೆ, ರಾಮಾನುಜಾಚಾರ್ಯರು 950 ವರ್ಷಗಳ ಹಿಂದೆಯೇ ಇದನ್ನು ಕಾರ್ಯಗತಗೊಳಿಸಿದ್ದರು. ಎಲ್ಲ ವರ್ಗದವರನ್ನೂ ದೇವಸ್ಥಾನಕ್ಕೆ ಕರೆದೊಯ್ದಿದ್ದರು. ತೊಂಡನೂರಿನಲ್ಲಿ ಕೆರೆಯನ್ನು ನಿರ್ಮಿಸಿದ್ದರು ಎಂದು ತಿಳಿಸಿದರು.

‘ಬ್ರಾಹ್ಮಣರು ಸ್ವಾರ್ಥಿಗಳು ಎಂದು ಕೆಲವರು ಟೀಕಿಸುತ್ತಾರೆ. ಶಂಕರಾಚಾರ್ಯ, ರಾಮಾನುಜಾಚಾರ್ಯ, ಮಧ್ವಾಚಾರ್ಯರು ಸ್ವಾರ್ಥಿಗಳೇ? ಶಂಕರರು ಕಾಶ್ಮೀರದಿಂದ ಶಾರದೆಯನ್ನು ಶೃಂಗೇರಿಗೆ ತಂದು ಪ್ರತಿಷ್ಠಾಪಿಸಿದರು. ನಾಲ್ಕು ಪೀಠಗಳನ್ನು ಸ್ಥಾಪಿಸಿ, ನಾಲ್ಕು ವೇದಗಳನ್ನು ಪ್ರಚಾರ ಮಾಡಿದ್ದರು. ಆಚಾರ್ಯತ್ರಯರು ಮನುಕುಲಕ್ಕೆ ಧ್ಯೇಯವನ್ನು ನೀಡಿದವರು. ಇವರು ಯಾರೂ ರಾಜರ ಆಶ್ರಯ ಪಡೆದವರಲ್ಲ. ಭಕ್ತರ ಸಹಕಾರ ಪಡೆದವರು. ಹೀಗಾಗಿ, ಸಹಸ್ರಮಾನೋತ್ಸವವನ್ನು ಸರ್ಕಾರ ಆಚರಿಸದಿದ್ದರೂ ನಮಗೆ ಚಿಂತೆ ಇಲ್ಲ’ ಎಂದು ಹೇಳಿದರು.

ವಿಪ್ರರಿಗೆ ಇಂದು ಆತಂಕದ ಕ್ಷಣಗಳು ಎದುರಾಗಿವೆ. ಅವರ ಮೇಲೆ ನಿರಂತರವಾಗಿ ದಾಳಿಗಳು ನಡೆಯುತ್ತಿವೆ. ರಾಮ, ಕೃಷ್ಣರ ಬಗ್ಗೆ ಕೆಲವರು ತುಚ್ಛವಾಗಿ ಮಾತನಾಡುತ್ತಿದ್ದಾರೆ. ತ್ರೇತಾಯುಗದಿಂದ ಹಿಡಿದು ಕಲಿಯುಗದವರೆಗೂ ಇಂತಹ ರಾಕ್ಷಸರು ಇದ್ದಾರೆ. ಮುಂದೆಯೂ ಇರುತ್ತಾರೆ. ಇದರ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ಸಂಘಟಿತರಾಗಿ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.

‘ಮಠಗಳನ್ನು ಬಿಟ್ಟುಕೊಡಲು ಸಿದ್ಧ’

‘ಮಠಗಳನ್ನು ಸುಪರ್ದಿಗೆ ತೆಗೆದುಕೊಳ್ಳಲು ಸರ್ಕಾರವು ಪ್ರಕಟಣೆ ಹೊರಡಿಸಿತ್ತು. ಮಠಗಳನ್ನು ಬಿಟ್ಟುಕೊಡಲು ಸಿದ್ಧರಿದ್ದೇವೆ. ಮರದ ಕೆಳಗೆ ಕುಳಿತರೂ ಭಕ್ತರು ಬರುತ್ತಾರೆ’ ಎಂದು ಯತಿರಾಜ ನಾರಾಯಣ ಜೀಯರ್‌ ಹೇಳಿದರು.

ಬ್ರಾಹ್ಮಣ ಸಮಾಜದ ಯಾವ ಯತಿಯೂ ಹಣಕ್ಕಾಗಿ ಮಠಗಳಿಗೆ ಬಂದಿಲ್ಲ. ಭಕ್ತರು ಮತ್ತು ದೇವರ ನಡುವೆ ಅವರು ನಂಟು ಬೆಸೆಯುತ್ತಾರೆ ಎಂದರು.

‘ಹಿಂದುಳಿದ ವಿಪ್ರರಿಗಾಗಿ ಶ್ರೀನಿಧಿ’

ಹಿಂದುಳಿದಿರುವ ವಿಪ್ರರಿಗೆ ಆರ್ಥಿಕ ಸಹಾಯ ಮಾಡುವ ಉದ್ದೇಶದಿಂದ ‘ಶ್ರೀನಿಧಿ’ ಸ್ಥಾಪನೆ ಮಾಡಲಾಗಿದೆ. ಈಗಾಗಲೇ ₹5 ಲಕ್ಷ ಸಂಗ್ರಹವಾಗಿದೆ. ವಿವಾಹಕ್ಕೆ ಆರ್ಥಿಕ ನೆರವು, ವೈದ್ಯಕೀಯ ಚಿಕಿತ್ಸೆಗೆ ನೆರವು, ವಿದ್ಯಾರ್ಥಿವೇತನ ನೀಡಲು ಇದನ್ನು ಬಳಸುವ ಉದ್ದೇಶವಿದೆ. ಯತಿರಾಜ ಮಠದ ಕಲ್ಯಾಣ ಮಂಟಪವನ್ನು ಬಡ ಬ್ರಾಹ್ಮಣರ ಮಕ್ಕಳ ವಿವಾಹಕ್ಕಾಗಿ ಉಚಿತವಾಗಿ ನೀಡಲಾಗುತ್ತದೆ ಎಂದು ಯತಿರಾಜ ನಾರಾಯಣ ಜೀಯರ್‌ ತಿಳಿಸಿದರು.

* ವಿಪ್ರ ಎಂದರೆ ವಿವೇಕಿಗಳು ಹಾಗೂ ಪ್ರಜ್ಞಾವಂತರು ಎಂದರ್ಥ. ವಿಪ್ರರು ಸ್ವಾರ್ಥಕ್ಕಾಗಿ ಪೂಜಾ ಕೈಂಕರ್ಯ ಮಾಡುವುದಿಲ್ಲ. ಎಲ್ಲರ ಹಿತವನ್ನು ಬಯಸುತ್ತಾರೆ.
–ಕೆ.ಜಿ.ಸುಬ್ರಾಯ ಶರ್ಮ, ವೇದ ವಿದ್ವಾಂಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.