ADVERTISEMENT

ರಾಹುಲ್‌ ಗಾಂಧಿಗೆ ಕಾದಿರುವ ಜೋಳದ ರೊಟ್ಟಿ, ಹುಗ್ಗಿ ಊಟ

ಹರ್ಷವರ್ಧನ ಪಿ.ಆರ್.
Published 8 ಅಕ್ಟೋಬರ್ 2015, 20:09 IST
Last Updated 8 ಅಕ್ಟೋಬರ್ 2015, 20:09 IST

ಹಾವೇರಿ: ‘ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಎಳ್ಳು ಹಚ್ಚಿದ ರೊಟ್ಟಿ, (ಖಡಕ್‌ ಹಾಗೂ ಸಾದಾ), ಎಳ್ಳು ಹೋಳಿಗೆ, ಕೆಂಪು ಚಟ್ನಿ, ಗುರೆಳ್ಳು ಚಟ್ನಿ, ಎಣ್ಣೆಗಾಯಿ (ಬದನೆಕಾಯಿ), ಬಿರಂಜಿ (ಬಿರಿಯಾನಿ ಮಾದರಿ ಅನ್ನ), ಹಸೆಕಡ್ಲೆಹಿಟ್ಟಿನ ಪಲ್ಯ, ದೊಣ್ಣೆಗಾಯಿ ಪಲ್ಯ, ಕರ್ಜಿಕಾಯಿ, ಗೋಧಿ ಹುಗ್ಗಿ, ಮೊಳಕೆ ಬಂದ ಹೆಸರು ಕಾಳು ಪಲ್ಯ, ಮಡಕೆ ಕಾಳು ಪಲ್ಯ, ಶೇಂಗಾ ಚಟ್ನಿ, ಅಗಸಿ ಚಟ್ನಿ, ಕೋಸಂಬರಿ, ಕಾಯಿ ಚಟ್ನಿ, ಮೊಸರು ಬುತ್ತಿ, ಸಾಸಿವೆ ಬುತ್ತಿ, ಅನ್ನಸಾರು, ಮಜ್ಜಿಗೆ, ತಿಳಿಸಾರು, ಚಪಾತಿ, ವಿಶೇಷವಾಗಿ ಪುಂಡಿ ಸೊಪ್ಪಿನ ಪಲ್ಯ...

ಇದು ಅಕ್ಟೋಬರ್ 10ರಂದು ಜಿಲ್ಲೆಗೆ ಬರುವ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ಮಧ್ಯಾಹ್ನ ಭೋಜನದ ವಿಶೇಷ. ಶಾಸಕ ಕೆ.ಬಿ. ಕೋಳಿವಾಡ ಅವರ ಮೂಲ ಮನೆಯಲ್ಲಿ ರಾಹುಲ್‌ ಗಾಂಧಿಗೆ ‘ಉತ್ತರ ಕರ್ನಾಟಕದ ಶುದ್ಧ ಸಸ್ಯಾಹಾರಿ’ ಭೋಜನದ ವ್ಯವಸ್ಥೆಯನ್ನು ಉಣಬಡಿಸಲಾಗುತ್ತದೆ. ಭೋಜನಕ್ಕೆ ದೇಸಿ ಶೈಲಿಯ ವಾತಾವರಣ, ಸಾಂಪ್ರದಾಯಿಕ ಸ್ವಾಗತ, ಉತ್ತರ ಕರ್ನಾಟಕದ ಊಟ ನೀಡಲು ಶಾಸಕರ ಪುತ್ರ, ಪ್ರಕಾಶ್‌ ಕೋಳಿವಾಡ ನೇತೃತ್ವದಲ್ಲಿ ಸಿದ್ಧತೆ ನಡೆದಿದೆ.

ಈ ಭಾಗದ ಖ್ಯಾತ ಬಾಣಸಿಗರಾದ ರಾಣೆಬೆನ್ನೂರಿನ ಅರೆಮಲ್ಲಾಪುರದ ವಾಗೀಶ ಗುತ್ತಲಮಠ ಹಾಗೂ ತಂಡವು ಈಗಾಗಲೇ ಅಡುಗೆ ತಯಾರಿ ನಡೆಸಿದೆ. ಆದರೆ, ಎಸ್‌ಪಿಜಿ ಹಾಗೂ ರಾಹುಲ್‌ ಆಪ್ತ ತಂಡದ ಸೂಚನೆಗಳಿಗೆ ಅನುಗುಣವಾಗಿ ಊಟ ವ್ಯವಸ್ಥೆ ಮಾಡಬೇಕಾಗಿದೆ.

ಉಡುಗೆ: ಗುಡಗೂರ ಹಾಗೂ ಚನ್ನಾಪುರ ತಾಂಡಾಗಳಿಗೆ ಭೇಟಿ ನೀಡುವ ವೇಳೆಯಲ್ಲಿ ಲಂಬಾಣಿ (ಬಂಜಾರ) ಮಹಿಳೆಯರು ಸಾಂಪ್ರದಾಯಿಕ ಸ್ವಾಗತ ಮಾಡಲಿದ್ದಾರೆ. ಅಲ್ಲದೇ, ತಾವೇ ಕಸೂತಿ ಮಾಡಿದ ಬಂಜಾರ ಶೈಲಿಯ ಉಡುಗೆಯನ್ನು ನೀಡಲು ನಿರ್ಧರಿಸಿದ್ದಾರೆ.

ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ
ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಶುಕ್ರವಾರ ಹಾಗೂ ಶನಿವಾರ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಪಾದಯಾತ್ರೆ  ನಡೆಸಲಿರುವ ಅವರು, ಆತ್ಮಹತ್ಯೆ ಮಾಡಿಕೊಂಡ  ಮಂಡ್ಯ ಹಾಗೂ ರಾಣೆಬೆನ್ನೂರಿನ ರೈತ ಕುಟುಂಬಗಳನ್ನೂ ಭೇಟಿ ಮಾಡಲಿದ್ದಾರೆ. ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಸಮ್ಮೇಳನದಲ್ಲೂ ಭಾಗವಹಿಸಲಿದ್ದಾರೆ. ಅಂಬೇಡ್ಕರ್‌ ಅವರ 125ನೇ ಜನ್ಮದಿನಾಚರಣೆ ಪೂರ್ವ ಸಿದ್ಧತೆ ಕುರಿತು ಸಭೆ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.