ADVERTISEMENT

ರೇಷ್ಮೆ ಬೆಳೆಗಾರರಿಂದ ಬೆಂಗಳೂರು–ಮೈಸೂರು ಹೆದ್ದಾರಿ ತಡೆ

ಕೈಕೊಟ್ಟ ವೈಫೈ: ಹರಾಜು ಪ್ರಕ್ರಿಯೆ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 30 ಮೇ 2016, 10:38 IST
Last Updated 30 ಮೇ 2016, 10:38 IST
ರಾಮನಗರದ ಐಜೂರು ವೃತ್ತದಲ್ಲಿ ರೇಷ್ಮೆ ಬೆಳೆಗಾರರು ಸೋಮವಾರ ಹೆದ್ದಾರಿ ತಡೆ ನಡೆಸಿದರು
ರಾಮನಗರದ ಐಜೂರು ವೃತ್ತದಲ್ಲಿ ರೇಷ್ಮೆ ಬೆಳೆಗಾರರು ಸೋಮವಾರ ಹೆದ್ದಾರಿ ತಡೆ ನಡೆಸಿದರು   

ರಾಮನಗರ: ವೈ–ಫೈ ವ್ಯವಸ್ಥೆಯಲ್ಲಿನ ಸಮಸ್ಯೆಯಿಂದಾಗಿ ಆನ್‌ಲೈನ್‌ ಹರಾಜು ಸ್ಥಗಿತಗೊಂಡಿದ್ದಕ್ಕೆ ಕೋಪಗೊಂಡ ರೇಷ್ಮೆ ಬೆಳೆಗಾರರು ಸೋಮವಾರ ಸುಮಾರು ಎರಡೂವರೆ ತಾಸು ಕಾಲ ಬೆಂಗಳೂರು–ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಮಧ್ಯಾಹ್ನ ಮತ್ತೆ ಹರಾಜು ಪ್ರಾರಂಭವಾಗದ ಕಾರಣ ರೈತರು ಪ್ರತಿಭಟನೆ ಮುಂದುವರಿಸಿದ್ದಾರೆ.

ಇಲ್ಲಿನ ರೇಷ್ಮೆ ಮಾರುಕಟ್ಟೆಯಲ್ಲಿ ಬೆಳಿಗ್ಗೆ 11ರ ಸುಮಾರಿಗೆ ಹರಾಜು ಪ್ರಕ್ರಿಯೆ ಆರಂಭಗೊಂಡಿತು. ಈ ಸಂದರ್ಭ ಅಂತರ್ಜಾಲ ಸಂಪರ್ಕ ಕೈಕೊಟ್ಟ ಕಾರಣ ಹರಾಜು ಅಲ್ಲಿಗೆ ನಿಂತಿತು. ಮುಕ್ತ ಹರಾಜಿಗೆ ಅವಕಾಶ ಮಾಡಿಕೊಡಲಾಗುವುದು ಇಲ್ಲವೇ ನಾಳೆ ಹರಾಜು ಮುಂದುವರಿಸುವುದಾಗಿ ಮಾರುಕಟ್ಟೆ ಅಧಿಕಾರಿಗಳು ರೈತರಿಗೆ ತಿಳಿಸಿದರು.

ಆದರೆ ಇದಕ್ಕೆ ಒಪ್ಪದ ಬೆಳೆಗಾರರು ವೈಫೈ ವ್ಯವಸ್ಥೆಯನ್ನು ಕೂಡಲೇ ಸರಿಪಡಿಸಿ ಹರಾಜು ಮುಂದುವರಿಸಬೇಕು ಎಂದು ಆಗ್ರಹಿಸಿದರು. ತಾವು ತಂದಿದ್ದ ಗೂಡುಗಳನ್ನು ರಸ್ತೆಗೆ ಚೆಲ್ಲಿ, ಅಲ್ಲಿಯೇ ಧರಣಿ ಕುಳಿತರು.

ಐಜೂರು ವೃತ್ತದಲ್ಲಿ ರೈತರು ಹೆದ್ದಾರಿ ತಡೆದ ಕಾರಣ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ಸುಮಾರು ಎರಡೂವರೆ ತಾಸು ಕಾಲ ಪ್ರತಿಭಟನೆ ಮುಂದುವರಿದಿತ್ತು. ಮಧ್ಯಾಹ್ನ 1.45ರ ಸುಮಾರಿಗೆ ಸ್ಥಳಕ್ಕೆ ಧಾವಿಸಿದ ಡಿಸಿಪಿ ಲಕ್ಷ್ಮಿಗಣೇಶ್, ಮಧ್ಯಾಹ್ನ 2ರ ನಂತರ ಆನ್‌ಲೈನ್‌ ಹರಾಜು ವ್ಯವಸ್ಥೆಗೆ ಅವಕಾಶ ಕಲ್ಪಿಸುವುದಾಗಿ ರೈತರ ಮನವೊಲಿಸಿದರು. ಹೀಗಾಗಿ ಬೆಳೆಗಾರರು ರಸ್ತೆ ತೆರವುಗೊಳಿಸಿ ಮಾರುಕಟ್ಟೆಯತ್ತ ಹೆಜ್ಜೆ ಹಾಕಿದರು.

ಪ್ರತಿಭಟನೆಯಿಂದಾಗಿ ನೂರಾರು ಪ್ರಯಾಣಿಕರು ಪರದಾಡುವಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT