ADVERTISEMENT

ರೈಲು ದುರಂತ ತಪ್ಪಿಸಿದ ಬಾಲಕ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2015, 20:34 IST
Last Updated 15 ಮಾರ್ಚ್ 2015, 20:34 IST
ದಾವಣಗೆರೆಯ ಡಿಸಿಎಂ ಟೌನ್‌ಶಿಪ್‌ ಬಳಿ ಹಾದುಹೋಗಿರುವ ರೈಲು ಮಾರ್ಗದಲ್ಲಿ ಹಳಿಯೊಂದು ಬಿರುಕು ಬಿಟ್ಟಿರುವುದನ್ನು ತೋರಿಸುತ್ತಿರುವ ಬಾಲಕ ಸಿದ್ದೇಶ್‌ ಚಿತ್ರ: ಅನೂಪ್‌ ತಿಪ್ಪೇಸ್ವಾಮಿ
ದಾವಣಗೆರೆಯ ಡಿಸಿಎಂ ಟೌನ್‌ಶಿಪ್‌ ಬಳಿ ಹಾದುಹೋಗಿರುವ ರೈಲು ಮಾರ್ಗದಲ್ಲಿ ಹಳಿಯೊಂದು ಬಿರುಕು ಬಿಟ್ಟಿರುವುದನ್ನು ತೋರಿಸುತ್ತಿರುವ ಬಾಲಕ ಸಿದ್ದೇಶ್‌ ಚಿತ್ರ: ಅನೂಪ್‌ ತಿಪ್ಪೇಸ್ವಾಮಿ   

ದಾವಣಗೆರೆ: ಸಂಭವನೀಯ ರೈಲು ಅಪಘಾತವೊಂದು ಬಾಲಕನೊಬ್ಬನ ಸಮಯಪ್ರಜ್ಞೆಯಿಂದಾಗಿ ತಪ್ಪಿದ ಘಟನೆ ನಗರದ ಡಿಸಿಎಂ ಟೌನ್‌ಶಿಪ್‌ ಬಳಿ ಭಾನುವಾರ ನಡೆದಿದೆ.

ಆವರೆಗೆರೆ ಶಾಲೆಯ 4ನೇ ತರಗತಿಯ ವಿದ್ಯಾರ್ಥಿ ಸಿದ್ದೇಶ್‌ ಈ ಬಾಲಕ.  ಟೌನ್‌ಶಿಪ್‌ ಬಳಿ ರೈಲು ಹಳಿ ಬಿರುಕು ಬಿಟ್ಟಿರುವುದನ್ನು ಗಮನಿಸಿದ ಈತ ಹರಿಹರ– ಚಿತ್ರದುರ್ಗ ಪ್ಯಾಸೆಂಜರ್ ರೈಲು ಅತ್ತ ಬರುತ್ತಿದ್ದಂತೆ, ಧರಿಸಿದ್ದ ಕೆಂಪು ಟೀಶರ್ಟ್‌ ಬಿಚ್ಚಿ ಸಿಗ್ನಲ್‌ ರೀತಿಯಲ್ಲಿ ಎಂಜಿನ್‌ ಮುಂದೆ ತೋರಿಸಿದ್ದಾನೆ. ಬೆಳಿಗ್ಗೆ 7 ಗಂಟೆ ಸುಮಾರಿಗೆ ರೈಲು ನಿಲುಗಡೆಯಾಗಿದೆ.

ತಂದೆಯೊಂದಿಗೆ ರೈಲು ಹಳಿ ದಾಟಿ ತೆರಳುತ್ತಿರುವಾಗ ವೆಲ್ಡಿಂಗ್‌ ಮಾಡಿದ್ದ ಹಳಿ ಬಿರುಕು ಬಿಟ್ಟಿರುವುದನ್ನು 9 ವರ್ಷದ ಸಿದ್ದೇಶ್‌ ಗಮನಿಸಿದ್ದಾನೆ.
‘ದೂರದಲ್ಲಿ ರೈಲು ಬರುತ್ತಿದ್ದು, ಹಳಿಯಿಂದ ಶಬ್ದ ಬರುತ್ತಿತ್ತು. ನನ್ನ ಮಗ ಸ್ವಲ್ಪ ದೂರ ಓಡಿ ಹೋಗಿ ರೈಲು ನಿಲ್ಲಿಸಿದ. ಘಟನೆಯಿಂದಾಗಿ  ರೈಲು ಸುಮಾರು 20 ನಿಮಿಷ ಸ್ಥಳದಲ್ಲಿಯೇ ನಿಂತಿತ್ತು’ ಎಂದು ಬಾಲಕನ ತಂದೆ ಮಂಜುನಾಥ ‘ಪ್ರಜಾವಾಣಿ’ಗೆ ತಿಳಿಸಿದರು.

ರೈಲ್ವೆ ಎಂಜಿನಿಯರ್‌ಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಹಳಿಯನ್ನು ಸರಿಪಡಿಸಿ ರೈಲು ಚಲಿಸಲು ಅನುಕೂಲ ಮಾಡಿಕೊಟ್ಟರು. ನಂತರ, ಬಿರುಕುಬಿಟ್ಟ ಜಾಗದಲ್ಲಿ ಕಂಬಿ ಬದಲಾಯಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.