ADVERTISEMENT

ಲೋಕಾಯುಕ್ತರ ಕೊಲೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2018, 19:30 IST
Last Updated 7 ಮಾರ್ಚ್ 2018, 19:30 IST
ನ್ಯಾ.ಪಿ.ವಿಶ್ವನಾಥ್‌ ಶೆಟ್ಟಿ
ನ್ಯಾ.ಪಿ.ವಿಶ್ವನಾಥ್‌ ಶೆಟ್ಟಿ   

ಬೆಂಗಳೂರು:‌ ಸರ್ಕಾರಿ ಅಧಿಕಾರಿಗಳ ವಿರುದ್ಧ ತಾನು ದಾಖಲಿಸಿದ್ದ ಪ್ರಕರಣಗಳನ್ನು ಮುಕ್ತಾಯಗೊಳಿಸಿದ್ದರಿಂದ ಕುಪಿತಗೊಂಡ ತೇಜ್‌ರಾಜ್‌ ಶರ್ಮಾ (33) ಎಂಬಾತ, ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ್ ಶೆಟ್ಟಿ (74) ಅವರ ಕಚೇರಿಗೇ ನುಗ್ಗಿ ಅವರ ಹೊಟ್ಟೆ ಹಾಗೂ ಎದೆಗೆ ಚಾಕುವಿನಿಂದ ಇರಿದಿದ್ದಾನೆ.

ಬುಧವಾರ ಮಧ್ಯಾಹ್ನ 1.45ರ ಸುಮಾರಿಗೆ ಈ ಘಟನೆ ನಡೆದಿದ್ದು, ಕಚೇರಿ ಸಿಬ್ಬಂದಿ ವಿಶ್ವನಾಥ್ ಶೆಟ್ಟಿ ಅವರನ್ನು ತಕ್ಷಣ ಮಲ್ಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಅಪಾಯದಿಂದ ಪಾರಾಗಿದ್ದಾರೆ.

ಕೃತ್ಯ ಎಸಗಿ ಪರಾರಿಯಾಗಲು ಯತ್ನಿಸಿದ ತುಮಕೂರಿನ ಎಸ್‌.ಎಸ್.ಪುರ ನಿವಾಸಿ ತೇಜ್‌ರಾಜ್‌ನನ್ನು, ಕಾನ್‌ಸ್ಟೆಬಲ್ ಸುಬ್ರಹ್ಮಣ್ಯ ಅವರು ಕಚೇರಿ ಸಿಬ್ಬಂದಿಯ ನೆರವಿನಿಂದ ಹಿಡಿದು ವಿಧಾನಸೌಧ ಠಾಣೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಆರೋಪಿ ಪೀಠೋಪಕರಣ ವ್ಯಾಪಾರಿ.

ADVERTISEMENT

ತುಮಕೂರಿನಲ್ಲಿ ಶಿಕ್ಷಣ, ಕೃಷಿ, ವಾಣಿಜ್ಯ ಹಾಗೂ ಕೈಗಾರಿಕಾ ಇಲಾಖೆಗಳ ಅಧಿಕಾರಿಗಳು ಅವ್ಯವಹಾರಗಳಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಆತ 2017ರ ಮಾರ್ಚ್‌ನಲ್ಲಿ ಲೋಕಾಯುಕ್ತಕ್ಕೆ ಪ್ರತ್ಯೇಕವಾಗಿ ದೂರುಗಳನ್ನು ಸಲ್ಲಿಸಿದ್ದ. ಆ ದೂರುಗಳನ್ನು ಸ್ವೀಕರಿಸಿದ್ದ ಲೋಕಾಯುಕ್ತರು, ವಿಚಾರಣೆ ನಡೆಸಿ ಕ್ರಮ ತೆಗೆದುಕೊಳ್ಳುವಂತೆ ಸಹಾಯಕ ವಿಚಾರಣಾಧಿಕಾರಿ (ಎಆರ್‌ಇ) ಕೆ.ಎಲ್.ಲಲಿತಾ ಅವರಿಗೆ ವರ್ಗಾಯಿಸಿದ್ದರು.

ವಿಚಾರಣೆ ನಡೆಸಿದ ಎಆರ್‌ಇ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಪ್ರಕರಣಗಳನ್ನು ಮುಕ್ತಾಯಗೊಳಿಸಿದ್ದರು. ದೂರು ಇತ್ಯರ್ಥಪಡಿಸಿರುವ ಸಂಬಂಧ, ತೇಜ್‌ರಾಜ್‌ಗೂ ಮಾಹಿತಿ ಕೊಟ್ಟಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಆತ, ‘ನಾನು ಪೂರಕ ದಾಖಲೆಗಳನ್ನು ಸಲ್ಲಿಸಿದ್ದರೂ ಸರಿಯಾಗಿ ತನಿಖೆಯಾಗಿಲ್ಲ. ನನಗೆ ಅನ್ಯಾಯವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದ.

ಮಂಗಳವಾರ ಮಧ್ಯಾಹ್ನ ಸಹ ಎಆರ್‌ಇ ಅವರನ್ನು ಭೇಟಿಯಾಗಿ, ಪ್ರಕರಣಗಳ ಮರುತನಿಖೆಗೆ ಒತ್ತಾಯಿಸಿದ್ದ. ಆಗ ಅವರು, ‘ನಮಗೆ ಆ ಅಧಿಕಾರವಿಲ್ಲ. ಬೇಕಿದ್ದರೆ, ಒಮ್ಮೆ ಲೋಕಾಯುಕ್ತರನ್ನು ಭೇಟಿಯಾಗಿ ಮಾತನಾಡು’ ಎಂದಿದ್ದರು. ಅವರ ಮಾತಿನಂತೆಯೇ ಆರೋಪಿ ಸಂಜೆವರೆಗೆ ಕಚೇರಿಯಲ್ಲೇ ಕಾದರೂ ಲೋಕಾಯುಕ್ತರ ಭೇಟಿ ಸಾಧ್ಯವಾಗಿರಲಿಲ್ಲ.

ಬುಧವಾರ ಮಧ್ಯಾಹ್ನ 12.45ರ ಸುಮಾರಿಗೆ ಚಾಕು ಸಮೇತ ಕಚೇರಿಗೆ ಬಂದಿರುವ ತೇಜ್‌ರಾಜ್, ‘ಎಆರ್‌ಇ–5 ಭೇಟಿಗೆ ಬಂದಿದ್ದೇನೆ’ ಎಂದು ಸಂದರ್ಶಕರ ನೋಂದಣಿ ಪುಸ್ತಕದಲ್ಲಿ ಬರೆದಿದ್ದಾನೆ. ನಂತರ 3ನೇ ಮಹಡಿಗೆ ತೆರಳಿ ಎಆರ್‌ಇ ಜತೆ ಮರುತನಿಖೆ ವಿಚಾರವಾಗಿಯೇ ಅರ್ಧ ತಾಸು ಮಾತನಾಡಿದ್ದಾನೆ. ಆಗಲೂ ಅವರು, ‘ನಿಮ್ಮ ಆರೋಪಗಳನ್ನು ಸಾಬೀತುಪಡಿಸುವಂಥ ಸಾಕ್ಷ್ಯಗಳಿಲ್ಲ’ ಎಂದು ಹೇಳಿ ಕಳುಹಿಸಿದ್ದಾರೆ. ಸ್ವಲ್ಪ ಸಮಯದ ನಂತರ 2ನೇ ಮಹಡಿಯ ಲೋಕಾಯುಕ್ತರ ಕಚೇರಿ ಬಳಿ ಬಂದಿದ್ದಾನೆ.

ಆ ಮೂರು ನಿಮಿಷ..

ಲೋಕಾಯುಕ್ತರ ಕಚೇರಿ ಸಹಾಯಕ ಪಳನಿಸ್ವಾಮಿ ಅವರನ್ನು ಮೊದಲು ಭೇಟಿಯಾದ ತೇಜ್‌ರಾಜ್, ದೂರು ಸಲ್ಲಿಸಲು ಬಂದಿರುವುದಾಗಿ ಹೇಳಿದ್ದಾನೆ. ಅಲ್ಲಿ 25 ನಿಮಿಷ ಕಾದು, ನಂತರ ಒಳಗೆ ಹೋಗಿದ್ದಾನೆ.

ವಿಶ್ವನಾಥ್‌ಶೆಟ್ಟಿ ಅವರ ಮುಂದೆ ಹೋಗಿ ನಿಂತಿರುವ ಆತ, ‘ನಾನು ದಾಖಲಿಸಿದ್ದ ದೂರುಗಳನ್ನು ತನಿಖೆ ನಡೆಸದೆಯೇ ಇತ್ಯರ್ಥಗೊಳಿಸಲಾಗಿದೆ. ಅವುಗಳ ಮರುತನಿಖೆಯಾಗಬೇಕು’ ಎಂದು ಮನವಿ ಮಾಡಿದ್ದಾನೆ. ಅದಕ್ಕೆ ಅವರು, ವಿಚಾರಣೆ ನಡೆಸಿ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ಅಷ್ಟಕ್ಕೇ ತೃಪ್ತನಾಗದ ಆತ, ಸಾಕ್ಷ್ಯ ಸಮೇತ ದೂರು ಕೊಟ್ಟರೂ ಕ್ರಮ ತೆಗೆದುಕೊಂಡಿಲ್ಲ ಎನ್ನುತ್ತ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಈ ಅನಿರೀಕ್ಷಿತ ದಾಳಿಯಿಂದ ಆತಂಕಕ್ಕೆ ಒಳಗಾದ ಲೋಕಾಯುಕ್ತರು, ರಕ್ಷಣೆಗೆ ಕೂಗಿಕೊಂಡಿದ್ದಾರೆ. ತಕ್ಷಣ ಪಳನಿಸ್ವಾಮಿ, ಅಲ್ಲೇ ಇದ್ದ ಕಾನ್‌ಸ್ಟೆಬಲ್ ಸುಬ್ರಹ್ಮಣ್ಯ ಹಾಗೂ ಲೋಕಾಯುಕ್ತರ ಗನ್‌ಮ್ಯಾನ್ ‍ಪುರುಷೋತ್ತಮ್ ಒಳಗೆ ಹೋಗಿದ್ದಾರೆ. ಆರೋಪಿಯನ್ನು ಕಾನ್‌ಸ್ಟೆಬಲ್ ಹಿಡಿದುಕೊಂಡರೆ, ಉಳಿದಿಬ್ಬರು ಕುಸಿದು ಕುಳಿತಿದ್ದ ಲೋಕಾಯುಕ್ತರನ್ನು ಕುರ್ಚಿಯಲ್ಲೇ ಲಿಫ್ಟ್‌ವರೆಗೆ ತಳ್ಳಿಕೊಂಡು ಹೋಗಿದ್ದಾರೆ. ಅಲ್ಲಿಂದ ಲಿಫ್ಟ್‌ನಲ್ಲಿ ನೆಲಮಹಡಿಗೆ ಹೋಗಿ, ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮೂರೇ ನಿಮಿಷಗಳಲ್ಲಿ ಇಷ್ಟೂ ಘಟನೆ ನಡೆದು ಹೋಗಿದೆ.

ಸೈರನ್ ಒತ್ತಿದರು: ತನ್ನನ್ನು ಹಿಡಿಯಲು ಬಂದ ಕಾನ್‌ಸ್ಟೆಬಲ್‌ ಮೇಲೂ ಆರೋಪಿ ಚಾಕುವಿನಿಂದ ಹಲ್ಲೆಗೆ ಯತ್ನಿಸಿದ್ದ. ಅಲ್ಲದೇ, ಹತ್ತಿರ ಬಂದರೆ ಕೊಲ್ಲುವುದಾಗಿ ಬೆದರಿಸಿದ್ದ. ಈ ಹಂತದಲ್ಲಿ ಪಳನಿಸ್ವಾಮಿ, ಕಚೇರಿಯಲ್ಲಿದ್ದ ಸೈರನ್ ಒತ್ತಿ ಲೋಕಾಯುಕ್ತರನ್ನು ಹೊರಗೆ ಕರೆದುಕೊಂಡು ಹೋಗಿದ್ದರು. ಆ ಶಬ್ದ ಕೇಳುತ್ತಿದ್ದಂತೆಯೇ ಎಲ್ಲ ಸಿಬ್ಬಂದಿ ಕಚೇರಿ ಹತ್ತಿರ ಧಾವಿಸಿ ಆರೋಪಿಯನ್ನು ಹಿಡಿದುಕೊಳ್ಳಲು ಕಾನ್‌ಸ್ಟೆಬಲ್‌ಗೆ ನೆರವಾದರು.

ಕೊಲೆ ಯತ್ನ (ಐಪಿಸಿ 307) ಹಾಗೂ ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ (353) ಆರೋಪಗಳಡಿ ಎಫ್‌ಐಆರ್ ದಾಖಲಿಸಲಾಗಿದೆ. ‘ಪ್ರಕರಣ ರದ್ದುಗೊಳಿಸಿದ್ದರಿಂದ ನನಗೆ ಅನ್ಯಾಯವಾಯಿತು. ಅದೇ ಬೇಸರದಲ್ಲಿ ಚಾಕು ಇರಿದೆ’ ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾಗಿ ಪೊಲೀಸರು ಮಾಹಿತಿ ನೀಡಿದರು.

ಭದ್ರತಾ ವೈಫಲ್ಯ: ಇಂದು ಸಭೆ
ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಅವರಿಗೆ ಇರಿದಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಭದ್ರತಾ ವೈಫಲ್ಯಗಳ ಕುರಿತು ತುರ್ತು ಸಭೆ ನಡೆಸಿ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಗೃಹ ಸಚಿವ ರಾಮಲಿಂಗಾ ರೆಡ್ಡಿ ಮತ್ತು ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರಿಗೆ ಸೂಚಿಸಿದ್ದಾರೆ.

ಹಲ್ಲೆ ವಿಷಯ ಸಂಪುಟ ಸಭೆಯಲ್ಲೂ ಪ್ರತಿಧ್ವನಿಸಿದ್ದು, ವಿಧಾನಸೌಧ, ವಿಕಾಸಸೌಧದಲ್ಲಿರುವ ಭದ್ರತಾ ವ್ಯವಸ್ಥೆಯ ಲೋಪಗಳ ಬಗ್ಗೆ  ಮುಖ್ಯಮಂತ್ರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ.

ರಾಮಲಿಂಗಾರೆಡ್ಡಿ, ಜಯಚಂದ್ರ ಮತ್ತು ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಜೊತೆ ಬುಧವಾರ ಸಂಜೆ ತುರ್ತುಸಭೆ ನಡೆಸಿದ ಮುಖ್ಯಮಂತ್ರಿ, ಗುರುವಾರ ಈ ಕುರಿತು ವಿಶೇಷ ಸಭೆ ನಡೆಸುವಂತೆ ಸೂಚಿಸಿದ್ದಾರೆ.

ವಿಧಾನಸೌಧ ಮತ್ತು ವಿಕಾಸಸೌಧದ ಒಳಗೆ ಸಾರ್ವಜನಿಕರ ಪ್ರವೇಶಕ್ಕೆ ಸಮಯ ನಿಗದಿಪಡಿಸಿ ಕಟ್ಟುನಿಟ್ಟಾಗಿ ಪಾಲಿಸುವುದು, ಪ್ರವೇಶ ದ್ವಾರಗಳಲ್ಲಿ ಸಿಸಿಟಿವಿ ಕ್ಯಾಮೆರಾ, ಮೆಟಲ್‌ ಡಿಟೆಕ್ಟರ್‌ ಸೇರಿದಂತೆ ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸುವುದು ಸೇರಿದಂತೆ ಭದ್ರತಾ ವ್ಯವಸ್ಥೆ ಬಲಪಡಿಸುವ ಕುರಿತು ಈ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುವಂತೆ ಆದೇಶಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿ...

ಮಧ್ಯಾಹ್ನ 12.42: ಲೋಕಾಯುಕ್ತರ ಕಚೇರಿ ಆವರಣ ಪ್ರವೇಶಿಸಿದ ತೇಜ್‌ರಾಜ್

12.45: ನೋಂದಣಿ ಪುಸ್ತಕದಲ್ಲಿ ತನ್ನ ವಿವರ ಬರೆದು ಕಟ್ಟಡದೊಳಗೆ ಬಂದ

12.50: 3ನೇ ಮಹಡಿಗೆ ತೆರಳಿ, ಎಆರ್‌ಇ ಭೇಟಿಯಾಗಿ ಅರ್ಧ ತಾಸು ಮಾತುಕತೆ

1.20: ಲೋಕಾಯುಕ್ತರ ಕಚೇರಿ ಬಳಿ ಬಂದ ಆರೋಪಿ

1.45: ಕಚೇರಿಯೊಳಗೆ ಹೋಗಿ ವಿಶ್ವನಾಥ್ ಶೆಟ್ಟಿ ಜತೆ ಮಾತು ಪ್ರಾರಂಭಿಸಿದ

1.47: ಹೊಟ್ಟೆ ಹಾಗೂ ಎದೆಗೆ ಚಾಕು ಇರಿದು ಪರಾರಿಯಾಗಲು ಯತ್ನ

1.48: ಆರೋಪಿಯನ್ನು ಹಿಡಿದ ಕಾನ್‌ಸ್ಟೆಬಲ್. ಲೋಕಾಯುಕ್ತರನ್ನು ಆಸ್ಪತ್ರೆಗೆ ಕರೆದೊಯ್ದ ಸಿಬ್ಬಂದಿ

‘ಭದ್ರತಾ ಲೋಪವಾಗಿದ್ದರೆ ಕ್ರಮ’
‘ಲೋಕಾಯುಕ್ತ ಕಚೇರಿಯ ಭದ್ರತೆ ವಿಚಾರದಲ್ಲಿ ಏನಾದರೂ ಲೋಪವಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸುವಂತೆ ಹೆಚ್ಚುವರಿ ಪೊಲೀಸ್ ಕಮಿಷನರ್‌ಗೆ ಸೂಚನೆ ನೀಡಿದ್ದೇನೆ. ಅವರು ಕೊಡುವ ವರದಿಯನ್ನು ಲೋಕಾಯುಕ್ತರಿಗೆ ಸಲ್ಲಿಸುತ್ತೇನೆ. ಭದ್ರತೆ ವಿಷಯದಲ್ಲಿ ಲೋಪವಾಗಿದ್ದರೆ, ಸಂಬಂಧಪಟ್ಟ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ತಿಳಿಸಿದರು.

ಜೀವ ಉಳಿಸಿದ ಕೋಟ್
ವಿಶ್ವನಾಥ್‌ ಶೆಟ್ಟಿ ಕೋಟ್ ಧರಿಸಿದ್ದರು. ಇದರಿಂದಾಗಿ, ಆರೋಪಿ ಮೊದಲ ಸಲ ಚೂರಿ ಇರಿದಾಗ ಅದು ಹೊಟ್ಟೆಯ ಆಳಕ್ಕೆ ಹೋಗಿರಲಿಲ್ಲ. ಕೊನೆಗೆ ಇನ್ನೊಮ್ಮೆ ಚುಚ್ಚಿದಾಗ, ನಾಲ್ಕು ಇಂಚು ಆಳಕ್ಕೆ ಹೊಕ್ಕಿತ್ತು. ಅಲ್ಲದೆ, ಚಾಕುವಿನ ತುದಿ ಮುರಿದು ಹೊಟ್ಟೆಯಲ್ಲೇ ಉಳಿದಿತ್ತು. ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಅದನ್ನು ಹೊರತೆಗೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.