ADVERTISEMENT

ಲಿಂಗಾಯತ ಪ್ರತ್ಯೇಕ ಧರ್ಮ ಘೋಷಣೆ : ಐವರು ಸಚಿವರಿಂದ ರಾಜ್ಯ ಪ್ರವಾಸ

ವೀರಶೈವ ಲಿಂಗಾಯತ ಮಠಾಧೀಶರು, ಮುಖಂಡರಿಂದ ಅಭಿಪ್ರಾಯ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 24 ಜುಲೈ 2017, 19:34 IST
Last Updated 24 ಜುಲೈ 2017, 19:34 IST
-ಸಾಂದರ್ಭಿಕ ಚಿತ್ರ
-ಸಾಂದರ್ಭಿಕ ಚಿತ್ರ   

ಬೆಂಗಳೂರು: ವೀರಶೈವ– ಲಿಂಗಾಯತ ಸಮುದಾಯವನ್ನು ಪ್ರತ್ಯೇಕ ಧರ್ಮವೆಂದು ಘೋಷಿಸುವ ಸಂಬಂಧ ಅಭಿಪ್ರಾಯ ಸಂಗ್ರಹಿಸಲು ಈ ಸಮುದಾಯದ ಐವರು ಸಚಿವರು ಮುಂದಿನ ತಿಂಗಳು ರಾಜ್ಯದಾದ್ಯಂತ ಪ್ರವಾಸ ಮಾಡಲಿದ್ದಾರೆ.

ಸಚಿವರಾದ ಶರಣಪ್ರಕಾಶ ಪಾಟೀಲ, ಎಸ್.ಎಸ್. ಮಲ್ಲಿಕಾರ್ಜುನ, ಈಶ್ವರ ಖಂಡ್ರೆ, ವಿನಯ ಕುಲಕರ್ಣಿ ಮತ್ತು ಬಸವರಾಜ ರಾಯರಡ್ಡಿ ವಿವಿಧ ಭಾಗಗಳ ಮಠಾಧೀಶರು ಹಾಗೂ ಸಮಾಜದ ಮುಖಂಡರನ್ನು ಭೇಟಿ ಮಾಡಲಿದ್ದಾರೆ.

ರಾಯರಡ್ಡಿ ಮಾಧ್ಯಮ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ‘ವೀರಶೈವ– ಲಿಂಗಾಯತ ಸಮುದಾಯ ಪ್ರತ್ಯೇಕ ಧರ್ಮವಾಗಿ ಘೋಷಣೆಯಾದರೆ ಈ ಸಮುದಾಯ ಅಲ್ಪಸಂಖ್ಯಾತ ಸ್ಥಾನಮಾನ ಪಡೆಯಲಿದೆ. ಅದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನಿಸಿದರು.

‘ವೀರಶೈವ– ಲಿಂಗಾಯತರು ಹಿಂದೂ ಧರ್ಮದ ಭಾಗವೇ ಆಗಿದ್ದರೂ, ಹಿಂದುತ್ವದ ಭಾಗ ಅಲ್ಲ. ಹಿಂದೂ ಧರ್ಮವನ್ನು ಯಾರೂ ಸ್ಥಾಪನೆ ಮಾಡಿಲ್ಲ. ಅದೊಂದು ಸಂಸ್ಕೃತಿ. ಸಿಂಧೂನದಿ ತಟದಿಂದ ಬಂದ ಈ ಸಂಸ್ಕೃತಿ ಆಯಾ ಕಾಲಕ್ಕೆ ತಕ್ಕಂತೆ ಬದಲಾವಣೆ ಕಂಡಿದೆ. ಆದರೆ, ಹಿಂದುತ್ವ ಎಂದರೆ ಮನುಸ್ಮೃತಿ, ವರ್ಣಭೇದ ಪ್ರತಿಪಾದಿಸುವುದಾಗಿದೆ’ ಎಂದರು.

‘ಪಟ್ಟಭದ್ರ ಹಿತಾಸಕ್ತಿಗಳಿಂದ ಹಿಂದುತ್ವದ ಹೆಸರಿನಲ್ಲಿ ದಬ್ಬಾಳಿಕೆ, ಜಾತಿ, ಲಿಂಗ ತಾರತಮ್ಯ ನಡೆಯುತ್ತಿದೆ. ಈ ಗೊಂದಲ ಪರಿಹರಿಸಲು ರಾಜ್ಯದಾದ್ಯಂತ ಪ್ರವಾಸ ಮಾಡುತ್ತೇವೆ’ ಎಂದು ಸ್ಪಷ್ಟಪಡಿಸಿದರು.

‘ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಆಗಿದ್ದು, ಪ್ರತ್ಯೇಕ ಧರ್ಮ ಎಂದು ಘೋಷಿಸುವಂತೆ ಮುಖ್ಯಮಂತ್ರಿಗಳ ಮೇಲೆ ವೀರಶೈವ ಮಹಾಸಭಾದ ಮುಖಂಡರು ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿ ಅವರಾಗಿಯೇ ಈ ಮಾತನ್ನು ಎಲ್ಲೂ ಹೇಳಿಲ್ಲ. ಜಾತಿ, ಧರ್ಮದ ಹೆಸರಿನಲ್ಲಿ ಮತ ರಾಜಕೀಯ ಮಾಡಬೇಕಾದ ಅವಶ್ಯಕತೆಯೂ ಅವರಿಗಿಲ್ಲ’ ಎಂದು ರಾಯರಡ್ಡಿ ಹೇಳಿದರು.

‘ವೀರಶೈವ– ಲಿಂಗಾಯತ ಧರ್ಮವೇ ಮಾನವ ಧರ್ಮ. ಈ ಬಗ್ಗೆ ವಿವಾದ ಅನಗತ್ಯ. ನಾವು ಚುನಾವಣಾ ರಾಜಕೀಯ ಮಾಡುತ್ತಿಲ್ಲ. ಲಿಂಗಾಯತರನ್ನು ಒಡೆಯುವ ಕೆಲಸವನ್ನು ಮುಖ್ಯಮಂತ್ರಿ ಮಾಡುತ್ತಿಲ್ಲ’ ಎಂದು ಪ್ರತಿಪಾದಿಸಿದರು.

‘ಹಿಂದುತ್ವಕ್ಕೂ ವೀರಶೈವ  ಸಮುದಾಯಕ್ಕೂ ವ್ಯತ್ಯಾಸಗಳಿವೆ. ವೀರಶೈವರಲ್ಲಿ ಮೂಢನಂಬಿಕೆಗಳಿಲ್ಲ.  ಪ್ರಗತಿಪರ ಚಿಂತಕರು, ವಿಚಾರವಂತರು, ಸಮಪಾಲು- ಸಮಬಾಳು ತತ್ವಕ್ಕೆ ಬದ್ಧರಾದವರು ವೀರಶೈವರು’ ಎಂದರು.

‘ಚುನಾವಣೆ ಹೊಸ್ತಿಲಲ್ಲಿರುವಾಗ ನಿಮಗೆ ಪ್ರತ್ಯೇಕ ಧರ್ಮ ಘೋಷಣೆಯ ವಿಷಯ ನೆನಪಾಯಿತೇ’ ಎಂಬ ಪ್ರಶ್ನೆಗೆ, ‘ಹಾಗೇನೂ ಇಲ್ಲ. ಹಿಂದುತ್ವದ ಹೆಸರಿನಲ್ಲಿ ಬಿಜೆಪಿ ಶೋಷಣೆ ಮಾಡುತ್ತಿದೆ. ಹಿಂದುತ್ವದ ಆಚಾರ, ವಿಚಾರಗಳಿಗೂ ಲಿಂಗಾಯತರ ಆಚಾರ ವಿಚಾರಗಳಿಗೂ ಬಹಳ ವ್ಯತ್ಯಾಸ ಇದೆ’ ಎಂದರು.
*
ಆರ್‌ಎಸ್‌ಎಸ್‌ ಕಚೇರಿಯಲ್ಲಿ ಬಸವಣ್ಣನ ಭಾವಚಿತ್ರ ಹಾಕುತ್ತಾರೆಯೇ? ಯಡಿಯೂರಪ್ಪ ಮೊದಲು ವೀರಶೈವ ತತ್ವ ಕಲಿಯಲಿ.
ಬಸವರಾಜ ರಾಯರಡ್ಡಿ
ಉನ್ನತ ಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT