ADVERTISEMENT

ರಾಷ್ಟ್ರಕವಿ ಪ್ರಶಸ್ತಿಯೇ ನಾನ್‌ಸೆನ್ಸ್‌: ಕುಂ.ವೀರಭದ್ರಪ್ಪ

​ಪ್ರಜಾವಾಣಿ ವಾರ್ತೆ
Published 3 ಮೇ 2015, 19:30 IST
Last Updated 3 ಮೇ 2015, 19:30 IST

ದಾವಣಗೆರೆ: ರಾಷ್ಟ್ರಕವಿ ಪ್ರಶಸ್ತಿಯೇ ಒಂದು ನಾನ್ ಸೆನ್ಸ್. ಈ ಹಿಂದೆ ರಾಜ – ಮಹಾರಾಜರ ಕಾಲದಲ್ಲಿ ಬೇಕಾದವರಿಗೆ ನೀಡುತ್ತಿದ್ದ ಪ್ರಶಸ್ತಿ ಇದು ಎಂದು ಸಾಹಿತಿ ಕುಂ.ವೀರಭದ್ರಪ್ಪ ಲೇವಡಿ ಮಾಡಿದ್ದಾರೆ.

ದಾವಣಗೆರೆಯಲ್ಲಿ ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ನಡೆದ ಸಾಹಿತಿ ಬಾ.ಮ.ಬಸವರಾಜಯ್ಯ ಅವರ ‘ಬಯಲುಸೀಮೆ ಬೆಂಕಿ ಬೆಳಕು’ ಹಾಗೂ ಚಂದ್ರಶೇಖರ ತಾಳ್ಯ ಅವರ ‘ಗಾಂಧಿ ಹೋದರು’ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಕನ್ನಡದಲ್ಲಿ ಬರೆಯುವ ಎಲ್ಲ ಲೇಖಕರಿಗೂ ರಾಷ್ಟ್ರಕವಿ ಪ್ರಶಸ್ತಿ ನೀಡಬೇಕು ಎಂದು ಅಭಿಪ್ರಾಯಪಟ್ಟರು.

ಸಾರ್ವಜನಿಕ ಗ್ರಂಥಾಲಯಗಳು 2011ರಿಂದ ಪುಸ್ತಕಗಳನ್ನು ಖರೀದಿಸುತ್ತಿಲ್ಲ. ಇದೊಂದು ದೊಡ್ಡ ದುರಂತ. ಸರ್ಕಾರ ಪುಸ್ತಕ ಓದುವ ಸಂಸ್ಕೃತಿಗೆ ಮಾರಕವಾಗಿ ನಡೆದುಕೊಳ್ಳುತ್ತಿದೆ. ಈ ಪುಸ್ತಕ ವಿರೋಧಿ ನೀತಿಯನ್ನು ಖಂಡಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಶ್ವ ಮಟ್ಟದಲ್ಲಿ ಪ್ರಭಾವ ಬೀರಿದ ಮಹಾತ್ಮ ಗಾಂಧಿ ಅವರ ವಿಚಾರಧಾರೆ ವರ್ತಮಾನದಲ್ಲಿ ನೇಪಥ್ಯಕ್ಕೆ ಸರಿಯುತ್ತಿದ್ದು, ಪ್ರಾಥಮಿಕ ಶಾಲೆ ಹಂತದಿಂದ ಹಿಡಿದು ಸ್ನಾತಕೋತ್ತರ ಹಂತದವರೆಗೂ ಗಾಂಧೀಜಿ ಕುರಿತು ಪಠ್ಯವನ್ನು ರೂಪಿಸಬೇಕು. ಎಲ್ಲೆಡೆ ಗಾಂಧಿ ಅಧ್ಯಯನ ಪೀಠಗಳು ಸ್ಥಾಪನೆಯಾಗಬೇಕು ಎಂದು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.